ಸಂವಿಧಾನ ಪೀಠಿಕೆ ವಾಚನ: 2.27 ಕೋಟಿ ಜನರು ಆನ್‍ಲೈನ್ ಮೂಲಕ ನೋಂದಣಿ

Update: 2023-09-13 17:03 GMT

ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ

ಬೆಂಗಳೂರು, ಸೆ.13: ಅಂತರ್‍ರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಅಂಗವಾಗಿ ಸೆ.15ರಂದು ಬೆಳಗ್ಗೆ 10 ಗಂಟೆಗೆ ವಿಧಾನಸೌಧದ ಭವ್ಯ ಮೆಟ್ಟಿಲುಗಳ ಮೇಲೆ ಆಯೋಜಿಸಲಾಗಿರುವ ‘ಸಂವಿಧಾನ ಪೀಠಿಕೆ’ ವಾಚನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು 2.27 ಕೋಟಿ ಜನರು ಆನ್‍ಲೈನ್ ಮೂಲಕ ನೋಂದಣಿ ಮಾಡಿಸಿಕೊಂಡಿದ್ದಾರೆ ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ತಿಳಿಸಿದರು.

ಬುಧವಾರ ವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿರುವ ಈ ಕಾರ್ಯಕ್ರಮದಲ್ಲಿ ಶಾಲಾ-ಕಾಲೇಜು ಮಕ್ಕಳು, ಹಲವಾರು ಖಾಸಗಿ ಉದ್ಯಮ-ಸಂಸ್ಥೆಗಳು, ಸರಕಾರಿ ಇಲಾಖೆಗಳು, ಬ್ಯಾಂಕ್ ಗಳು ಕೈ ಜೋಡಿಸಿವೆ ಎಂದರು.

ಪ್ರಜಾಪ್ರಭುತ್ವ ದಿನಾಚರಣೆಯನ್ನು ಜಗತ್ತಿನಾದ್ಯಾಂತ ಆಚರಿಸಲಾಗುತ್ತಿದೆ. ಜಗತ್ತಿನ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ದೇಶವಾಗಿರುವ ನಮ್ಮ ಭಾರತದ ಸಂವಿಧಾನ ಮಾದರಿ ಸಂವಿಧಾನವಾಗಿದೆ. ಸಂವಿಧಾನದ ಪೀಠಿಕೆ ವಾಚನ ಪ್ರಸ್ತುತ ದಿನಮಾನಗಳಲ್ಲಿ ಆಚರಿಸುವ ಮೂಲಕ ಇದೊಂದು ದೇಶಾದ್ಯಂತ ಮಹತ್ವದ ಚಳುವಳಿಯಾಗಬೇಕು ಎಂದು ಅವರು ಹೇಳಿದರು.

ಪ್ರಜಾಪ್ರಭುತ್ವದ ವ್ಯವಸ್ಥೆ ಬಲವರ್ಧನೆ ಆಗಬೇಕಾದರೆ ಸಂವಿಧಾನದ ಪೀಠಿಕೆಯನ್ನು ಅರ್ಥೈಸಿಕೊಳ್ಳಬೇಕು. ಸಂವಿಧಾನದ ಪೀಠಿಕೆಯಲ್ಲಿಯೆ ಸಂವಿಧಾನದ ವಿಷಯಗಳು ಅಡಕವಾಗಿವೆ, ಅದನ್ನು ಮಕ್ಕಳಿಗೆ ಬಾಲ್ಯದಿಂದಲೆ ಅರ್ಥಮಾಡಿಸಬೇಕು. ಅಲ್ಲದೆ, ಇಂದಿನ ಯುವಪೀಳಿಗೆಗೆ ಸಂವಿಧಾನದ ಮೂಲ ಉದ್ದೇಶಗಳನ್ನು ತಿಳಿಸಿಕೊಡಬೇಕಾಗಿದೆ ಎಂದು ಮಹದೇವಪ್ಪ ತಿಳಿಸಿದರು.

ಭಾರತವು ವಿವಿಧತೆಯಲ್ಲಿ ಏಕತೆಯನ್ನು ಸಾರುವ ದೇಶವಾಗಿದೆ, ಇದೆಲ್ಲ ಸಾಧ್ಯವಾಗಿರುವುದು ನಮ್ಮ ಸಂವಿಧಾನದಿಂದ. ಯಾವುದೇ ಸಮುದಾಯ ಅಥವಾ ಧರ್ಮ ಪರಸ್ಪರ ದ್ವೇಷ ಅಸೂಯೆಗಳಿಗೆ ಅವಕಾಶ ಕೊಡದೆ ಸಂವಿಧಾನವನ್ನು ರಕ್ಷಣೆ ಮಾಡುವಲ್ಲಿ ಸಫಲವಾಗಬೇಕು. ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಸಂವಿಧಾನ ಪೀಠಿಕೆ ಓದುವುದು ಒಂದು ಆಂದೋಲನವಾಗಬೇಕು ಎಂದು ಅವರು ಕರೆ ನೀಡಿದರು.

ಮುಂದಿನ ದಿನಗಳಲ್ಲಿ ಶಾಲಾ ಕಾಲೇಜುಗಳಲ್ಲಿ, ಸರಕಾರಿ ಕಚೇರಿಗಳಲ್ಲಿ ಸಂವಿಧಾನ ಪೀಠಿಕೆಯನ್ನು ಕಡ್ಡಾಯವಾಗಿ ಓದಿಸಲಾಗುವುದು. ಈ ಸಂಬಂಧ ಆದೇಶವನ್ನು ಹೊರಡಿಸಲಾಗಿದೆ ಎಂದು ಮಹದೇವಪ್ಪ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಕ್ಯಾಪ್ಟನ್ ಮಣಿವಣ್ಣನ್ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News