ಗೋಪಾಲ್ ಜೋಶಿ ಪ್ರಕರಣಕ್ಕೂ ನನಗೂ ಸಂಬಂಧವಿಲ್ಲ, ಅವರು ತಪ್ಪು ಮಾಡಿದ್ದರೆ ಕಾನೂನು ಕ್ರಮವಾಗಲಿ : ಪ್ರಹ್ಲಾದ್ ಜೋಶಿ
ಬೆಂಗಳೂರು : ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ವಂಚಿಸಿದ ಆರೋಪದ ಮೇಲೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸಹೋದರ ಗೋಪಾಲ್ ಜೋಶಿ, ಸಹೋದರಿ ವಿಜಯ ಲಕ್ಷ್ಮೀ ಜೋಶಿ ಸಹಿತ ಮೂವರ ವಿರುದ್ಧ ಸುನೀತಾ ಚವ್ಹಾಣ್ ಎಂಬುವರು ನೀಡಿದ ದೂರಿನನ್ವಯ ಬೆಂಗಳೂರಿನ ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಈ ಸಂಬಂಧ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, "ಗೋಪಾಲ್ ಜೋಶಿ ಮೇಲಿನ ಪ್ರಕರಣಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ. ಮೊದಲನೆಯದಾಗಿ ನನಗೆ ಯಾರೂ ಸಹೋದರಿ ಇಲ್ಲ. ಇನ್ನು, ನನ್ನ ತಾಯಿಗೆ ಗೋಪಾಲ್ ಜೋಶಿ ಸೇರಿ ನಾಲ್ವರು ಮಕ್ಕಳು. ಆದರೆ, ಗೋಪಾಲ್ ಜೋಶಿ ಅವರೊಂದಿಗೆ ಕಳೆದ 32 ವರ್ಷಗಳಿಂದ ತಮ್ಮ ಸಂಪರ್ಕ, ಸಂಬಂಧವಿಲ್ಲ" ಎಂದು ಆರೋಪವನ್ನು ತಳ್ಳಿ ಹಾಕಿದರು.
ʼಗೋಪಾಲ್ ಜೋಶಿ ಮಾತ್ರವಲ್ಲ, ಯಾರೇ ತಮ್ಮ ಕೆಲಸ ಕಾರ್ಯಗಳಿಗೆ ನನ್ನ ಹೆಸರು ದುರುಪಯೋಗ ಪಡಿಸಿಕೊಳ್ಳುತ್ತಿದ್ದರೆ ಅದಕ್ಕೂ ನನಗೂ ಯಾವುದೇ ಸಂಬಂಧವಿಲ್ಲʼ ಎಂದು ಜೋಶಿ ಪುನರುಚ್ಚರಿಸಿದರು.
ʼಯಾರೊಂದಿಗೂ ನನ್ನ ಹೆಸರು ಉಲ್ಲೇಖಿಸದಂತೆ 2013ರಲ್ಲೇ ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್ ತಡೆಯಾಜ್ಞೆ ನೀಡಿದೆ. ನ್ಯಾಯಾಲದ ಅಫಿಡವಿಟ್ ನಲ್ಲಿ ಅದರ ವಿವರವಿದೆ ಎಂದು ದಾಖಲೆ ಸಮೇತ ಸ್ಪಷ್ಟನೆ ನೀಡಿದರು. ಇನ್ನು, ಬೆಂಗಳೂರಿನಲ್ಲಿ ದಾಖಲಾಗಿರುವ ಎಫ್‌ಐಆರ್‌ನಲ್ಲಿ ವಿಜಯಲಕ್ಷ್ಮಿ ನನ್ನ ಸಹೋದರಿ ಎಂದು ಉಲ್ಲೇಖಿಸಿದ್ದಾರೆ. ವಾಸ್ತವವಾಗಿ ನನಗೆ ಸಹೋದರಿಯೇ ಇಲ್ಲ. ಇದನ್ನೆಲ್ಲ, ನೋಡಿದರೆ ಎಲ್ಲ ಬೋಗಸ್ ಎಂಬುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆʼ ಎಂದು ಹೇಳಿದರು.
ಗೋಪಾಲ್ ಜೋಶಿ ತಪ್ಪು ಮಾಡಿದ್ದರೆ ಕ್ರಮ ಕೈಗೊಳ್ಳಲಿ: ಈ ಪ್ರಕರಣದಲ್ಲಿ ನನಗೂ, ನನ್ನ ಕುಟುಂಬಕ್ಕೂ ಹಾಗೂ ಬಿಜೆಪಿ ಪಕ್ಷಕ್ಕೂ ಸಹ ಸಂಬಂಧವಿಲ್ಲ. ಗೋಪಾಲ್ ಜೋಶಿ ತಪ್ಪೆಸಗಿದ್ದರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಿ.ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಹೇಳಿ ಗೋಪಾಲ್ ಜೋಶಿ ಹಣ ಪಡೆದಿದ್ದಾರೋ ಇಲ್ಲವೋ ಗೊತ್ತಿಲ್ಲ. ಇದು ತನಿಖೆಯಿಂದ ಸಾಬೀತಾಗಬೇಕಿದೆ ಅಷ್ಟೇ ಎಂದರು.
ಜೋಶಿ ನುಣಿಚಿಕೊಳ್ಳುವುದು ಸಲ್ಲ: ‘ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸಹೋದರ ಗೋಪಾಲ್ ಜೋಶಿ ಮೇಲೆ ಟಿಕೆಟ್ ವಂಚನೆ ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ಜೋಶಿ ರಾಜೀನಾಮೆ ನೀಡಬೇಕು. ಗೋಪಾಲ್ ಜೋಶಿ, ಪ್ರಹ್ಲಾದ್ ಜೋಶಿ ಜೊತೆಗೆ ಇದ್ದಾರೆಂಬುದು ಜನರಿಗೆ ಗೊತ್ತಿರುವ ಸಂಗತಿ. ಸಹೋದರ ಮೇಲೆ ಬಂದಿರುವ ಆರೋಪಕ್ಕೂ ನನಗೆ ಸಂಬಂಧವಿಲ್ಲವೆಂದು ನುಣಿಚಿಕೊಳ್ಳುವುದು ಸರಿಯಲ್ಲ. ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಈಡಿ, ಐಟಿಯನ್ನು ಬಿಟ್ಟು ಹೆದರಿಸಿ ದೇವಾನಂದ ಚೌಹಾಣ್‍ರನ್ನ ಬಿಜೆಪಿಗೆ ಸೇರಿಸಿಕೊಂಡಿದ್ದರು. ಟಿಕೆಟ್ ಕೊಡಿಸುವ ನೆಪದಲ್ಲಿ 2ಕೋಟಿ ರೂ.ಹಣ ಪಡೆದು ವಂಚಿಸಿದ್ದಾರೆ. ಗೋಪಾಲ್ ಜೋಶಿ ಆರೆಸ್ಸೆಸ್ ನಲ್ಲಿ ತೊಡಗಿಸಿಕೊಂಡವರು. ಆರೆಸ್ಸೆಸ್ ನ ಕೆಲ ನಾಯಕರು ಈ ರೀತಿಯ ಟಿಕೆಟ್ ದಂಧೆಯಲ್ಲಿ ತೊಡಗಿರುವ ಬಗ್ಗೆ ಹಲವು ಪ್ರಕರಣಗಳು ಬೆಳಕಿಗೆ ಬಂದಿವೆ’
-ದಿನೇಶ್ ಗುಂಡೂರಾವ್, ಆರೋಗ್ಯ ಸಚಿವ