ಪ್ರಜ್ವಲ್ ಲೈಂಗಿಕ ಹಗರಣ | ನಿಷ್ಪಕ್ಷಪಾತ ತನಿಖೆಗೆ ಒತ್ತಾಯಿಸಿ ರಾಜ್ಯಪಾಲರಿಗೆ ಜೆಡಿಎಸ್​ ನಿಯೋಗ ದೂರು

Update: 2024-05-09 13:48 GMT

Photo : x/@JanataDal_S

ಬೆಂಗಳೂರು: ಹಾಸನ ವಿಡಿಯೋ ಪ್ರಕರಣ ಹಾಗೂ ಪೆನ್ ಡ್ರೈವ್ ಹಂಚಿಕೆ ಬಗ್ಗೆ ರಾಜ್ಯ ಸರಕಾರ ನೇಮಕ ಮಾಡಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ಪಾರದರ್ಶಕವಾಗಿ ತನಿಖೆ ನಡೆಸುತ್ತಿಲ್ಲ. ಆದ್ದರಿಂದ ಅದನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಜೆಡಿಎಸ್ ನಿಯೋಗ ರಾಜ್ಯಪಾಲರಿಗೆ ಮನವಿ ಮಾಡಿದೆ.

ಮಹಿಳೆಯರ ಅಶ್ಲೀಲ ವಿಡಿಯೋಗಳನ್ನು ತುಂಬಲಾಗಿದ್ದ ಪೆನ್ ಡ್ರೈವ್ ಗಳನ್ನು ವ್ಯಾಪಕವಾಗಿ ಹಂಚಿಕೆ ಮಾಡಲಾಗಿರುವ ಪ್ರಕರಣದ ಪಿತೂರಿಯಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೇ ಮಾಸ್ಟರ್ ಮೈಂಡ್ ಆಗಿದ್ದು, ಕೂಡಲೇ ಅವರನ್ನು ಸಂಪುಟದಿಂದ ವಜಾ ಮಾಡಲು ಮುಖ್ಯಮಂತ್ರಿಗಳಿಗೆ ನಿರ್ದೇಶನ ನೀಡಬೇಕು ಎಂದು ಜೆಡಿಎಸ್ ರಾಜ್ಯಪಾಲರಲ್ಲಿ ಮನವಿ ಮಾಡಿದೆ.

ಮಾಜಿ ಮುಖ್ಯಮಂತ್ರಿಗಳಾದ ಎಚ್.ಡಿ.ಕುಮಾರಸ್ವಾಮಿ ಅವರ ನೇತೃತ್ವದ ಪಕ್ಷದ ನಿಯೋಗವು ರಾಜಭವನಕ್ಕೆ ತೆರಳಿ ರಾಜ್ಯಪಾಲರಾದ ಥಾವರಚಂದ್ ಗೆಹ್ಲೋಟ್ ಅವರಿಗೆ ದೂರು ಸಲ್ಲಿಸಿತು. ಈ ಸಂದರ್ಭದಲ್ಲಿ ಮನವಿ ಪತ್ರದಲ್ಲಿನ ಎಲ್ಲಾ ಅಂಶಗಳನ್ನು ಕುಮಾರಸ್ವಾಮಿ ಅವರು ರಾಜ್ಯಪಾಲರಿಗೆ ಮನವರಿಕೆ ಮಾಡಿಕೊಟ್ಟರು.

ವಿಶೇಷ ತನಿಖಾ ತಂಡ ಸರಕಾರದ ಹಿತಕ್ಕೆ ತಕ್ಕಂತೆ ಕೆಲಸ ಮಾಡುತ್ತಿದೆ

ವಿಶೇಷ ತನಿಖಾ ತಂಡ (ಎಸ್‌ಐಟಿ) ಸರಿಯಾಗಿ ತನಿಖೆ ಮಾಡುತ್ತಿಲ್ಲ ಹಾಗೂ ನಿಕ್ಷಕ್ಷಪಾತವಾಗಿ ತನಿಖೆ ನಡೆಸುತ್ತಿಲ್ಲ. ಇಡೀ ಪ್ರಕರಣವನ್ನು ದಿಕ್ಕು ತಪ್ಪಿಸುವ ರೀತಿಯಲ್ಲಿ ಅದು ನಿರ್ವಹಿಸುತ್ತಿದೆ ಎಂದು ಜೆಡಿಎಸ್ ಗಂಭೀರ ಆಪಾದನೆ ಮಾಡಿದೆ.

ಪ್ರಜ್ವಲ್ ರೇವಣ್ಣ ಅವರ ಮಾಜಿ ಕಾರು ಚಾಲಕ ಕಾರ್ತಿಕ್ ಎನ್ನುವ ವ್ಯಕ್ತಿ ವಿಡಿಯೋ ಹಾಗೂ ಚಿತ್ರಗಳನ್ನು ಪ್ರಜ್ವಲ್ ಅವರ ಮೊಬೈಲ್ ಕದ್ದು ಸೋರಿಕೆ ಮಾಡಿದ್ದಾರೆ. ಕಾರ್ತಿಕ್ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಅವರು ಭೇಟಿಯಾಗಿ ಸಂಚು ರೂಪಿಸಿದ್ದರು. ಆದರೆ, ಈವರೆಗೂ ಕಾರ್ತಿಕ್ ನನ್ನು ಬಂಧಿಸಿಲ್ಲ ಎಂದು ಜೆಡಿಎಸ್ ದೂರಿದೆ.

