ಸೋಂಕು ರಹಿತ ಡಯಾಲಿಸಿಸ್ ಸೇವೆಗೆ ಆದ್ಯತೆ: ಸಚಿವ ದಿನೇಶ್ ಗುಂಡೂರಾವ್

Update: 2024-01-26 13:32 GMT

ಬೆಂಗಳೂರು: ಉಚಿತವಾಗಿ ಉತ್ತಮ ಡಯಾಲಿಸಿಸ್ ಸೇವೆ ಎದುರು ನೋಡುತ್ತಿದ್ದ, ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಬಡಜನರಿಗೆ ಸಂತಸದ ಸುದ್ದಿ. ಸೋಂಕು ರಹಿತ ಡಯಾಲಿಸಿಸ್ ಸೇವೆ ಆರಂಭಕ್ಕೆ ಇನ್ನೇನು ಕ್ಷಣಗಣನೆ ಆರಂಭವಾಗಿದ್ದು, ಡಯಾಲಿಸಿಸ್ ಮಾಡಿಸಿಕೊಳ್ಳುವವರಿಗೆ ಇನ್ನು ಮುಂದೆ ಏಕಬಳಕೆಯ ಡಯಾಲೈಸರ್ ಆರೈಕೆ ಲಭ್ಯವಾಗಲಿದೆ.

ಜನರಿಗೆ ಸೋಂಕು ರಹಿತ ಡಯಾಲಿಸಿಸ್ ಸೇವೆ ಕಲ್ಪಿಸಲು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಆದ್ಯತೆ ನೀಡಿದ್ದು, ಡಯಾಲಿಸಿಸ್ ಕೇಂದ್ರಗಳಲ್ಲಿ ಬಹುಬಳಕೆಯ ಡಯಾಲೈಸರ್ ಯಂತ್ರಗಳಿಂದ ಸೇವೆ ಪಡೆಯುತ್ತಿದ್ದವರಿಗೆ ಸೋಂಕು ತಗುಲುತ್ತಿರುವುದನ್ನ ಗಮನಿಸಿದ್ದ ಸಚಿವರು, ಡಯಾಲಿಸಿಸ್ ವ್ಯವಸ್ಥೆಯನ್ನ ಸದೃಢಗೊಳಿಸುವ ನಿಟ್ಟಿನಲ್ಲಿ ಏಕಬಳಕೆಯ ಡಯಾಲೈಸರ್ ಯಂತ್ರಗಳನ್ನ ಅಳವಡಿಸಲು ನಿರ್ಧರಿಸಿದರು. ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ರಾಜ್ಯಾದ್ಯಂತ 800 ಹೊಸ ಏಕಬಳಕೆಯ ಡಯಾಲಿಸಿಸ್ ಯಂತ್ರಗಳನ್ನ ಅಳವಡಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ.

ಇದೀಗ ಹೊಸ ಡಯಾಲೈಸರ್ ಗಳ ಅಳವಡಿಕೆ ಕಾರ್ಯ ಬಹುತೇಕ ಅಂತಿಮ ಘಟ್ಟಕ್ಕೆ ತಲುಪಿದ್ದು, ನಾಳೆ(ಜ.27)ಯಿಂದ ಏಕಬಳಕೆಯ ಡಯಾಲಿಸಿಸ್ ಆರೋಗ್ಯ ಸೇವೆ ಆರಂಭವಾಗಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನಾಳೆ ಸಂಜೆ 5 ಗಂಟೆಗೆ ಬೆಂಗಳೂರಿನ ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ಹೊಸ ಡಯಾಲಿಸಿಸ್ ಸೇವೆಗೆ ಚಾಲನೆ ನೀಡಲಿದ್ದಾರೆ. ಬೆಂಗಳೂರಿನ ಕೆ.ಸಿಜನರಲ್ ಆಸ್ಪತ್ರೆಯೊಂದರಲ್ಲೇ 20 ಹೊಸ ಏಕ ಬಳಕೆಯ ಡಯಾಲೈಸರ್ ಯಂತ್ರಗಳನ್ನ ಅಳವಡಿಸಲಾಗಿದ್ದು, ಪ್ರತಿನಿತ್ಯ 72 ರೋಗಿಗಳಿಗೆ ಡಯಾಲಿಸಿಸ್ ಸೇವೆ ಒದಗಿಸುವ ಸಾಮಥ್ರ್ಯ ಕಲ್ಪಿಸಲಾಗಿದೆ.

