ಅಶ್ಲೀಲ ವಿಡಿಯೋ ಪ್ರಕರಣ: ಪ್ರಜ್ವಲ್ ರೇವಣ್ಣ ಸಾಕ್ಷ್ಯ ನಾಶ ಮಾಡಿದ್ದಾರೆ ಎಂಬ ಆರೋಪದ ಬಗ್ಗೆ ಗೃಹ ಸಚಿವರ ಪ್ರತಿಕ್ರಿಯಿಸಿದ್ದು ಹೀಗೆ...

Update: 2024-05-31 09:31 GMT

ಬೆಂಗಳೂರು: ಪ್ರಜ್ವಲ್ ಮೊಬೈಲ್ ಕಳೆದಿದೆ, ಸಾಕ್ಷ್ಯ ನಾಶ ಮಾಡಿದ್ದಾರೆ ಎಂಬುದರ ಬಗ್ಗೆ ನನಗೆ ಗೊತ್ತಿಲ್ಲ. ಎಸ್ಐಟಿಯವರು ಆ ಮಾತನ್ನು ಹೇಳಿದರೆ ಒಪ್ಪಿಕೊಳ್ಳುತ್ತೇನೆ. ಬೇರೆಬೇರೆ ಮೂಲಗಳಿಂದ ಬರುವ ಮಾಹಿತಿಯನ್ನು ಒಪ್ಪಲು ಆಗುವುದಿಲ್ಲ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಹೇಳಿದ್ದಾರೆ.

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು , ಪ್ರಜ್ವಲ್ ರೇವಣ್ಣ ಬಂಧನದ ನಂತರ ಪ್ರಕರಣದ ಕುರಿತು ಅಧಿಕಾರಿಗಳ ಜೊತೆ ಯಾವುದೇ ರೀತಿಯ ಚರ್ಚೆ ಮಾಡಿಲ್ಲ. ಆದರೆ ಅಧಿಕಾರಿಗಳು ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳುತ್ತಾರೆ. ನ್ಯಾಯಾಧೀಶರ ಮುಂದೆ ಹಾಜರುಪಡಿಸಿ, ವಿಚಾರಣೆಗಾಗಿ ಕಸ್ಟಡಿಗೆ ತೆಗೆದುಕೊಳ್ಳುವ ಪ್ರಕ್ರಿಯೆಯನ್ನು ಎಸ್ಐಟಿ ನೋಡಿಕೊಳ್ಳುತ್ತದೆ ಎಂದರು.

ಪ್ರಜ್ವಲ್ ಬಂಧನ ಪ್ರಕ್ರಿಯೆ ವಿಳಂಬದ ಕುರಿತು ಪ್ರತಿಕ್ರಿಯಿಸಿದ ಅವರು, ಪ್ರಜ್ವಲ್ ಬಂಧನವಾಗಲು ತಡವಾಗಿದ್ದರಿಂದ ಸಾಕಷ್ಟು ಸಂತ್ರಸ್ತೆಯರು ದೂರು ಕೊಡಲು ಮುಂದೆ ಬಂದಿರಲಿಲ್ಲ. ಈಗ ಪ್ರಜ್ವಲ್ ಬಂಧನವಾಗಿದೆ. ಪ್ರಜ್ವಲ್ ನಮ್ಮ ದೇಶದಲ್ಲಿ ಅಥವಾ ಯಾವದಾದರು ರಾಜ್ಯದಲ್ಲಿದ್ದರು, ಸಹ ನಮ್ಮ ತಂಡವನ್ನು ಕಳುಹಿಸಿ ಕರೆದುಕೊಂಡು ಬರಬಹುದಿತ್ತು. ಹೊರ ದೇಶದಲ್ಲಿದ್ದ ಕಾರಣಕ್ಕಾಗಿ, ಬಂಧಿಸಲು ಅದಕ್ಕೆ ಆದಂತಹ ಪ್ರಕ್ರಿಯೆಗಳಿವೆ. ಇಲ್ಲಿಂದ ನಾಲ್ಕು ಜನ ಇನ್ಸ್ ಪೆಕ್ಟರ್ ಗಳನ್ನು ಅಥವಾ ಹಿರಿಯ ಅಧಿಕಾರಿಗಳನ್ನು ಕಳುಹಿಸಿ ಎತ್ತಾಕಿಕೊಂಡು ಬನ್ನಿ ಅಂತ ಹೇಳೋಕೆ ಆಗಲ್ಲ. ನಮ್ಮ ದೇಶಕ್ಕೂ ಬೇರೆ ದೇಶಕ್ಕೂ ರಾಜತಾಂತ್ರಿಕ ಒಪ್ಪಂದಗಳಿರುತ್ತವೆ. ಇಂತಹ ಸಂದರ್ಭದಲ್ಲಿ ಅದನ್ನೆಲ್ಲ ಪಾಲಿಸಬೇಕಾಗುತ್ತದೆ. ಸಿಬಿಐ ಮೂಲಕ ಇಂಟರ್ಪೋಲ್ನವರಿಗೆ ನೋಟಿಸ್ ಕಳುಹಿಸಿ, ಅಲ್ಲಿಂದ ಬ್ಲೂ ಕಾರ್ನರ್ ನೋಟಿಸ್ ಜಾರಿಗೊಳಿಸುವ ಪ್ರಕ್ರಿಯೆಯನ್ನು ಮಾಡಲಾಗಿತ್ತು ಎಂದು ತಿಳಿಸಿದರು.

