ಬರಗಾಲಕ್ಕೆ ತುತ್ತಾಗಿ ಸಂಕಷ್ಟದಲ್ಲಿರುವ ರಾಜ್ಯದ ರೈತರಿಗೆ ಇಲ್ಲಿಯವರೆಗೆ ಪೈಸೆ ಹಣವನ್ನೂ ನೀಡದ ಪ್ರಧಾನಿ ಮೋದಿ: ಸಿಎಂ ಸಿದ್ದರಾಮಯ್ಯ

Update: 2023-12-07 15:38 GMT

ಬೆಳಗಾವಿ: ಬರಗಾಲಕ್ಕೆ ತುತ್ತಾಗಿ ತೀವ್ರ ಸಂಕಷ್ಟದಲ್ಲಿರುವ ಕರ್ನಾಟಕದ ರೈತರಿಗೆ ಪರಿಹಾರ ನೀಡಬೇಕೆಂದು ತಿಂಗಳುಗಳಿಂದ ಮನವಿ ಸಲ್ಲಿಸಿ ಒತ್ತಾಯಿಸುತ್ತಿದ್ದರೂ ಇಲ್ಲಿಯವರೆಗೆ ಪೈಸೆ ಹಣವನ್ನೂ ನೀಡದ ಪ್ರಧಾನಿ ನರೇಂದ್ರ ಮೋದಿ ಕೀನ್ಯಾ ದೇಶದ ಕೃಷಿ ಕ್ಷೇತ್ರದ ಆಧುನೀಕರಣಕ್ಕಾಗಿ 250 ಮಿಲಿಯನ್ ಡಾಲರ್‌ಗಳಷ್ಟು ನೆರವು ನೀಡಿರುವುದನ್ನು ನೋಡಿದಾಗ ಸಹಜವಾಗಿಯೇ ಕನ್ನಡಿಗರ ಬಗ್ಗೆ ಕೇಂದ್ರ ಸರಕಾರಕ್ಕೆ ಯಾಕೆ ಇಷ್ಟೊಂದು ಅಸಡ್ಡೆ ಎಂಬ ಪ್ರಶ್ನೆ ಕೇಳಬೇಕಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಈ ಬಗ್ಗೆ Xನಲ್ಲಿ ಪೋಸ್ಟ್ ಮಾಡಿರುವ ಅವರು, ಸ್ವತಂತ್ರ ದೇಶವಾಗಿ ರೂಪು ಪಡೆದ ದಿನದಿಂದಲೂ ಸಂಕಷ್ಟಕ್ಕೆ ಸಿಲುಕಿರುವ ದೇಶಗಳಿಗೆ ನೆರವು ನೀಡುವ ಪರಂಪರೆಯನ್ನು ಭಾರತ ಮುಂದುವರಿಸಿಕೊಂಡು ಬಂದಿದ್ದು ಈ ಹಿನ್ನೆಲೆಯಲ್ಲಿ ನರೇಂದ್ರ ಮೋದಿ ಸರಕಾರ ಬೇರೆ ದೇಶಗಳ ಕಷ್ಟಕ್ಕೆ ನೆರವಾಗುವುದರ ಬಗ್ಗೆ ನಮ್ಮ ವಿರೋಧ ಇಲ್ಲ ಎಂದು ಹೇಳಿದ್ದಾರೆ.

ಆದರೆ , ಇದೇ ಔದಾರ್ಯ ಮತ್ತು ಕಾಳಜಿಯನ್ನು ನಮ್ಮದೇ ದೇಶದ ರಾಜ್ಯಗಳ ಬಗ್ಗೆ ಯಾಕೆ ಪ್ರಧಾನಿ ನರೇಂದ್ರ ಮೋದಿ ತೋರುತ್ತಿಲ್ಲ ಎನ್ನುವುದಷ್ಟೇ ನಮ್ಮ ಪ್ರಶ್ನೆ ಎಂದು ಸಿದ್ದರಾಮಯ್ಯ ಕೇಳಿದ್ದಾರೆ.

