ಹಸುಗಳ ಕೆಚ್ಚಲು ಕೊಯ್ದ ಘಟನೆಯ ಹಿಂದೆ ಇರುವವರನ್ನು ಪೊಲೀಸರು ಪತ್ತೆ ಮಾಡಲಿ : ಆರ್‌.ಅಶೋಕ್‌ ಆಗ್ರಹ

Update: 2025-01-13 14:32 GMT

ಆರ್‌.ಅಶೋಕ್‌

ಬೆಂಗಳೂರು : ಚಾಮರಾಜಪೇಟೆಯಲ್ಲಿ ಹಸುಗಳ ಕೆಚ್ಚಲು ಕೊಯ್ದ ಘಟನೆಯ ಹಿಂದೆ ಇರುವವರನ್ನು ರಾಜ್ಯ ಸರಕಾರ ಪತ್ತೆ ಮಾಡಬೇಕೇ ಹೊರತು ಒಬ್ಬ ವ್ಯಕ್ತಿಯನ್ನು ಕಾಟಾಚಾರಕ್ಕೆ ಬಂಧಿಸುವುದಲ್ಲ. ಪೊಲೀಸರು ಇದರ ಹಿಂದಿರುವವರನ್ನು ಹುಡುಕಲಿ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ್‌ ಆಗ್ರಹಿಸಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಹಿಂದೂಗಳಿಗೆ ಘಾಸಿಯಾಗುವ ಘಟನೆ ನಡೆದಿದೆ. ಸಂಕ್ರಾಂತಿ ಹಬ್ಬದ ಸಮಯದಲ್ಲೇ ಹಸುಗಳ ಕೆಚ್ಚಲು ಕೊಯ್ದಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ವಹಿಸಬೇಕೆಂದು ಸರಕಾರಕ್ಕೆ ಆಗ್ರಹಿಸಿದ್ದೆ. ಈಗ ಕಾಟಾಚಾರಕ್ಕಾಗಿ ಒಬ್ಬನನ್ನು ಬಂಧಿಸಿದ್ದು, ಈತ ಬಿಹಾರದಿಂದ ಬಂದವನು ಎನ್ನಲಾಗಿದೆ. ಆದರೆ ಈತ ಇದೇ ಊರಿನಲ್ಲಿ ಹತ್ತು ವರ್ಷಗಳಿಂದ ನೆಲೆಸಿದ್ದು, ಆತನ ಅಣ್ಣನಿಗೆ ಫ್ಯಾಕ್ಟರಿ ಕೂಡ ಇದೆ. ಪೊಲೀಸರು ಈತನನ್ನು ವಿಚಾರಣೆ ಮಾಡಿ, ಇದರ ಹಿಂದೆ ಯಾರಿದ್ದಾರೆ ಎಂದು ಪತ್ತೆ ಮಾಡಬೇಕಿತ್ತು ಎಂದರು.

ಈ ಘಟನೆಯಲ್ಲಿ ಯಾರ ಕೈವಾಡವಿದೆ ಎಂದು ತನಿಖೆ ಮಾಡಬೇಕಿತ್ತು. ಇಲ್ಲಿ ಪಶು ಆಸ್ಪತ್ರೆಯ ಜಾಗವಿದ್ದು, ಅದನ್ನು ವಕ್ಫ್‌ಗೆ ನೀಡಲು ಪ್ರಯತ್ನ ನಡೆದಿತ್ತು. ಸುಮಾರು 500 ಕೋಟಿ ರೂ. ಬೆಲೆಬಾಳುವ ಆಸ್ತಿಯನ್ನು ಲೂಟಿ ಮಾಡಲು ನಕಲಿ ದಾಖಲೆಗಳನ್ನು ಸರಕಾರ ಸೃಷ್ಟಿ ಮಾಡಿತ್ತು. ಅದರ ವಿರುದ್ಧ ಹೋರಾಟ ಮಾಡಿದ ಕರ್ಣ ಅವರ ಮೇಲೆ ಸೇಡು ತೀರಿಸಿಕೊಳ್ಳಲು ಹೀಗೆ ಮಾಡಿದ್ದಾರೆ. ಸಚಿವ ಝಮೀರ್‌ ಅಹ್ಮದ್‌ ಹಸು ನೀಡುವುದರಿಂದ ಪರಿಹಾರ ಸಿಗಲ್ಲ. ಇದಕ್ಕೆ ನ್ಯಾಯ ಸಿಗಬೇಕಿದೆ ಎಂದು ಆಗ್ರಹಿಸಿದರು.

ಡಿಸಿಎಂ ಡಿ.ಕೆ.ಶಿವಕುಮಾರ್‌ ಶ್ಲೋಕ ಹೇಳಿದರೆ, ಸಚಿವ ರಾಜಣ್ಣ ಟೀಕೆ ಮಾಡುತ್ತಿದ್ದಾರೆ. ಸಚಿವ ಪರಮೇಶ್ವರ್‌ ಕೂಡ ಕೆಂಡಕಾರಿದ್ದಾರೆ. ಕೆಲವು ಶಾಸಕರು ಮುಂದಿನ ಸಿಎಂ ಶಿವಕುಮಾರ್‌ ಎನ್ನುತ್ತಿದ್ದಾರೆ. ಜನರು ಬೆಲೆ ಏರಿಕೆಯಿಂದ ಕಂಗಾಲಾಗಿದ್ದಾರೆ. ಇಂತಹ ಪಾಪಿ ಸರಕಾರ ಯಾಕಾದರೂ ಬಂತೋ ಎಂದು ಜನರು ಶಾಪ ಹಾಕುತ್ತಿದ್ದಾರೆ ಎಂದರು.

ಕಾಂಗ್ರೆಸ್‌ ಉಸ್ತುವಾರಿ ಸುರ್ಜೇವಾಲ ಬಂದು ಹೋದ ಬಳಿಕವೂ ಈ ಸಮಸ್ಯೆ ನಿವಾರಣೆಯಾಗಲ್ಲ. ಪವರ್‌‌ ಶೇರಿಂಗ್‌ ಬಗ್ಗೆ ಶಾಸಕರಿಗೆ ಸ್ಪಷ್ಟವಾಗಬೇಕಿದೆ. ಹೈಕಮಾಂಡ್‌ ಡಿ.ಕೆ.ಶಿವಕುಮಾರ್‌ ಅವರಿಗೆ ಮಾತು ನೀಡಿದೆ. ಅದರ ಬಗ್ಗೆ ಸರಿಯಾಗಿ ತಿಳಿಸಲಿ ಎಂದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News