ವೈದ್ಯೆ ಮೇಲಿನ ಅತ್ಯಾಚಾರ, ಕೊಲೆ ಖಂಡಿಸಿ ಪ್ರತಿಭಟನೆ : ನಾಳೆ ರಾಜ್ಯದಲ್ಲಿಯೂ ಒಪಿಡಿ ಬಂದ್

Update: 2024-08-16 15:21 GMT
ಸಾಂದರ್ಭಿಕ ಚಿತ್ರ

ಬೆಂಗಳೂರು : ಕೊಲ್ಕತ್ತಾ ಸರಕಾರಿ ವೈದ್ಯಕೀಯ ಕಾಲೇಜಿನಲ್ಲಿ ನಡೆದ ವೈದ್ಯೆಯ ಅತ್ಯಾಚಾರ ಮತ್ತು ಹತ್ಯೆ ಖಂಡಿಸಿ ರಾಷ್ಟ್ರವ್ಯಾಪಿ ಕರೆ ನೀಡಿರುವ ವೈದ್ಯರು ಹೊರರೋಗಿ ವಿಭಾಗ (ಒಪಿಡಿ) ಬಂದ್ ಹಿನ್ನೆಲೆ ಕರ್ನಾಟಕ ರಾಜ್ಯದಲ್ಲಿಯೂ ನಾಳೆ(ಆ.17) ಒಪಿಡಿ ಬಂದ್ ಆಗಲಿದೆ.

ಬೆಳಗ್ಗೆ 6 ರಿಂದ ಆ.18 ಬೆಳಗ್ಗೆ 6 ಗಂಟೆಯ ವರೆಗೂ ಆಸ್ಪತ್ರೆ, ಕ್ಲಿನಿಕ್‍ಗಳಲ್ಲಿ ತುರ್ತು ಹಾಗೂ ಗಂಭೀರವಲ್ಲದ ಸಾಮಾನ್ಯ ವೈದ್ಯಕೀಯ ಸೇವೆಗಳ ವಿಭಾಗವನ್ನು ಮುಚ್ಚಲಾಗುವುದು. ತುರ್ತು ಸೇವೆಗಳನ್ನು ಹೊರತುಪಡಿಸಿ ಎಲ್ಲ ವೈದ್ಯಕೀಯ ಸಂಸ್ಥೆಗಳು ಮುಚ್ಚಲಿವೆ. ಇದಕ್ಕೆ ಆಸ್ಪತ್ರೆಗಳು, ಖಾಸಗಿ ಚಿಕಿತ್ಸಾಲಯಗಳು ಪೂರ್ಣ ಬೆಂಬಲ ನೀಡಲಿದೆ ಎಂದು ಐಎಂಐ ತಿಳಿಸಿದೆ.

ಖಾಸಗಿ ಆಸ್ಪತ್ರೆಗಳು ಮತ್ತು ನರ್ಸಿಂಗ್ ಹೋಮ್ಸ್ ಅಸೋಸಿಯೇಷನ್(ಫನಾ), ಫನಾ ಬೆಂಬಲ ಖಾಸಗಿ ಆಸ್ಪತ್ರೆಗಳ ಒಕ್ಕೂಟ, ಮಕ್ಕಳ ವೈದ್ಯರ ಸಂಘ, ಆಥೋರ್ಪಿಡಿಕ್ ಸಂಘ, ಮೆಡಿಕಲ್ ಕಾಲೇಜು ವೈದ್ಯರ ಸಂಘ,ಕರ್ನಾಟಕ ಅಸೋಸಿಯೇಷನ್ ಆಫ್ ರೆಸಿಡೆಂಟ್ ಡಾಕ್ಟರ್ಸ್(ಕೆಎಆರ್‍ಡಿ) ಪ್ರತಿಭಟನೆಗೆ ಬೆಂಬಲ ಸೂಚಿಸಿವೆ.