ರಾಜ್ಯದಲ್ಲಿದ್ದ 171 ಡಯಾಲಿಸಿಸ್ ಕೇಂದ್ರಗಳನ್ನ 219ಕ್ಕೆ ಹೆಚ್ಚಿಸಲಾಗಿದ್ದು, 48 ಹೊಸ ತಾಲೂಕುಗಳಲ್ಲಿ ಡಯಾಲಿಸಿಸ್ ಕೇಂದ್ರಗಳನ್ನ ಆರಂಭಿಸಲಾಗಿದೆ. 219 ಕೇಂದ್ರಗಳಲ್ಲಿ ಒಟ್ಟು 800 ಏಕಬಳಕೆಯ ಡಯಾಲೈಸರ್ ಯಂತ್ರಗಳನ್ನ ಅಳವಡಿಸಲು ಕ್ರಮ ಕೈಗೊಳ್ಳಲಾಗಿದೆ.

ಬೆಂಗಳೂರು ವಿಭಾಗದ 57 ಡಯಾಲಿಸಿಸ್ ಕೇಂದ್ರಗಳಲ್ಲಿ 250 ಯಂತ್ರಗಳು, ಮೈಸೂರು ವಿಭಾಗದ 55 ಕೇಂದ್ರಗಳಲ್ಲಿ 222 ಯಂತ್ರಗಳು, ಬೆಳಗಾವಿ ವಿಭಾಗದ 62 ಕೇಂದ್ರಗಳಲ್ಲಿ 201 ಯಂತ್ರಗಳು, ಕಲಬುರಗಿ ವಿಭಾಗದ 45 ಕೇಂದ್ರಗಳಲ್ಲಿ 127 ಯಂತ್ರಗಳು ಸೇರಿದಂತೆ ಒಟ್ಟು 800 ಏಕಬಳಕೆಯ ಡಯಾಲೈಸರ್ ಗಳ ಅಳವಡಿಕೆ ಕಾರ್ಯ ಅಂತಿಮ ಘಟ್ಟಕ್ಕೆ ತಲುಪಿದೆ.

ನಾಳೆಯಿಂದ 475 ಏಕಬಳಕೆಯ ಡಯಾಲೈಸರ್ ಗಳು ಕಾರ್ಯಾರಂಭಿಸಲಿದ್ದು, ರೋಗಿಗಳಿಗೆ ಸೊಂಕು ರಹಿತ ಡಯಾಲಿಸಿಸ್ ಸೇವೆ ಲಭ್ಯವಾಗಲಿದೆ. ಉಳಿದ ಕೇಂದ್ರಗಳಲ್ಲೂ ಒಂದು ತಿಂಗಳೊಳಗೆ ಏಕ ಬಳಕೆಯ ಡಯಾಲಿಸಿಸ್ ಯಂತ್ರಗಳ ಸೇವೆ ಆರಂಭವಾಗಲಿದೆ. ಪ್ರತಿಯೊಂದು ಡಯಾಲಿಸಿಸ್ ಸೈಕಲ್‍ಗೆ 1,573ರೂ.ಗಳು ವೆಚ್ಚವಾಗಲಿದ್ದು, ಸರಕಾರವೇ ವೆಚ್ಚವನ್ನ ಭರಿಸಿ ರೋಗಿಗಳಿಗೆ ಉಚಿತವಾಗಿ ಆರೋಗ್ಯ ಸೇವೆ ಒದಗಿಸಲಿದೆ. 800 ಡಯಾಲಿಸಿಸ್ ಯಂತ್ರಗಳಿಂದ ವಾರ್ಷಿಕ 7.20 ಲಕ್ಷ ಡಯಾಲಿಸಿಸ್ ಸೇವೆಗಳನ್ನ ಒದಗಿಸಲು ಸಾಮಥ್ರ್ಯ ಕಲ್ಪಿಸಲಾಗಿದ್ದು, ಸೊಂಕು ರಹಿತ ಡಯಾಲಿಸಿಸ್ ವ್ಯವಸ್ಥೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ತಿಳಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News