ಲೋಕಸಭೆ ಚುನಾವಣೆಗೆ ಸಿದ್ಧತೆ: ನಾಳೆ ಕಾಂಗ್ರೆಸ್ ಪ್ರಚಾರ ಸಮಿತಿ ಸಭೆ
ಬೆಂಗಳೂರು, ಸೆ. 2: ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಸಾಧಿಸಿದ ಕಾಂಗ್ರೆಸ್ ಪಾಳೆಯ ಮುಂಬರುವ ಲೋಕಸಭಾ ಚುನಾವಣೆಯ ಮೇಲೆ ಕಣ್ಣಿಟ್ಟಿದ್ದು, ಇದರ ಅಂಗವಾಗಿ ನಾಳೆ(ಸೆ.3)ಕೆಪಿಸಿಸಿ ಕಚೇರಿಯಲ್ಲಿ ರಾಜ್ಯ ಮತ್ತು ಜಿಲ್ಲಾ ಪ್ರಚಾರ ಸಮಿತಿಯ ಪದಾಧಿಕಾರಿಗಳ ಸಭೆಯನ್ನು ಕರೆಯಲಾಗಿದೆ.
ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷರೂ ಆಗಿರುವ ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಸೇರಿದಂತೆ ಹಲವು ನಾಯಕರು ಈ ಸಭೆಯಲ್ಲಿ ಮಾತನಾಡಲಿದ್ದಾರೆ. ಚುನಾವಣೆಯಲ್ಲಿ ಪಕ್ಷದ ಯಶಸ್ಸಿಗೆ ದುಡಿದ ಪ್ರಚಾರ ಸಮಿತಿಯ ರಾಜ್ಯ, ಜಿಲ್ಲಾ ಹಾಗೂ ಕ್ಷೇತ್ರವಾರು ಸಮಿತಿಗಳ ಪದಾಧಿಕಾರಿಗಳಿಗೆ ಅಭಿನಂದನೆ ಸಲ್ಲಿಸುವುದು ಸಭೆಯ ಉದ್ದೇಶವಾಗಿದೆ. ಈ ಮೂಲಕ ಪದಾಧಿಕಾರಿಗಳನ್ನು ಹತ್ತಿರದಲ್ಲೇ ಇರುವ ಲೋಕಸಭೆಯ ಸಾರ್ವತ್ರಿಕ ಚುನಾವಣೆಗೆ ಹುರಿದುಂಬಿಸುವುದು ಪಕ್ಷದ ಚಿಂತನೆಯಾಗಿದೆ.
ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಓಟಕ್ಕೆ ತಡೆ ಹಾಕಿರುವ ರಾಜ್ಯ ಕಾಂಗ್ರೆಸ್ ಈಗ ಉತ್ಸಾಹದ ಬುಗ್ಗೆಯಾಗಿದ್ದು, ರಾಷ್ಟ್ರ ಮಟ್ಟದಲ್ಲೂ ಇದೇ ರೀತಿಯ ಫಲಿತಾಂಶ ಬರುವಂತೆ ನೋಡಿಕೊಳ್ಳಲು ಬಯಸುತ್ತಿದೆ. ಇದಕ್ಕೆ ವೇದಿಕೆಯಾಗಿ, ರವಿವಾರದ ಸಭೆಯನ್ನು ಕರೆಯಲಾಗಿದೆ. ನಾಳೆ ಬೆಳಗ್ಗೆ 11ಗಂಟೆಗೆ ಆರಂಭವಾಗುವ ಸಭೆ ಮಧ್ಯಾಹ್ನದ ವರೆಗೆ ನಡೆಯಲಿದೆ ಎಂದು ಪ್ರಚಾರ ಸಮಿತಿಯ ಸಮನ್ವಯಕಾರ ಎ.ಪಿ.ಬಸವರಾಜ ತಿಳಿಸಿದ್ದಾರೆ.