ಬೆಂಗಳೂರು ಟೆಕ್ ಶೃಂಗಸಭೆ | ನವೋದ್ಯಮಗಳ ಸರ್ವತೋಮುಖ ಅಭಿವೃದ್ಧಿಗೆ ಆದ್ಯತೆ : ಸಚಿವ ಪ್ರಿಯಾಂಕ್ ಖರ್ಗೆ

Update: 2024-11-16 15:54 GMT

ಬೆಂಗಳೂರು : ರಾಜ್ಯ ಸರಕಾರದ ಎಲೆಕ್ಟ್ರಾನಿಕ್ಸ್, ಐಟಿ ಮತ್ತು ಬಿಟಿ ಇಲಾಖೆಯು ಸಾಫ್ಟ್‌ವೇರ್ ಟೆಕ್ನಾಲಜಿ ಪಾಕ್ರ್ಸ್ ಆಫ್ ಇಂಡಿಯಾದ ಸಹಭಾಗಿತ್ವದೊಂದಿಗೆ ನ.19 ರಿಂದ 21ರ ವರೆಗೆ ಆಯೋಜಿಸಿರುವ 27ನೆ ಬೆಂಗಳೂರು ಟೆಕ್ ಶೃಂಗಸಭೆಯಲ್ಲಿ ನವೋದ್ಯಮಗಳ ಸರ್ವತೋಮುಖ ಅಭಿವೃದ್ಧಿಯನ್ನು ಗುರಿಯಾಗಿಸಿಕೊಂಡು ಜಾಗತಿಕ ಪಾಲುದಾರಿಕೆಗೆ ಆದ್ಯತೆ ನೀಡಲಾಗುತ್ತದೆ ಎಂದು ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.

ಶನಿವಾರ ಬೆಂಗಳೂರು ಅರಮನೆ ಮೈದಾನದಲ್ಲಿ ನಡೆಯಲಿರುವ ಈ ಶೃಂಗಸಭೆ ಕುರಿತ ಸಿದ್ಧತೆಗಳನ್ನು ಪರಿಶೀಲಿಸಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅನ್ಬೌಂಡ್ ಎಂಬ ಥೀಮ್ ನಡಿ ಬೆಂಗಳೂರು ಟೆಕ್ ಶೃಂಗಸಭೆಯನ್ನು ಆಯೋಜಿಸಲಾಗಿದೆ. ತಾಂತ್ರಿಕ ಉತ್ಕೃಷ್ಟತೆ, ನಾವೀನ್ಯತೆ ಮತ್ತು ಬೆಳವಣಿಗೆಯಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ ಎಂದು ಹೇಳಿದರು.

ನವೋದ್ಯಮಗಳ ಬೆಳವಣಿಗೆ ಮೂಲಕ ಕರ್ನಾಟಕದ ಹಿರಿಮೆ ಹೆಚ್ಚಿಸಲು ಆಯೋಜಿಸಿರುವ ಇಂತಹ ಅದ್ಭುತ ಕಾರ್ಯಕ್ರಮದಲ್ಲಿ ಎಲ್ಲರೂ ಭಾಗವಹಿಸಿ ಭವಿಷ್ಯದ ಟೆಕ್ ಕರ್ನಾಟಕವನ್ನು ರೂಪಿಸಲು ಕೈಜೋಡಿಸಬೇಕೆಂದು ಕೋರುತ್ತೇನೆ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದರು.

ಬೆಂಗಳೂರು ಟೆಕ್ ಶೃಂಗಸಭೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಜರ್ಮನಿಯ ಆರ್ಥಿಕ ವ್ಯವಹಾರ ಮತ್ತು ಫೆಡರಲ್ ಸಚಿವಾಲಯದ ಸ್ಟಾರ್ಟಪ್ಪಗಳ ಆಯುಕ್ತ ಡಾ.ಅನ್ನಾ ಕ್ರಿಸ್ಟ್‌ ಮನ್ ಮತ್ತು ಫ್ರಾನ್ಸ್‌ ನ ಆರ್ಥಿಕ ಅಭಿವೃದ್ಧಿಯ ರಿಕವರಿ ವಿಭಾಗದ ಉಪಾಧ್ಯಕ್ಷೆ ಅಲೆಕ್ಸಾಂಡ್ರಾ ಡಬ್ಲಾಂಚೆ, ಟೆಕ್ಸಾಸ್ ಇನ್ಸ್‍ಟ್ರ್ರುಮೆಂಟ್ಸ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಸಂತೋಷ್ ಕುಮಾರ್ ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದರು.

