ಸಿಎಂ ವಿರುದ್ಧ ಪ್ರಾಸಿಕ್ಯೂಷನ್‍ಗೆ ಅನುಮತಿ | ಹೋರಾಟಕ್ಕೆ ಜಾತಿ ಲೇಪನ ಬೇಡ : ಪ್ರಹ್ಲಾದ್ ಜೋಶಿ

Update: 2024-08-18 14:12 GMT

PC : x/@JoshiPralhad

ಹುಬ್ಬಳ್ಳಿ: ‘ಭ್ರಷ್ಟಾಚಾರ ಎಲ್ಲ ಸಮಾಜ ಮತ್ತು ದೇಶಕ್ಕೆ ಅಂಟಿದ ರೋಗವಾಗಿದ್ದು, ಇದರ ನಿರ್ಮೂಲನೆ ಆಗಬೇಕೆಂದರೆ ಯಾರೂ ಜಾತಿ ಲೇಪನ ಮಾಡಬಾರದು’ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದ್ದಾರೆ.

ರವಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಭ್ರಷ್ಟಾಚಾರಕ್ಕೆ ಯಾವುದೇ ಜಾತಿ ಎಂಬುದಿಲ್ಲ. ಎಲ್ಲ ಸಮಾಜ ಮತ್ತು ದೇಶಕ್ಕೆ ಅಂಟಿದ ಪಿಡುಗಾಗಿದೆ. ಹಾಗಾಗಿ ಇದರ ವಿರುದ್ಧ ಹೋರಾಟಕ್ಕಿಳಿದರೆ ಯಾರೂ ಜಾತಿಯ ನೆಪವನ್ನು ಮುಂದಿಡಬಾರದು ಎಂದು ಕಿವಿಮಾತು ಹೇಳಿದರು.

ಮುಡಾ ನಿವೇಶನ ಹಂಚಿಕೆ ಹಗರಣದಲ್ಲಿ ರಾಜ್ಯಪಾಲರು ತನಿಖೆಗೆ ಅನುಮತಿ ನೀಡುತ್ತಿದ್ದಂತೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮತ್ತು ಅಹಿಂದ ವರ್ಗವರು ಜಾತಿ ಲೇಪನ ಹಚ್ಚಿ ಬೀದಿಗಿಳಿದು ಹೋರಾಡುವುದು ಸರಿಯಲ್ಲ ಎಂದು ಜೋಶಿ ಆಕ್ಷೇಪಿಸಿದರು.

ರಾಜ್ಯಪಾಲರು ಅತ್ಯಂತ ಹಿಂದುಳಿದ, ಎಸ್‍ಸಿ ಸಮಾಜಕ್ಕೆ ಸೇರಿದವರು. ಅಂತಹವರ ವಿರುದ್ಧ ಬೀದಿಗಿಳಿಯುವುದು ಕಾಂಗ್ರೆಸ್ಸಿಗೆ ಶೋಭೆ ತರುವುದಿಲ್ಲ. ದೇಶದಲ್ಲಿ ಕಾಂಗ್ರೆಸ್ ಪಕ್ಷ ಭ್ರಷ್ಟಾಚಾರದ ಜನಕ. ನೆಹರು ಕಾಲದಿಂದ ಮನಮೋಹನ್ ಸಿಂಗ್ ಕಾಲದವರೆಗೂ ಕಾಂಗ್ರೆಸ್ ಭ್ರಷ್ಟಾಚಾರವನ್ನು ಪೋಷಿಸಿಕೊಂಡು ಬಂದಿದೆ. ಹಾಗಾಗಿ ಈಗ ಕಾಂಗ್ರೆಸ್ ಹೈಕಮಾಂಡ್ ಸಿಎಂ ಸಿದ್ದರಾಮಯ್ಯ ಪರ, ಬೆಂಬಲಕ್ಕೆ ನಿಂತಿದ್ದು, ಇದರಲ್ಲಿ ಆಶ್ಚರ್ಯವೇನು ಇಲ್ಲ ಎಂದು ಜೋಶಿ ಪ್ರತಿಕ್ರಿಯಿಸಿದರು.

ತನಿಖೆಗೆ ಸಹಕರಿಸಲಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಆತ್ಮಸಾಕ್ಷಿ ಇದ್ದರೆ ರಾಜೀನಾಮೆ ನೀಡಿ ತನಿಖೆಗೆ ಸಹಕರಿಸಲಿ. ರಾಜ್ಯದಲ್ಲಿ ನಿಮ್ಮದೇ ಸರಕಾರವಿದೆ. ಸ್ವತಃ ನೀವೇ ಸಿಎಂ ಆಗಿರುವಾಗ ಸ್ಥಳೀಯ ಅಧಿಕಾರಿಗಳು ತನಿಖೆ ಹೇಗೆ ಮಾಡಿಯಾರು?. ಹೀಗಾಗಿ ಸಿಎಂ ಆರೋಪ ಮುಕ್ತರಾಗುವ ತನಕ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿ ತನಿಖೆಗೆ ಸಹಕರಿಸಬೇಕು ಎಂದು ಜೋಶಿ ಒತ್ತಾಯಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News