‘ಎಸ್‍ಬಿಐ-ಪಿಎನ್‍ಬಿ ಬ್ಯಾಂಕ್‌ನಲ್ಲಿನ ಠೇವಣಿ ವಾಪಸ್’ ; ಸರಕಾರದ ಸುತ್ತೋಲೆಗೆ 15 ದಿನ ತಡೆ
ಬೆಂಗಳೂರು : ಭಾರತೀಯ ಸ್ಟೇಟ್ ಬ್ಯಾಂಕ್(ಎಸ್‍ಬಿಐ) ಹಾಗೂ ಪಂಜಾಬ್ ನ್ಯಾಷನಲ್ ಬ್ಯಾಂಕ್(ಪಿಎನ್‍ಬಿ)ಗಳಲ್ಲಿ ಇರಿಸಿರುವ ವಿವಿಧ ಇಲಾಖೆಗಳ ಠೇವಣಿಗಳನ್ನು ಹಿಂಪಡೆಯುವ ಸಂಬಂಧ ಆ.12ರಂದು ಹೊರಡಿಸಿದ್ದ ಸುತ್ತೋಲೆಗೆ 15 ದಿನ ತಡೆ ನೀಡಲು ರಾಜ್ಯ ಸರಕಾರ ನಿರ್ಧರಿಸಿದೆ.
ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿ ಮಾಡಿದ್ದ ಶಿಫಾರಸ್ಸಿನ ಹಿನ್ನೆಲೆಯಲ್ಲಿ ಎಸ್‍ಬಿಐ ಹಾಗೂ ಪಿಎನ್‍ಬಿಯ ವಿವಿಧ ಶಾಖೆಗಳಲ್ಲಿ ಇರಿಸಿರುವ ಠೇವಣಿಗಳನ್ನು ಹಿಂಪಡೆದುಕೊಳ್ಳುವಂತೆ ಎಲ್ಲ ಇಲಾಖೆಗಳಿಗೆ ಸರಕಾರ ಸುತ್ತೋಲೆ ಮೂಲಕ ನಿದೇರ್ಶನ ನೀಡಿತ್ತು.
ಆದರೆ, ಶುಕ್ರವಾರ(ಆ.16) ಎರಡು ಬ್ಯಾಂಕ್‍ಗಳು ಸರಕಾರಕ್ಕೆ ಲಿಖಿತ ಹೇಳಿಕೆಯನ್ನು ನೀಡಿ, 15 ದಿನಗಳಲ್ಲಿ ಸಮಸ್ಯೆಯನ್ನು ಬಗೆಹರಿಸುವುದಾಗಿ ಮನವಿ ಸಲ್ಲಿಸಿದೆ. ಅಲ್ಲದೇ, ಬ್ಯಾಂಕಿನ ಹಿರಿಯ ಅಧಿಕಾರಿಗಳು ಆರ್ಥಿಕ ಇಲಾಖೆಯ ಉನ್ನತ ಅಧಿಕಾರಿಗಳನ್ನು ಭೇಟಿ ನೀಡಿ ಬ್ಯಾಂಕುಗಳು ಸಲ್ಲಿಸಿರುವ ಮನವಿಯನ್ನು ಪುರಸ್ಕರಿಸುವಂತೆ ಕೋರಿವೆ.
ಬ್ಯಾಂಕುಗಳ ಮನವಿಯನ್ನು ಪರಿಶೀಲಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಠೇವಣಿಗಳನ್ನು ವಾಪಾಸ್ ಪಡೆಯುವ ಸಂಬಂಧ ಹೊರಡಿಸಿರುವ ಸುತ್ತೋಲೆಯನ್ನು 15 ದಿನ ತಡೆ ಹಿಡಿಯುವಂತೆ ನಿರ್ದೇಶನ ನೀಡಿದ್ದಾರೆ. ಇದರಿಂದಾಗಿ, ಬ್ಯಾಂಕ್‍ಗಳಿಗೆ ಸಮಸ್ಯೆಗಳನ್ನು ಬಗೆಹರಿಸಲು ಮತ್ತು ಸರಕಾರದ ಕಳವಳವನ್ನು ನಿವಾರಿಸಲು ಸಾಕಷ್ಟು ಸಮಯವನ್ನು ನೀಡುತ್ತದೆ.
ಅಲ್ಲದೇ, ಸರಕಾರವು ತನ್ನ ಎಲ್ಲ ವ್ಯವಹಾರಗಳಲ್ಲಿ ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ಖಚಿತಪಡಿಸಿಕೊಳ್ಳಲು ಬದ್ಧವಾಗಿದೆ. ನಾವು ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುವುದನ್ನು ಮುಂದುವರೆಸುತ್ತೇವೆ ಮತ್ತು ಎಲ್ಲ ಷೇರುದಾರರ ಹಿತಾಸಕ್ತಿಗಳನ್ನು ರಕ್ಷಿಸಲು ಸೂಕ್ತ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಸರಕಾರದ ಪ್ರಕಟಣೆ ತಿಳಿಸಿದೆ.
ಇತ್ತೀಚೆಗೆ ಬೆಳಕಿಗೆ ಬಂದ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ಹಾಗೂ 2012-13ನೆ ಸಾಲಿನಲ್ಲಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ರಾಜ್ಯ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಗೆ ಸಂಬಂಧಿಸಿದ ಪ್ರಕರಣಗಳನ್ನು ಉಲ್ಲೇಖಿಸಿ ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿಯು ಎಸ್‍ಬಿಐ ಹಾಗೂ ಪಿಎನ್‍ಬಿಯಲ್ಲಿ ಸರಕಾರದ ಯಾವುದೆ ಇಲಾಖೆಯ ಠೇವಣಿಗಳನ್ನು ಇಡದಂತೆ ಶಿಫಾರಸ್ಸು ಮಾಡಿತ್ತು.