ಸ್ವಿಗ್ಗಿ ಸಂಸ್ಥೆಯ ಸಹ-ಸ್ಥಾಪಕರು ಮತ್ತು ಸಿಇಒ ಶ್ರೀಹರ್ಷ ಮೆಜೆಟಿ, ಬಯೋಕಾನ್ ಸಂಸ್ಥಾಪಕಿ ಡಾ.ಕಿರಣ್ ಮಜುಂದಾರ್ ಶಾ, ಆಕ್ಸಿಲರ್ ವೆಂಚರ್ಸ್ ಅಧ್ಯಕ್ಷ ಕ್ರಿಸ್ ಗೋಪಾಲಕೃಷ್ಣನ್, ವಿಷನ್ ಗ್ರೂಪ್ ಮುಖ್ಯಸ್ಥ ಪ್ರಶಾಂತ್ ಪ್ರಕಾಶ್ ಸೇರಿದಂತೆ ಇನ್ನಿತರು ಭಾಗವಹಿಸಲಿದ್ದಾರೆ ಎಂದು ಅವರು ಹೇಳಿದರು.

ಉದ್ಘಾಟನಾ ಸಮಾರಂಭದಲ್ಲಿ ಸ್ವಿಟ್ಜರ್‌ ಲ್ಯಾಂಡ್ ಮತ್ತು ಫಿನ್‍ಲ್ಯಾಂಡ್‍ನೊಂದಿಗೆ ಎರಡು ತಿಳಿವಳಿಕೆ ಪತ್ರಗಳಿಗೆ ಸಹಿ ಮತ್ತು ಶಾರ್ಜಾ ಇನ್ನೋವೇಶನ್ ಅಥಾರಿಟಿ (ಯುಎಇ) ಯೊಂದಿಗೆ ಆಳವಾದ ಜಾಗತಿಕ ಸಹಯೋಗವನ್ನು ಉತ್ತೇಜಿಸುವ ಉದ್ದೇಶದ ಪತ್ರಕ್ಕೆ ಸಹಿ ಹಾಕಲಾಗುತ್ತದೆ. ಆಸ್ಟ್ರೇಲಿಯ, ಯುಕೆ, ಫ್ರಾನ್ಸ್, ಆಸ್ಟ್ರಿಯಾ, ಇಯು, ಡೆನ್ಮಾರ್ಕ್, ಫಿನ್‍ಲ್ಯಾಂಡ್, ಪೋಲೆಂಡ್, ಜಪಾನ್, ಜರ್ಮನಿ, ಸ್ವಿಟ್ಜರ್‌ ಲ್ಯಾಂಡ್, ಇಸ್ರೇಲ್ ಮತ್ತು ಯುಎಸ್ ಎ ಸೇರಿದಂತೆ 15 ಕ್ಕೂ ಹೆಚ್ಚು ದೇಶಗಳ ಉನ್ನತ ಮಟ್ಟದ ನಿಯೋಗಗಳು, ಸರಕಾರಿ ಅಧಿಕಾರಿಗಳು, ಉದ್ಯಮದ ಮುಖಂಡರು ಮತ್ತು ನವೋದ್ಯಮಿಗಳು ಭಾಗವಹಿಸಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು.

ಐಟಿ, ಡೀಪ್ ಟೆಕ್ ಮತ್ತು ಟ್ರೆಂಡ್ಸ್, ಬಯೋಟೆಕ್, ಹೆಲ್ತ್ ಟೆಕ್, ಸ್ಟಾರ್ಟ್ ಅಪ್ ಎಕೋಸಿಸ್ಟಮ್, ಗ್ಲೋಬಲ್ ಇನೋವೇಶನ್ ಅಲೈಯನ್ಸ್, ಭಾರತ ಮತ್ತು ಯುಎಸ್ ಎ ಟೆಕ್ ಕಾನ್ ಕ್ಲೇವ್ ಮತ್ತು ಹೊಸದಾಗಿ ಪರಿಚಯಿಸಲಾದ ಎಲೆಕ್ಟ್ರೋ-ಸೆಮಿಕಾನ್ ಟ್ರ್ಯಾಕ್ ಬಗ್ಗೆ ಸಮ್ಮೇಳನ ನಡೆಯಲಿದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.

