ವಿಧಾನಸಭೆಯಲ್ಲಿ ʼಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳ ವಿಧೇಯಕʼ ಅಂಗೀಕಾರ

Update: 2024-02-21 14:42 GMT

ಬೆಂಗಳೂರು : ರಾಜ್ಯದಲ್ಲಿರುವ ಗ್ರೂಪ್-ಎ ದೇವಸ್ಥಾನಗಳ ಕ್ಷೇತ್ರದ ವ್ಯಾಪ್ತಿಯೊಳಗೆ ಯಾತ್ರಾರ್ಥಿಗಳಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಲು ಹಾಗೂ ಅವರಿಗೆ ಸುರಕ್ಷತೆಯನ್ನು ಕಲ್ಪಿಸಲು ಜಿಲ್ಲಾಮಟ್ಟದ ಹಾಗೂ ರಾಜ್ಯ ಉನ್ನತ ಮಟ್ಟದ ಸಮಿತಿಯನ್ನು ರಚಿಸುವ ಉದ್ದೇಶ ಹೊಂದಿರುವ 2024ನೆ ಸಾಲಿನ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ(ತಿದ್ದುಪಡಿ) ವಿಧೇಯಕಕ್ಕೆ ಬುಧವಾರ ವಿಧಾನಸಭೆಯಲ್ಲಿ ಅಂಗೀಕಾರ ಲಭಿಸಿತು.

ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಜಿಲ್ಲಾಮಟ್ಟದ ಸಮಿತಿ ಹಾಗೂ ರಾಜ್ಯ ಉನ್ನತ ಮಟ್ಟದ ಸಮಿತಿಯು ಮುಜುರಾಯಿ ಸಚಿವರ ಅಧ್ಯಕ್ಷತೆಯಲ್ಲಿ ರಚನೆಯಾಗಲಿದೆ. ರಾಜ್ಯ ಉನ್ನತ ಮಟ್ಟದ ಸಮಿತಿಯು ಜಿಲ್ಲಾ ಮಟ್ಟದ ಸಮಿತಿ ಸಲ್ಲಿಸಿದ ಪ್ರಸ್ತಾವನೆಯನ್ನು ಪರಿಶೀಲಿಸಿ, ಅನುಮೋದಿಸಲಿದೆ. ಜಿಲ್ಲಾ ಮಟ್ಟದ ಸಮಿತಿಯು 25 ಲಕ್ಷ ರೂ.ಗಳಿಗೂ ಹೆಚ್ಚಿನ ಮೊತ್ತದ ಯಾವುದೇ ಕಾಮಗಾರಿಯನ್ನು ಕೈಗೊಳ್ಳಬೇಕಾದರೂ ರಾಜ್ಯ ಉನ್ನತ ಮಟ್ಟದ ಸಮಿತಿಯ ಅನುಮೋದನೆ ಪಡೆಯಬೇಕು ಎಂದು ಮುಜುರಾಯಿ ಸಚಿವ ರಾಮಲಿಂಗಾರೆಡ್ಡಿ ವಿಧೇಯಕದ ಕುರಿತು ವಿವರಣೆ ನೀಡಿದರು.

ಯಾವುದೆ ಅಧಿಸೂಚಿತ ಧಾರ್ಮಿಕ ಸಂಸ್ಥೆಗಳ ಪಾರಂಪರಿಕ ಮತ್ತು ಐತಿಹಾಸಿಕ ಸ್ಮಾರಕಗಳ ಅಥವಾ ಕಟ್ಟಡಗಳ ದುರಸ್ತಿ ಹಾಗೂ ಜೀರ್ಣೋದ್ಧಾರ ಕಾಮಗಾರಿಗಳನ್ನು, ವೆಚ್ಚವನ್ನು ಸಂಸ್ಥೆಗಳ ನಿಧಿಗಳಿಂದ, ಭಕ್ತಾದಿಗಳ ದೇಣಿಗೆಗಳಿಂದ ಅಥವಾ ಯಾವುದೆ ಇತರೆ ಮೂಲದಿಂದ ಭರಿಸಲು ಸಹ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿ ಇಲಾಖೆ ಆಯುಕ್ತರ ಪೂರ್ವಾನುಮತಿ ಪಡೆಯುವುದು ಅಗತ್ಯ ಎಂದು ಅವರು ಹೇಳಿದರು.