ಸಂತ್ರಸ್ತೆಯರಲ್ಲಿ ಏನಾದರು ಮನವಿ ಮಾಡುತ್ತೀರ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಯಾರಿಗೆ ತೊಂದರೆ ಆಗಿದೆ ಅವರು ಪೊಲೀಸರ ಮುಂದೆ ಬಂದು ದೂರು ಕೊಡಬಹುದು. ಎಸ್ಐಟಿ ಮುಂದೆ ಹೇಳಬಹುದು ಎಂದು ಮೊದಲೇ ತಿಳಿಸಲಾಗಿದೆ. ಅಂತವರಿಗೆ ಎಲ್ಲ ರೀತಿಯ ರಕ್ಷಣೆ ಕೊಡುತ್ತೇವೆ ಎಂಬುದನ್ನು ಹೇಳಿದ್ದೇವೆ. ಸಂತ್ರಸ್ತೆಯರಿಗಾಗಿ ತೆರಯಲಾದ ಸಹಾಯವಾಣಿ ವಿಚಾರದ ಕುರಿತು ಹೆಚ್ಚು ತಿಳಿದುಕೊಳ್ಳಲು ಹೋಗಿಲ್ಲ. ಕೆಲವು ವಿಚಾರವನ್ನು ಎಸ್ಐಟಿಯವರು ಗೌಪ್ಯವಾಗಿ ಇಟ್ಟುಕೊಳ್ಳುತ್ತಾರೆ. ಅಂತಹ ವಿಚಾರಗಳ ಬಗ್ಗೆ ಹೆಚ್ಚಿಗೆ ತಿಳಿದುಕೊಳ್ಳಲು ಹೋಗಲ್ಲ ಎಂದು ಹೇಳಿದರು.

ಎಸ್ಐಟಿ ತಂಡ ಕೈಗೊಂಡಿದ್ದ ಕಾನೂನು ಪ್ರಕ್ರಿಯೆಗಳ ಕುರಿತು ತಿಳಿದಕೊಂಡಿದ್ದ ಪ್ರಜ್ವಲ್ 31ರಂದು ಬರುವುದಾಗಿ ಹೇಳಿದ್ದರು. ಫಲಿತಾಂಶ ಬೇರೆ ರೀತಿಯಲ್ಲಿ ಬಂದರೆ ರಾಜತಾಂತ್ರಿಕ ಪಾಸ್ಪೋರ್ಟ್ ರದ್ದಾಗುತ್ತದೆ. ಇದನ್ನೆಲ್ಲ ಅರ್ಥ ಮಾಡಿಕೊಂಡು ಶರಣಾಗುತ್ತೇನೆ ಅಂತ ಹೇಳಿದ್ದರು ಅನ್ನಿಸುತ್ತದೆ ಎಂದು ಅಭಿಪ್ರಾಯಪಟ್ಟರು

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News