ಸಿದ್ದರಾಮಯ್ಯ ಅನರ್ಹತೆ ಕೋರಿ ಹೈಕೋರ್ಟ್ ನಲ್ಲಿ ಅರ್ಜಿ

Update: 2023-07-21 12:25 GMT

ಬೆಂಗಳೂರು, ಜು.21: ಈ ಬಾರಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಅಕ್ರಮಗಳನ್ನು ಎಸಗುವ ಮೂಲಕ ವರುಣಾ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿರುವ ಶಾಸಕ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಪ್ರಜಾಪ್ರತಿನಿಧಿ ಕಾಯಿದೆ ಅನ್ವಯ ಅನರ್ಹಗೊಳಿಸಬೇಕು ಎಂದು ಕೋರಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಕೆಯಾಗಿದೆ.

ವರುಣಾ ವಿಧಾನಸಭಾ ಕ್ಷೇತ್ರದ ಕೂಡನಹಳ್ಳಿಯ ಕೆ.ಶಂಕರ್ ಅವರು ಸಲ್ಲಿಸಿರುವ ಚುನಾವಣಾ ಅರ್ಜಿಯ ವಿಚಾರಣೆ ನ್ಯಾಯಮೂರ್ತಿ ಎಸ್.ಸುನಿಲ್ ದತ್ ಯಾದವ್ ಅವರಿದ್ದ ನ್ಯಾಯಪೀಠದಲ್ಲಿ ನಡೆಯಿತು. ನ್ಯಾಯಪೀಠವು, ಕಚೇರಿ ಆಕ್ಷೇಪಣೆಗಳನ್ನು ಸರಿಪಡಿಸುವಂತೆ ಸೂಚನೆ ನೀಡಿ ವಿಚಾರಣೆಯನ್ನು ಮುಂದಿನ ಶುಕ್ರವಾರಕ್ಕೆ ಮುಂದೂಡಿತು.

ಪ್ರಜಾಪ್ರತಿನಿಧಿ ಕಾಯಿದೆ ಸೆಕ್ಷನ್ 123(1) ಪ್ರಕಾರ ಗ್ಯಾರಂಟಿ ಯೋಜನೆಗಳ ಮೂಲಕ ಮತದಾರರಿಗೆ ಆಮಿಷ ಒಡ್ಡುವುದು ಲಂಚಕ್ಕೆ ಸಮ. ಸೆಕ್ಷನ್ 123(2) ಪ್ರಕಾರ ಇದು ಮತದಾರರ ಮೇಲೆ ಪ್ರಭಾವ ಬೀರುವ ಯತ್ನವಾಗಿದೆ. ಸೆಕ್ಷನ್ 123(4)ರ ಪ್ರಕಾರ ಅದನ್ನು ಪ್ರಚಾರ ಮಾಡುವುದೂ ಅಪರಾಧ. ಅಲ್ಲದೇ, ಇದನ್ನು ಅಭ್ಯರ್ಥಿಯ ಚುನಾವಣಾ ಲೆಕ್ಕಕ್ಕೆ ಸೇರ್ಪಡೆ ಮಾಡದಿರುವುದು ಸೆಕ್ಷನ್ 123 (6)ರ ಅಪರಾಧವಾಗಿದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

ಪ್ರಣಾಳಿಕೆ ಸಿದ್ಧಪಡಿಸಿದವರು, ಅದನ್ನು ಬಳಸಿ ಮತ ಕೇಳಿದ ಎಲ್ಲರ ಆಯ್ಕೆಯೂ ಅಸಿಂಧು ಆಗಬೇಕಾಗುತ್ತದೆ. ಆದರೆ, ಕಾನೂನಿನಲ್ಲಿ ಎಲ್ಲರನ್ನೂ ಪ್ರತಿವಾದಿ ಮಾಡಲು ಸಾಧ್ಯವಾಗುವುದಿಲ್ಲ. ಹೀಗಾಗಿ, ಸಿದ್ದರಾಮಯ್ಯ ಅವರನ್ನು ಮಾತ್ರ ಪ್ರತಿವಾದಿಯನ್ನಾಗಿ ಮಾಡಲಾಗಿದೆ ಎಂದು ವಿವರಿಸಲಾಗಿದೆ.

ವಿಧಾನಸಭೆ ಚುನಾವಣೆಗೂ ಮುನ್ನ ರಾಜ್ಯ ಕಾಂಗ್ರೆಸ್ ಸರ್ವಜನಾಂಗದ ಶಾಂತಿಯ ತೋಟ ಎನ್ನುವ ಶೀರ್ಷಿಕೆಯಡಿ ತಯಾರಿ ಸಮಿತಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ನೇತೃತ್ವದಲ್ಲಿ ತನ್ನ ಪ್ರಣಾಳಿಕೆ ಬಿಡುಗಡೆ ಮಾಡಿತ್ತು. ಪ್ರಣಾಳಿಕೆಯಲ್ಲಿ ಐದು ಗ್ಯಾರಂಟಿ ಯೋಜನೆಗಳು ಸೇರಿ ಇತರೆ ಯೋಜನೆಗಳ ಬಗ್ಗೆ ಭರವಸೆ ನೀಡಿತ್ತು.

ಐದು ಗ್ಯಾರಂಟಿ ಯೋಜನೆಗಳು: ಗೃಹ ಜ್ಯೋತಿ ಯೋಜನೆ, ಗೃಹ ಲಕ್ಷ್ಮಿ, ಅನ್ನಭಾಗ್ಯ, ಶಕ್ತಿ, ಯುವನಿಧಿ ಯೋಜನೆಯನ್ನು ಘೋಷಿಸಿತ್ತು. ವಿಧಾನಸಭೆ ಚುನಾವಣೆಯಲ್ಲಿ ಗ್ಯಾರಂಟಿಗಳ ಮೂಲಕ ಮತದಾರರಿಗೆ ಆಮಿಷವೊಡ್ಡಲಾಗಿದೆ ಎಂದು ಪ್ರಸ್ತಾಪಿಸಿ ಅರ್ಜಿ ಸಲ್ಲಿಕೆ ಮಾಡಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News