ಹಾಸನ ಸೇರಿದಂತೆ ರಾಜ್ಯಾದ್ಯಂತ ಪೆನ್ ಡ್ರೈವ್ ಹಂಚಿಕೆ ಮಾಡಿರುವ ಪ್ರಕರಣದ ಆರೋಪಿಗಳ ಬಗ್ಗೆ ದೂರು ದಾಖಲಾಗಿದ್ದರೂ ಈವರೆಗೆ ಬಂಧಿಸಿಲ್ಲ. ಈ ಕೃತ್ಯದಲ್ಲಿ ನವೀನ್ ಗೌಡ ಎಂಬ ವ್ಯಕ್ತಿ ಭಾಗಿಯಾಗಿದ್ದು, ಹಾಸನದಲ್ಲಿ FIR ಆಗಿದ್ದರೂ ಅವನನ್ನು ತನಿಖಾ ತಂಡ ಬಂಧನ ಮಾಡಿಲ್ಲ ಎಂದು ರಾಜ್ಯಪಾಲರಿಗೆ ಸಲ್ಲಿಸಿದ ದೂರಿನಲ್ಲಿ ಉಲ್ಲೇಖ ಮಾಡಲಾಗಿದೆ. ಆಧುನಿಕ ತಂತ್ರಜ್ಞಾನ ಬಳಕೆ ಮಾಡಿಕೊಂಡು ವಿಡಿಯೋಗಳನ್ನು ಎಲ್ಲೆಡೆ ಸೋರಿಕೆ ಮಾಡಿರುವ ಕಿಡಿಗೇಡಿಗಳನ್ನು ಬಂಧನ ಮಾಡಬೇಕು. ಈ ನಿಟ್ಟಿನಲ್ಲಿ ಎಸ್ ಐಟಿ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಜೆಡಿಎಸ್ ಆಪಾದಿಸಿದೆ.

ರಾಜ್ಯ ಸರ್ಕಾರ ಸಂಪೂರ್ಣ ವಿಫಲ

ಮಹಿಳೆಯರ ಮಾನ ಹಾನಿಗೆ ಕಾರಣವಾಗಿರುವ ಅಶ್ಲೀಲ ವಿಡಿಯೋಗಳ ಹಂಚಿಕೆ ಮಾಡುವುದನ್ನು ತಡೆಯುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಪ್ರಕರಣದಲ್ಲಿ ನೊಂದಿರುವ ಮಹಿಳೆಯರಿಗೆ ಇದರಿಂದ ಬಹಳ ಆಘಾತವಾಗಿದೆ ಎಂದು ಮನವಿ ಪತ್ರದಲ್ಲಿ ತಿಳಿಸಲಾಗಿದೆ.

ವಕೀಲ, ಬಿಜೆಪಿ ಮುಖಂಡ ದೇವರಾಜ್ ಗೌಡ ಹಾಗೂ ಡಿ.ಕೆ.ಶಿವಕುಮಾರ್ ನಡುವೆ ನಡೆದಿರುವ ಮೊಬೈಲ್ ಸಂಭಾಷಣೆಯಲ್ಲಿ ಪೆನ್ ಡ್ರೈವ್ ಸಂಚು ಬಹಿರಂಗವಾಗಿದೆ. ರಾಜ್ಯ ಸರ್ಕಾರ ರಚನೆ ಮಾಡಿರುವ ತನಿಖಾ ತಂಡ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರ ಹಿತಾಸಕ್ತಿಗೆ ಅನುಗುಣವಾಗಿ ಕೆಲಸ ಮಾಡುತ್ತಿದೆ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಜೆಡಿಎಸ್ ಪಕ್ಷದ ವರ್ಚಸ್ಸು ಹಾಳು ಮಾಡಲು ಎಸ್ ಐಟಿ ಯನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಜೆಡಿಎಸ್ ನೇರವಾಗಿ ಆರೋಪಿಸಿದೆ.

ಅದರಿಂದ ಈ ಎಸ್ ಐಟಿ ಯಿಂದ ಈ ಪ್ರಕರಣದ ಪಾರದರ್ಶಕ, ನ್ಯಾಯಯುತ ತನಿಖೆ ಸಾಧ್ಯವಿಲ್ಲ. ಆದ್ದರಿಂದ ಇಡೀ ಪ್ರಕರಣದ ತನಿಖೆಯನ್ನು ಸಿಬಿಐ ಗೆ ವಹಿಸಲು ತಾವು ಮಧ್ಯ ಪ್ರವೇಶ ಮಾಡಬೇಕು ಎಂದು ಜೆಡಿಎಸ್ ರಾಜ್ಯಪಾಲರಲ್ಲಿ ಮನವಿ ಮಾಡಿದೆ.

ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷರಾದ ಜಿಟಿ ದೇವೇಗೌಡರು, ಮಾಜಿ ಸಚಿವರಾದ ಬಂಡೆಪ್ಪ ಕಾಶೆಂಪೂರ್, ಎಚ್.ಕೆ.ಕುಮಾರಸ್ವಾಮಿ, ಸಿ.ಎಸ್.ಪುಟ್ಟರಾಜು, ಸಾ.ರಾ.ಮಹೇಶ್ ಮುಂತಾದವರು ನಿಯೋಗದಲ್ಲಿ ಇದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News