ರಾಜ್ಯದಲ್ಲಿ ಎ, ಬಿ ಮತ್ತು ಸಿ ದರ್ಜೆಯ ಒಟ್ಟು ಸುಮಾರು 35 ಸಾವಿರ ದೇವಸ್ಥಾನಗಳಿಗೆ. 10 ರಿಂದ 1 ಕೋಟಿ ರೂ.ವರೆಗೆ ವಾರ್ಷಿಕ ಆದಾಯ ಇರುವ ದೇವಸ್ಥಾನಗಳು ಕೇಂದ್ರೀಯ ನಿಧಿಗೆ ಶೇ.5ರಷ್ಟು ಹಾಗೂ 1 ಕೋಟಿ ರೂ.ಗಳಿಗಿಂತ ಹೆಚ್ಚಿನ ಆದಾಯ ಇರುವ ದೇವಸ್ಥಾನಗಳು ಶೇ.10ರಷ್ಟು ಕೊಡುಗೆಯನ್ನು ನೀಡಬೇಕು ಎಂದು ಈ ವಿಧೇಯಕದಲ್ಲಿ ತಿದ್ದುಪಡಿ ತರಲಾಗಿದೆ ರಾಮಲಿಂಗಾರೆಡ್ಡಿ ಹೇಳಿದರು.

ಈ ದೇವಾಲಯಗಳಲ್ಲಿ ಸುಮಾರು 40 ಸಾವಿರ ಅರ್ಚಕರು ಇದ್ದಾರೆ. ಅವರಿಗೆ ತಸ್ತಿಕ್ ಹಣ ವಾರ್ಷಿಕ 60 ಸಾವಿರ ರೂ. ನೀಡಲಾಗುತ್ತದೆ. ಅರ್ಚಕರು ಮೃತಪಟ್ಟರೆ ಅವರ ಕುಟುಂಬದವರಿಗೆ 2 ಲಕ್ಷ ರೂ.ಗಳನ್ನು ನೀಡಲಾಗುತ್ತದೆ. ಅವರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಪಿಯುಸಿವರೆಗೆ 5 ಸಾವಿರ ರೂ., ಸ್ನಾತಕೋತ್ತರ, ವೃತ್ತಿಪರ ಕೋರ್ಸುಗಳ ಅಧ್ಯಯನ ವೇಳೆ 50 ಸಾವಿರ ರೂ.ವರೆಗೆ ಆರ್ಥಿಕ ನೆರವು ನೀಡಲಾಗುತ್ತಿದೆ ಅವರು ಹೇಳಿದ್ದರು.

ಈ ವೇಳೆ ಮಧ್ಯಪ್ರವೇಶಿಸಿದ ಸ್ಪೀಕರ್ ಯು.ಟಿ.ಖಾದರ್, ದೇವಸ್ಥಾನಗಳ ಅರ್ಚಕರಿಗೆ ನೆರವು ನೀಡುತ್ತಿರುವುದು ಒಳ್ಳೆಯ ಸಂಗತಿ. ಅದರ ಜೊತೆಗೆ, ನಮ್ಮ ಭಾಗದಲ್ಲಿ ದೈವಸ್ಥಾನಗಳಲ್ಲಿ ಪಾತ್ರಿಗಳಿರುತ್ತಾರೆ. ಅವರಿಗೂ ಅಗತ್ಯ ಸೌಲಭ್ಯಗಳು ಸಿಗಬೇಕು ಹಾಗೂ ದೈವಸ್ಥಾನಗಳ ಅಭಿವೃದ್ಧಿಯೂ ಆಗಬೇಕು ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ರಾಮಲಿಂಗಾರೆಡ್ಡಿ, ಅರ್ಚಕರಿಗೆ ಸಿಗುವ ಸೌಲಭ್ಯಗಳನ್ನು ಪಾತ್ರಿಗಳಿಗೂ ಕಲ್ಪಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News