ಕರ್ನಾಟಕ ರಾಜ್ಯ ಈ ಬಾರಿ ತೀವ್ರ ಬರಗಾಲಕ್ಕೆ ತುತ್ತಾಗಿದ್ದು ರಾಜ್ಯ ಸರಕಾರ ತನ್ನ ಶಕ್ತಿ ಮೀರಿ ಪರಿಹಾರ ಕಾರ್ಯದಲ್ಲಿ ತೊಡಗಿಕೊಂಡಿದೆ. ಕೇಂದ್ರದ ಅಧಿಕಾರಿಗಳ ತಂಡವೇ ಬರ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿ ಸಮೀಕ್ಷೆ ಮಾಡಿಕೊಂಡು ಹೋಗಿ ವರದಿ ನೀಡಿದೆ ಎಂದು ಅವರು ಹೇಳಿದರು.

ರಾಜ್ಯ ಸರಕಾರ ಕೂಡಾ ಸಮೀಕ್ಷೆ ನಡೆಸಿ ತನ್ನ ವರದಿಯನ್ನು ಕೇಂದ್ರ ಸರಕಾರಕ್ಕೆ ಕಳುಹಿಸಿದೆ. ನಮ್ಮ ಕೃಷಿ ಮತ್ತು ಕಂದಾಯ ಸಚಿವರಿಬ್ಬರೂ ದಿಲ್ಲಿಗೆ ಭೇಟಿ ನೀಡಿ ಬರ ಪರಿಹಾರ ಬಿಡುಗಡೆಗೆ ಮನವಿ ಮಾಡಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು.

ರಾಜ್ಯ ಸರಕಾರದ ಇಷ್ಟೆಲ್ಲ ಪ್ರಯತ್ನದ ಹೊರತಾಗಿಯೂ ಕೇಂದ್ರ ಸರಕಾರ ಇದಕ್ಕೆ ಸಂಬಂಧಿಸಿದಂತೆ ಪ್ರಾಥಮಿಕ ಸಭೆಯನ್ನೂ ಕರೆದಿಲ್ಲ. ಭೇಟಿಗೆ ಅವಕಾಶ ನೀಡಬೇಕೆಂದು ಪ್ರಧಾನ ಮಂತ್ರಿಯವರಿಗೆ ಬರೆದ ಪತ್ರಕ್ಕೂ ಇಲ್ಲಿಯ ವರೆಗೆ ಪ್ರತಿಕ್ರಿಯೆ ಇಲ್ಲ ಎಂದು ಮುಖ್ಯಮಂತ್ರಿ ಹೇಳಿದರು.

ಬರಗಾಲದಿಂದಾಗಿ ರಾಜ್ಯದ 48.19 ಲಕ್ಷ ಎಕರೆ ಕೃಷಿ ಭೂಮಿಯಲ್ಲಿ ಆಗಿರುವ ಬೆಳೆನಷ್ಟಕ್ಕಾಗಿ ಕನಿಷ್ಠ 4,663 ಕೋಟಿ ರೂಪಾಯಿ ಪರಿಹಾರ ನೀಡುವ ಜೊತೆಯಲ್ಲಿ ಒಟ್ಟು ಬರ ಪರಿಹಾರಕ್ಕಾಗಿ 18,171 ಕೋಟಿ ರೂಪಾಯಿ ಬಿಡುಗಡೆ ಮಾಡುವಂತೆ ಕೇಂದ್ರ ಸರಕಾರವನ್ನು ಕೋರಿದ್ದೇವೆ. ಆದರೆ ಇಲ್ಲಿಯ ವರೆಗೆ ನಯಾಪೈಸೆ ಹಣವನ್ನು ಕೇಂದ್ರ ಸರಕಾರ ಬಿಡುಗಡೆ ಮಾಡಿಲ್ಲ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News