ಪೊಕ್ಸೊ ಪ್ರಕರಣ: ಮಾಜಿ ಸಿಎಂ ಯಡಿಯೂರಪ್ಪರಿಗೆ ಮುಂದುವರಿದ ತಾತ್ಕಾಲಿಕ ರಿಲೀಫ್

Update: 2024-08-30 10:02 GMT
ಪೊಕ್ಸೊ ಪ್ರಕರಣ: ಮಾಜಿ ಸಿಎಂ ಯಡಿಯೂರಪ್ಪರಿಗೆ ಮುಂದುವರಿದ ತಾತ್ಕಾಲಿಕ ರಿಲೀಫ್
  • whatsapp icon

ಬೆಂಗಳೂರು: ಪೊಕ್ಸೋ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರಿಗೆ ಕರ್ನಾಟಕ ಹೈಕೋರ್ಟ್ ಏಕಸದಸ್ಯ ಪೀಠ ತಾತ್ಕಾಲಿಕ ರಿಲೀಫ್ ನೀಡಿದೆ.

ಪ್ರಕರಣ ರದ್ದು ಕೋರಿ ಯಡಿಯೂರಪ್ಪ ಸಲ್ಲಿಸಿರುವ ಅರ್ಜಿಯನ್ನು ಹೈಕೋರ್ಟ್ ಏಕಸದಸ್ಯ ಪೀಠ ವಿಚಾರಣೆ ನಡೆಸಿತು. ಈ ವೇಳೆ ಬಿಎಸ್ವೈ ವಿರುದ್ಧ ಹೆಚ್ಚುವರಿ ಆರೋಪಪಟ್ಟಿ ದಾಖಲಿಸಲಾಗಿದೆ. ಆರೋಪಪಟ್ಟಿಯ ಪ್ರತಿ ಸಲ್ಲಿಸಲು ಕಾಲಾವಕಾಶ ಬೇಕಿದೆ ಎಂದು ಸಿಐಡಿ ಪರ ಎಸ್ಪಿಪಿ ಅಶೋಕ್ ನಾಯ್ಕ್ ಮನವಿ ಮಾಡಿದರು.

ಈ ವೇಳೆ ಪ್ರತಿನಿತ್ಯ ಒಬ್ಬರಲ್ಲ ಒಬ್ಬ ಸಚಿವರು ಯಡಿಯೂರಪ್ಪ ವಿರುದ್ಧ ಆರೋಪಿಸುತ್ತಿದ್ದಾರೆ. ಬಿಎಸ್ವೈ ಶರಣಾಗಬೇಕು, ಜೈಲಿಗೆ ಕಳುಹಿಸುತ್ತೇವೆ ಎನ್ನುತ್ತಿದ್ದಾರೆ. ಮಧ್ಯಂತರ ಆದೇಶ ತೆರವುಗೊಳಿಸುತ್ತೇವೆ ಎನ್ನುತ್ತಿದ್ದಾರೆ. ಈಗ ನೋಡಿದರೆ ವಿಚಾರಣೆ ಮುಂದೂಡಿಕೆ ಕೇಳುತ್ತಿದ್ದಾರೆ. ಬರಲಿ ವಾದ ಮಂಡಿಸಲಿ, ಹಣೆಯಲ್ಲಿ ಬರೆದಿದ್ದರೆ ಜೈಲಿಗೆ ಹೋಗುತ್ತಾರೆ ಎಂದು ವಕೀಲ ನಾಗೇಶ್ ಸವಾಲು ಹಾಕಿದರು.

ಇದಕ್ಕೆ ಪ್ರತಿಕ್ರಿಯೆ ನೀಡಿ ನಾವು ಸಿದ್ಧರಿದ್ದೇವೆ, ಸ್ವಲ್ಪ ಸಮಯ ಬೇಕು ಎಂದು ಎಸ್ಪಿಪಿ ಅಶೋಕ್ ನಾಯ್ಕ್ ಹೇಳಿದರು. ನೀವು ರೆಡಿ ಆದ್ರೆ ನಾನು ಈಗಲೇ ರೆಡಿ ಎಂದು ನಾಗೇಶ್ ಹೇಳಿದರು.

ನಂತರ ಸಿಐಡಿ ಮನವಿ ಮೇರೆಗೆ ಹೈಕೋರ್ಟ್ ವಿಚಾರಣೆಯನ್ನು ಸೆಪ್ಟೆಂಬರ್ 5ಕ್ಕೆ ಮುಂದೂಡಿಕೆ ಮಾಡಿತು. ಅಲ್ಲಿಯವರೆಗೆ ಬಿಎಸ್ವೈ ಬಂಧಿಸದಂತೆ ನೀಡಿದ್ದ ಮಧ್ಯಂತರ ಆದೇಶವನ್ನೂ ಮುಂದುವರಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News