ಕಾಂಗ್ರೆಸ್‌ನ ಜಾತಿ ರಾಜಕಾರಣವನ್ನು ಹರಿಯಾಣ ಜನತೆ ತಿರಸ್ಕರಿಸಿದ್ದಾರೆ : ಬಸವರಾಜ ಬೊಮ್ಮಾಯಿ

Update: 2024-10-08 10:05 GMT

ಬೆಂಗಳೂರು: ಹರಿಯಾಣದಲ್ಲಿ ಬಿಜೆಪಿ ಸಂಪೂರ್ಣ ಬಹುಮತ ಪಡೆದಿರುವುದು ಇಡೀ ದೇಶದ ರಾಜಕಾರಣ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎನ್ನುವುದಕ್ಕೆ ದಿಕ್ಸೂಚಿಯಾಗಿದೆ. ಕಾಂಗ್ರೆಸ್‌ನ ಜಾತಿ ರಾಜಕಾರಣವನ್ನು ಹರಿಯಾಣ ಜನರು ತಿರಸ್ಕಾರ ಮಾಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ಬೆಂಗಳೂರಿನಲ್ಲಿ ಬಿಜೆಪಿ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹರಿಯಾಣದಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಪಡೆಯಲು ನಮ್ಮ ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವ ಹಾಗೂ ಸ್ಥಳೀಯವಾಗಿ ಪಕ್ಷದ ಸಂಘಟನಾ ಶಕ್ತಿ ಕಾರಣ‌. ಲೋಕಸಭೆ ಚುನಾವಣೆಯ ನಂತರ ನಡೆಯುತ್ತಿರುವ ಮೊದಲ ಚುನಾವಣೆ ಇದಾಗಿದ್ದು, ರಾಜಧಾನಿ ದಿಲ್ಲಿಗೆ ಹತ್ತಿರ ಇರುವ ರಾಜ್ಯದ ಚುನಾವಣೆ ದೇಶದ ರಾಜಕಾರಣ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎನ್ನುವುದನ್ನು ಸೂಚಿಸುತ್ತಿದೆ. ಕಾಂಗ್ರೆಸ್‌ನ ಜಾತಿ ರಾಜಕಾರಣವನ್ನು ಹರಿಯಾಣದ ಜನತೆ ತಿರಸ್ಕಾರ ಮಾಡಿದ್ದಾರೆ. ಕಾಂಗ್ರೆಸ್‌ನವರು ಬಿಜೆಪಿಯನ್ನು ಸಂವಿಧಾನ ವಿರೋಧಿ ಎಂದು ಬಿಂಬಿಸಲು ಪ್ರಯತ್ನ ಮಾಡಿದರು. ಆದರೆ, ಜನರು ʼಸಬ್ ಕೆ ಸಾತ್ ಸಬ್ ಕಾ ವಿಕಾಸ್ʼ, ಶ್ರೇಷ್ಠ ಭಾರತ, ಅಮೃತ ಕಾಲ ವಿಚಾರಗಳಿಗೆ ಜನರು ಬೆಂಬಲ ಕೊಟ್ಟಿದ್ದಾರೆ. ಮಹಾರಾಷ್ಡದಲ್ಲಿಯೂ ಇದೆ ರೀತಿಯ ಫಲಿತಾಂಶ ಬರುವ ವಿಶ್ವಾಸ ಇದೆ‌ ಎಂದು ಹೇಳಿದರು.

ಇನ್ನು ಜಮ್ಮು ಕಾಶ್ಮೀರ ಸಾಮಾಜಿಕವಾಗಿ ಸೂಕ್ಷ ರಾಜ್ಯ. ಅಲ್ಲಿ ಕಣಿವೆ ಹೊರಗೆ ನಮಗೆ ಬೆಂಬಲ ಸಿಕ್ಕಿದೆ. ಇನ್ನೂ ರಾಜಕಾರಣ ಇದೆ. ಇದೇ ಅಂತಿಮ ಅಲ್ಲ. ಹರಿಯಾಣದಲ್ಲಿನ ಸೋಲಿನ ಬಗ್ಗೆ ಕಾಂಗ್ರೆಸ್ ಗೌರವಯುತವಾಗಿ ಒಪ್ಪಿಕೊಂಡರೆ ಗೌರವ ಕೊಡುತ್ತೇವೆ, ಕುಂಟು ನೆಪ ಹೇಳಿದರೆ ಎದುರು ಉತ್ತರ ಕೊಡುತ್ತೇವೆ ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News