ರಾಯಚೂರು | ದಲಿತ ಮುಖಂಡನ ಹತ್ಯೆ; 12 ಜನರ ವಿರುದ್ಧ ಎಫ್‌ಐಆರ್ ದಾಖಲು
ರಾಯಚೂರು, ಅ.30: ದಲಿತ ಮುಖಂಡರೊಬ್ಬರನ್ನು ನಾಲ್ವರು ದುಷ್ಕರ್ಮಿಗಳು ಹರಿತವಾದ ಆಯುಧಗಳಿಂದ ಕಡಿದು ಕೊಲೆಗೈದ ಘಟನೆ ರಾಯಚೂರಿನಲ್ಲಿ ಸೋಮವಾರ ವರದಿಯಾಗಿದೆ.
ಹತ್ಯೆಯಾದ ದಲಿತ ನಾಯಕನನ್ನು ರಾಯಚೂರು ಜಿಲ್ಲೆಯ ರಬ್ಬಂಕಲ್ ಗ್ರಾಮದ ನಿವಾಸಿ ಪ್ರಸಾದ್ (40) ಎಂದು ಗುರುತಿಸಲಾಗಿದೆ. ಪ್ರಸಾದ್ ಅವರು ತನ್ನ ಬೈಕ್‌ನಲ್ಲಿ ಮುಂಜಾನೆ ಹೊಲಕ್ಕೆ ತೆರಳುತ್ತಿದ್ದ ಸಂದರ್ಭ ಹೊಲದ ಸಮೀಪ ಕಾಯುತ್ತಿದ್ದ ದುಷ್ಕರ್ಮಿಗಳು ಹರಿತವಾದ ಆಯುಧಗಳಿಂದ ದಾಳಿ ನಡೆಸಿ ಅವರನ್ನು ಹತ್ಯೆಗೈದಿದ್ದಾರೆ. ಅನಂತರ ಕೂಡಲೇ ಅಲ್ಲಿಂದ ಪರಾರಿಯಾಗಿದ್ದಾರೆನ್ನಲಾಗಿದೆ.
ರಾಯಚೂರು ಜಿಲ್ಲಾ ಪೊಲೀಸ್ ಅಧೀಕ್ಷಕ ನಿಖಿಲ್ ಬಿ. ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಪ್ರಸಾದ್ ಅವರನ್ನು ಹತ್ಯೆಗೈದಿರುವ ಸಾಧ್ಯತೆ ಇದೆ ಎಂದು ಅವರು ಹೇಳಿದ್ದಾರೆ.
‘‘ಪ್ರಸಾದ್‌ನ ಕುಟುಂಬದ ಸದಸ್ಯರು ನೀಡಿದ ದೂರಿನ ಆಧಾರದಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. 12 ಶಂಕಿತರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಆರೋಪಿಗಳನ್ನು ಪತ್ತೆ ಹಚ್ಚಲು ನಾವು ಮೂವರ ತಂಡವನ್ನು ರೂಪಿಸಿದ್ದೇವೆ. ಹಳೆಯ ದ್ವೇಷದ ಕಾರಣಕ್ಕಾಗಿ ಪ್ರಸಾದ್ ಅವರನ್ನು ಹತ್ಯೆಗೈದಿರುವುದಾಗಿ ಶಂಕಿಸಲಾಗಿದೆ’’ ಎಂದು ಪೊಲೀಸ್ ಅಧೀಕ್ಷಕ ನಿಖಿಲ್ ಹೇಳಿದ್ದಾರೆ.
ಪ್ರಸಾದ್ ಅವರು ಸಚಿವ ಎಸ್.ಎನ್. ಬೋಸರಾಜು ಅವರ ಆಪ್ತ. ಪ್ರಸಾದ್ ಅವರು ದಲಿತ ಚಳುವಳಿಯಲ್ಲಿ ಸಕ್ರಿಯರಾಗಿದ್ದರು ಎಂದು ಹೇಳಲಾಗಿದೆ.
ಕೋಲಾರದಲ್ಲಿ ನಡೆದ ಇದೇ ರೀತಿಯ ಘಟನೆಯೊಂದರಲ್ಲಿ ಕಾಂಗ್ರೆಸ್ ಹಾಗೂ ದಲಿತ ನಾಯಕ ಎಂ. ಶ್ರೀನಿವಾಸ್ ಆಲಿಯಾಸ್ ಕೌನ್ಸಿಲರ್ ಶ್ರೀನಿವಾಸ್ ಅವರನ್ನು ಅಕ್ಟೋಬರ್ 23ರಂದು ಹತ್ಯೆಗೈಯಲಾಗಿತ್ತು. ಬೈಕ್‌ಗಳಲ್ಲಿ ಬಂದ 6 ಮಂದಿ ದುಷ್ಕರ್ಮಿಗಳು ಕೋಲಾರ ಜಿಲ್ಲೆಯ ಶ್ರೀನಿವಾಸೂರಿನ ಹೊರವಲಯದಲ್ಲಿ ಅವರ ಮೇಲೆ ಹರಿತವಾದ ಆಯುಧಗಳಿಂದ ದಾಳಿ ನಡೆಸಿ ಹತ್ಯೆಗೈದಿದ್ದರು. ಶ್ರೀನಿವಾಸ್ ಅವರು ಗೃಹ ಸಚಿವ ಜಿ. ಪರಮೇಶ್ವರ್ ಅವರ ಆಪ್ತರಾಗಿದ್ದರು.