ಭೂ ಕಂದಾಯ ತಿದ್ದುಪಡಿ ವಿಧೇಯಕ ಅಂಗೀಕಾರ

Update: 2024-02-23 14:04 GMT

ಬೆಂಗಳೂರು: ಬಗರ್ ಹುಕ್ಕುಂ ಸಮಿತಿಯ ಅಧ್ಯಕ್ಷರಾಗಲು ವಿಧಾನಸಭಾ ಸದಸ್ಯರು ಆಸಕ್ತಿ ತೋರದಿದ್ದರೆ ಅವರ ಲಿಖಿತ ಮನವಿ ಮೇರೆಗೆ ಬೇರೊಬ್ಬರನ್ನು ಬಗರ್ ಹುಕ್ಕುಂ ಸಮಿತಿಯ ಸದಸ್ಯರನ್ನಾಗಿಸಲು ಅವಕಾಶ ನೀಡುವ ಕರ್ನಾಟಕ ಭೂ ಕಂದಾಯ ತಿದ್ದುಪಡಿ ವಿಧೇಯಕ-2024ಕ್ಕೆ ವಿಧಾನಸಭೆಯಲ್ಲಿ ಅಂಗೀಕಾರ ದೊರೆಯಿತು.

ಶುಕ್ರವಾರ ವಿಧಾನಸಭೆಯಲ್ಲಿ ಕೇಂದ್ರದ ವಿರುದ್ಧ ನಿರ್ಣಯಗಳನ್ನು ವಾಪಸ್ ಪಡೆಯುವಂತೆ ಆಗ್ರಹಿಸಿ ಪ್ರತಿಪಕ್ಷಗಳ ನಡೆಸುತ್ತಿದ್ದ ಧರಣಿ ಮಧ್ಯೆಯೇ ಕಂದಾಯ ಸಚಿವ ಕೃಷ್ಣಭೈರೇಗೌಡ, ಬಗರ್ ಹುಕ್ಕುಂ ಸಮಿತಿಗೆ ಶಾಸಕರು ಅಧ್ಯಕ್ಷ ಅಥವಾ ಸದಸ್ಯರಾಗಲು ಆಸಕ್ತಿ ತೋರದಿದ್ದರೆ ಅವರ ಲಿಖಿತ ಮನವಿ ಮೇರೆಗೆ ಬೇರೊಬ್ಬರನ್ನು ಅಧ್ಯಕ್ಷ,ಸದಸ್ಯನನ್ನಾಗಿಸಲು ಈ ತಿದ್ದುಪಡಿ ವಿಧೇಯಕ ಅವಕಾಶ ನೀಡುತ್ತದೆ ಎಂದು ಲೇಖನ ಬಗ್ಗೆ ವಿವರ ನೀಡಿದರು.

ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಸಚಿವರು, ವಿಪಕ್ಷ ನಾಯಕರು, ಕೆಲ ಹಿರಿಯ ಶಾಸಕರುಗಳು ಕಾರ್ಯ ಒತ್ತಡದಿಂದ ಬಗರ್ ಹುಕ್ಕುಂ ಸಮಿತಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುವುದು ಕಷ್ಟ ಸಾಧ್ಯವಾಗುತ್ತದೆ. ಹೀಗಾಗಿ, ಬಗರ್ ಹುಕ್ಕುಂ ಸಮಿತಿಯ ಅಧ್ಯಕ್ಷರಾಗಲು ಕಾರ್ಯದ ಒತ್ತಡ ಕಾರಣ ಆಸಕ್ತಿ ತೋರದ ಶಾಸಕರ ಲಿಖಿತ ಮನವಿ ಮೇರೆಗೆ ಅದೇ ಕ್ಷೇತ್ರದ ಸಾರ್ವಜನಿಕರೊಬ್ಬರನ್ನು ಬಗರ್ ಹುಕ್ಕಂ ಸಮಿತಿಯ ಸದಸ್ಯರನನ್ನಾಗಿಸಲು ಅವಕಾಶ ಕಲ್ಪಿಸುವ ಈ ಕಂದಾಯ ತಿದ್ದುಪಡಿ ವಿಧೇಯಕಕ್ಕೆ ಸದನ ಒಪ್ಪಿಗೆ ನೀಡಬೇಕು ಎಂದು ಮನವಿ ಮಾಡಿದರು.

ಈ ವಿಧೇಯಕವನನ್ನು ಸಭಾಧ್ಯಕ್ಷ ಯು.ಟಿ.ಖಾದರ್ ಅವರು, ಬಿಜೆಪಿ ಸದಸ್ಯರ ಧರಣಿ, ಗದ್ದಲದ ನಡುವೆಯೇ ಮತಕ್ಕೆ ಹಾಕಿದಾಗ ಸದನ ಧ್ವನಿ ಮತದಿಂದ ಈ ವಿಧೇಯಕಕ್ಕೆ ಒಪ್ಪಿಗೆ ದೊರೆಯಿತು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News