ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ರಾಹುಲ್ ಗಾಂಧಿ ಸೂಚಿಸಲಿ : ಪ್ರಹ್ಲಾದ್ ಜೋಶಿ
ಹೊಸದಿಲ್ಲಿ: "ಮುಡಾ ಹಗರಣವು ಸಿದ್ದರಾಮಯ್ಯನವರ ಅಧಿಕಾರ ದುರುಪಯೋಗವನ್ನು ನಿರೂಪಿಸುತ್ತಿದ್ದು, ಹೈಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ಕೂಡಲೇ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಬೇಕು" ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆಗ್ರಹಿಸಿದರು.
ಹೊಸದಿಲ್ಲಿಯಲ್ಲಿಂದು ಮಾದ್ಯಮದವರೊಂದಿಗೆ ಮಾತನಾಡಿದ ಅವರು, "ಮುಖ್ಯಮಂತ್ರಿ ಸಿದ್ದರಾಮಯ್ಯನವರ ಭ್ರಷ್ಟಾಚಾರ ಬಯಲಾಗಿದೆ. ಇನ್ನೂ ಇನ್ನೂ ಸಿಎಂ ಕುರ್ಚಿಗೆ ಅಂಟಿಕೊಳ್ಳುವುದು ನಾಚಿಕೆಗೇಡು" ಎಂದು ಟೀಕಿಸಿದರು.
ಸಿದ್ದರಾಮಯ್ಯನವರು ಅನಪೇಕ್ಷಿತ ಪ್ರಭಾವ ಬೀರಿದ್ದಲ್ಲದೆ, ಸಿಎಂ ಸ್ಥಾನದ ಅಧಿಕಾರ ದುರುಪಯೋಗ ಪಡಿಸಿಕೊಂಡಿದ್ದಾರೆ. ಜತೆಗೆ ಜನಸಾಮಾನ್ಯರ ಕನಸು, ಆಕಾಂಕ್ಷೆಗಳನ್ನು ನುಚ್ಚು ನೂರು ಮಾಡಿದ್ದಾರೆ. ನ್ಯಾಯಾಲಯದ ತೀರ್ಪಿನಿಂದ ಇದು ಸ್ಪಷ್ಟವಾಗಿದೆ. ಜನ ಸಾಮಾನ್ಯರ ರಕ್ಷಣೆ ಮಾಡಬೇಕಾದ ಮುಖ್ಯಮಂತ್ರಿಯೇ ಹಿಂದುಳಿದವರನ್ನು, ಬಡವರನ್ನು ವಂಚಿಸುತ್ತಿದ್ದಾರೆ. ಇದು ನಿಜಕ್ಕೂ ಅಕ್ಷಮ್ಯ ಎಂದು ಜೋಶಿ ಖಂಡಿಸಿದರು.
ಸಾಮಾನ್ಯ ವ್ಯಕ್ತಿಯೊಬ್ಬರು ನಿಯಮಗಳನ್ನು ಮುರಿದು ಸೌಲಭ್ಯ ಪಡೆದರೇ ಕಾನೂನು ಸಹಿಸಲ್ಲ. ಇನ್ನೂ ಎಲ್ಲಾ ನೀತಿ- ನಿಯಮ, ಕಾನೂನು ಕಟ್ಟಳೆಗಳನ್ನು ಅರಿತ ಮುಖ್ಯಮಂತ್ರಿಯೇ ಹೀಗೆ ವರ್ತಿಸಿದರೆ ಹೇಗೆ?. ನ್ಯಾಯಾಲಯದ ತೀರ್ಪಿನಲ್ಲಿ ''ಫಲಾನುಭವಿ ಅಪರಿಚಿತೆಯಲ್ಲ. ಈ ಹಗರಣದ ಫಲಾನುಭವಿ ಅರ್ಜಿದಾರರ (ಸಿಎಂ ಸಿದ್ದರಾಮಯ್ಯ) ಪತ್ನಿ ಎಂದು ಉಲ್ಲೇಖಿಸಿದೆ". ಇದು ಅನಗತ್ಯ ಪ್ರಭಾವ ಬೀರಿ ಮುಖ್ಯಮಂತ್ರಿ ಸ್ಥಾನದ ಅಧಿಕಾರದ ದುರುಪಯೋಗವನ್ನು ನಿರೂಪಿಸುತ್ತದೆ ಎಂದು ಜೋಶಿ ಹೇಳಿದರು.
ಹೈಕೋರ್ಟ್ ಇನ್ನೇನು ಹೇಳಬೇಕು ಇವರಿಗೆ?: ಮುಡಾ ಹಗರಣದಲ್ಲಿ ರಾಜ್ಯಪಾಲರು ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿದ್ದನ್ನು ಹೈಕೋರ್ಟ್ ಎತ್ತಿ ಹಿಡಿದಿದ್ದು, ಮೇಲ್ನೋಟಕ್ಕೆ ಅಧಿಕಾರ ದುರುಪಯೋಗ ಎಂದೇ ಹೇಳಿದೆ. ಇನ್ನೇನು ಹೇಳಬೇಕು? ಇವರಿಗೆ ಎಂದು ಸಚಿವ ಜೋಶಿ ಪ್ರಶ್ನಿಸಿದರು.
ರಾಜ್ಯಪಾಲರ ಕ್ಷಮೆ ಕೇಳಲಿ: ಸಿಎಂ ಸೇರಿದಂತೆ ಕಾಂಗ್ರೆಸ್ಸಿಗರು ರಾಜ್ಯಪಾಲರನ್ನು ತೀವ್ರ ಅವಹೇಳನ, ಅಪಮಾನ ಮಾಡಿದರು. ಪ್ರತಿಭಟನೆ ವೇಳೆ ಕಾರ್ಯಕರ್ತರು ರಾಜ್ಯಪಾಲರ ಭಾವಚಿತ್ರಕ್ಕೆ ಚಪ್ಪಲಿಯಲ್ಲಿ ಹೊಡೆದು ತೀರಾ ಅನುಚಿತ ವರ್ತನೆ ತೋರಿದರು. ಈ ಹಿನ್ನೆಲೆಯಲ್ಲಿ ತಕ್ಷಣ ಸಿದ್ದರಾಮಯ್ಯ ಅವರು ರಾಜ್ಯಪಾಲರನ್ನು ಕ್ಷಮೆ ಕೇಳಬೇಕು ಎಂದು ಜೋಶಿ ಆಗ್ರಹಿಸಿದರು.
ಸಿಎಂ ರಾಜೀನಾಮೆಗೆ ರಾಹುಲ್‌ಗಾಂಧಿ ಸೂಚಿಸಲಿ : ಕಾಂಗ್ರೆಸ್ ನೇತಾರ ರಾಹುಲ್ ಗಾಂಧಿ ನಕಲಿ ನೈತಿಕತೆ ಹೇಳುತ್ತಾರೆ. ಮೊದಲು ಸಿದ್ದರಾಮಯ್ಯ ಅವರಿಗೆ ರಾಜೀನಾಮೆ ನೀಡುವಂತೆ ಸೂಚಿಸಲಿ ಎಂದು ಸವಾಲು ಹಾಕಿದ ಜೋಶಿ, ಒಂದು ನಿಮಿಷವೂ ಸಿಎಂ ಸ್ಥಾನದಲ್ಲಿ ಇರಲು ಇವರು ಯೋಗ್ಯರಲ್ಲ ಎಂದು ಹೇಳಿದರು.