ಜಾನ್ಸ್ ಹಾಪ್ಕಿನ್ಸ್, ರೈಸ್ ಮತ್ತು ಸ್ಟ್ಯಾನ್‍ ಫೋರ್ಡ್ ಲೈಫ್ ಸೈನ್ಸಸ್‍ನಂತಹ ಹೆಸರಾಂತ ಯುಎಸ್ ವಿಶ್ವವಿದ್ಯಾನಿಲಯಗಳೊಂದಿಗೆ ಇಂಡಸ್ಟ್ರಿ-ಅಕಾಡೆಮಿಯಾ-ಆರ್ ಅಂಡ್ ಡಿ ಸಂಪರ್ಕದ ದುಂಡುಮೇಜಿನ ಚರ್ಚೆಯನ್ನು ರಾಜ್ಯದ ವಿವಿಗಳ ಸಹಯೋಗದಲ್ಲಿ ಆಯೋಜಿಸಲಾಗಿದೆ. ಸ್ಥಳೀಯ ಉದ್ಯೋಗಿಗಳನ್ನು ಕೌಶಲ್ಯಗೊಳಿಸಲು ದೊಡ್ಡ ಕಂಪನಿಗಳೊಂದಿಗೆ ತಿಳಿವಳಿಕಾ ಒಪ್ಪಂದಗಳಿಗೆ ಸಹಿ ಹಾಕಲಾಗುತ್ತದೆ ಎಂದು ಅವರು ತಿಳಿಸಿದರು.

ಸ್ಟಾರ್ಟ್‌ಅಪ್ ಪೆವಿಲಿಯನ್ ಹೆಲ್ತ್‌ ಟೆಕ್, ಅಗ್ರಿಟೆಕ್, ಮ್ಯಾನುಫ್ಯಾಕ್ಚರಿಂಗ್, ಎಡ್ಯುಟೆಕ್ ಒಳಗೊಂಡಂತೆ ಅತ್ಯಾಧುನಿಕ ಉತ್ಪನ್ನಗಳು ಮತ್ತು ಟೆಕ್ ಪರಿಹಾರಗಳನ್ನು ಪ್ರದರ್ಶಿಸುವ ಸ್ಟಾರ್ಟ್‍ಅಪ್‍ಗಳನ್ನು ಪ್ರೋತ್ಸಾಹಿಸಲಾಗುತ್ತದೆ. ಈ ಶೃಂಗಸಭೆ ಭಾರತ ಮತ್ತು ಹೊರಗಿನಿಂದ ಬರುವ 2500ಕ್ಕೂ ಹೆಚ್ವು ಸ್ಟಾರ್ಟ್‍ಅಪ್‍ಗಳಿಗೆ ಪ್ರಮುಖ ವೇದಿಕೆಯಾಗಲಿದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.

ಶೃಂಗಸಭೆಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದವರಿಗೆ ಎಸ್‍ಟಿಪಿಐ ಐಟಿ ರಫ್ತು ಪ್ರಶಸ್ತಿಗಳು, ಸ್ಮಾರ್ಟ್ ಬಯೋ ಪ್ರಶಸ್ತಿಗಳು ಮತ್ತು ಇಕೋಸಿಸ್ಟಮ್ ಎನೇಬ್ಲರ್ ಪ್ರಶಸ್ತಿಗಳು ಸೇರಿದಂತೆ ಪ್ರತಿಷ್ಠಿತ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗುತ್ತದೆ. ಗ್ರಾಮೀಣ ಐಟಿ ರಸಪ್ರಶ್ನೆಯ 25ನೇ ಆವೃತ್ತಿ ಮತ್ತು ಬಯೋಕ್ವಿಜ್ ಫೈನಲ್ ಕೂಡ ನಡೆಯಲಿದೆ. ಹೆಚ್ಚಿನ ವಿವರಗಳಿಗಾಗಿ www.bengalurutechsummit.com ಗೆ ಭೇಟಿ ನೀಡಿ ಎಂದು ಅವರು ಹೇಳಿದರು.


Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News