ರಾಜ್ಯ ಸರಕಾರಿ ವೈದ್ಯಾಧಿಕಾರಿಗಳ ಸಂಘ ಸಹ ನೈತಿಕ ಬೆಂಬಲ ವ್ಯಕ್ತಪಡಿಸಿದ್ದು, ‌ ವೈದ್ಯಕೀಯ ಕಾಲೇಜಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯರು, ವಿದ್ಯಾರ್ಥಿಗಳು ಪ್ರತಿಭಟನೆಗೆ ಧುಮಕಲಿದ್ದಾರೆ. ಹೀಗಾಗಿ, ಖಾಸಗಿ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆ ಹೊರತುಪಡಿಸಿ ಉಳಿದ ಕಾಯಿಲೆಗಳಿಗೆ ಚಿಕಿತ್ಸೆ ದೊರೆಯುವ ಸಾಧ್ಯತೆ ಕಡಿಮೆ ಎಂದು ಹೇಳಲಾಗುತ್ತಿದೆ.

ಈ ಕುರಿತು ಪ್ರತಿಕ್ರಿಯಿಸಿದ ಭಾರತೀಯ ವೈದ್ಯಕಿಯ ಸಂಘ ರಾಜ್ಯಾಧ್ಯಕ್ಷ ಡಾ.ಎಸ್.ಶ್ರೀನಿವಾಸ್, ‘ದೇಶದಲ್ಲಿ ವೈದ್ಯರ ರಕ್ಷಣೆಗೆ ಯಾವುದೇ ಕಾನೂನು ಇಲ್ಲ. ಇದರಿಂದಾಗಿ ಅಸುರಕ್ಷಿತ ವಾತಾವರಣದಲ್ಲಿ ಕರ್ತವ್ಯ ಮಾಡಬೇಕಾದ ಪರಿಸ್ಥಿತಿಯಲ್ಲಿ ಇದ್ದೇವೆ. ಈ ರೀತಿ ನಡೆಯದಂತೆ ಕೇಂದ್ರ ಸರಕಾರ, ವೈದ್ಯರ ಸುರಕ್ಷತೆಗೆ ತಕ್ಷಣ ಪ್ರತ್ಯೇಕ ಕಾನೂನು ಜಾರಿಗೆ ತರಬೇಕು’ ಎಂದು ಆಗ್ರಹಿಸಿದರು.

‘ವೈದ್ಯರ ಮುಷ್ಕರದಿಂದಾಗಿ ರೋಗಿಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳಲು ಕ್ರಮಕ್ಕೆ ಸೂಚಿಸಲಾಗಿದೆ. ಏನೆಲ್ಲ ಕ್ರಮ ಕೈಗೊಳ್ಳಲು ಸಾಧ್ಯವಿದೆ ಎಂದು ಚರ್ಚಿಸಲು ಹೇಳಿದ್ದೇನೆ. ತೊಂದರೆಯಾಗದಂತೆ ಪ್ರತಿಭಟನೆ ಮಾಡುತ್ತೇವೆಂದು ವೈದ್ಯರು ಹೇಳಿದ್ದಾರೆ. ಸಾರ್ವಜನಿಕರಿಗೆ ತೊಂದರೆಯಾಗಬಾರದು. ಎಲ್ಲ ಅಸೋಸಿಯೇಷನ್ ಸಭೆ ಕರೆದು ಕ್ರಮದ ಬಗ್ಗೆ ಚರ್ಚಿಸುತ್ತೇನೆ’

-ದಿನೇಶ್ ಗುಂಡೂರಾವ್, ಆರೋಗ್ಯ ಸಚಿವ

ಯಾವ ಸೇವೆ ಇಲ್ಲ? :

-ದಂತ ಚಿಕಿತ್ಸೆ

-ಶಸ್ತ್ರಚಿಕಿತ್ಸೆ

-ಜ್ವರ, ಕೆಮ್ಮು, ನೆಗಡಿಗೆ ಚಿಕಿತ್ಸೆ ಸಿಗಲ್ಲ

-ಡಯಾಲಿಸಿಸಿ

-ಕ್ಲಿನಿಕ್ ಸೇವೆ

-ಮಕ್ಕಳ ಓಪಿಡಿ

ಯಾವ ಸೇವೆ ಲಭ್ಯ?

* ಒಳರೋಗಿ ಸೇವೆ

* ಹೆರಿಗೆ, ತುರ್ತು ಶಸ್ತ್ರಚಿಕಿತ್ಸೆ

* ತುರ್ತು ಸೇವೆ

* ಮೆಡಿಕಲ್ ಶಾಪ್ ಇರಲಿದೆ

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News