ರಾಜ್ಯಾದ್ಯಂತ ಪಟಾಕಿ ಗೋದಾಮುಗಳ ಸುರಕ್ಷತಾ ಸಮೀಕ್ಷೆ: ಡಿಸಿಎಂ ಡಿ.ಕೆ.ಶಿವಕುಮಾರ್

Update: 2023-10-08 07:59 GMT

ಬೆಂಗಳೂರು, ಅ.8: ರಾಜ್ಯಾದ್ಯಂತ ಇರುವ ಪಟಾಕಿ ಗೋದಾಮುಗಳ ಸರ್ವೇ ನಡೆಸಿ, ಸುರಕ್ಷತಾ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಸದಾಶಿವ ನಗರದ ನಿವಾಸದ ಬಳಿ ಇಂದು ಬೆಳಗ್ಗೆ ಮಾಧ್ಯಮದವರ ಜೊತೆ ಮಾತನಾಡಿದ ಅವರು, ರಾಜ್ಯದಲ್ಲಿರುವ ಪಟಾಕಿ ಗೋದಾಮುಗಳಿಗೆ ಪೊಲೀಸ್ ಇಲಾಖೆ, ಜಿಲ್ಲಾಧಿಕಾರಿಗಳಿಗೆ ನೋಟಿಸ್ ನೀಡಿ ಸುರಕ್ಷತೆ ಪರಿಶೀಲನೆ ಮಾಡಲು ಸೂಚನೆ ನೀಡಿರುವುದಾಗಿ ಹೇಳಿದರು.

ತಮಿಳುನಾಡಿನ ಕಾರ್ಮಿಕರು ದುರಂತದಲ್ಲಿ ಸಾವನ್ನಪ್ಪಿದ್ದಾರೆ, ಯುವಕರ ಸಾವು ದುಃಖಕರ ಸಂಗತಿ. ರಾಜ್ಯ ಸರಕಾರದಿಂದ ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದ್ದು, ತಮಿಳುನಾಡಿನವರು 3 ಲಕ್ಷ ರೂ. ಮೊತ್ತದ ಚೆಕ್ ಈಗಾಗಲೇ ವಿತರಣೆ ಮಾಡಿದ್ದಾರೆ. ಅವಘಡಕ್ಕೆ ಏನು ಕಾರಣ ಎಂದು ಶೀಘ್ರ ತನಿಖೆ ನಡೆಸಲಾಗುವುದು ಎಂದರು.

ಬೊಮ್ಮಾಯಿ ಹೇಳಿಕೆಯಂತೆ ನಡೆಯುತ್ತಿದ್ದೇವೆ

ಕ್ಷೇತ್ರಗಳಿಗೆ ಅನುದಾನದ ವಿಚಾರದಲ್ಲಿ ಕಾಂಗ್ರೆಸ್ ತಾರತಮ್ಯ ಮಾಡುತ್ತಿದ್ದು, ಬಿಜೆಪಿ ಈ ರೀತಿ ಮಾಡಿರಲಿಲ್ಲ ಎನ್ನುವ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಆರೋಪಕ್ಕೆ "ಬೊಮ್ಮಾಯಿ ವಿಧಾನ ಪರಿಷತ್ತಿನಲ್ಲಿ ಏನು ಹೇಳಿಕೆ, ಉತ್ತರ ನೀಡಿದ್ದರೊ, ಅದನ್ನೇ ನಾವು ಪಾಲನೆ ಮಾಡುತ್ತಿದ್ದೇವೆ ಎಂದು ತಿರುಗೇಟು ನೀಡಿದರು.

ಸೋಮವಾರ ಬ್ರಾಂಡ್ ಬೆಂಗಳೂರು ಸಭೆ

ಬ್ರಾಂಡ್ ಬೆಂಗಳೂರು ವಿಚಾರದಲ್ಲಿ 70,000 ಸಲಹೆಗಳು ಬಂದಿದ್ದು, ಅವುಗಳನ್ನು ಒಂದು ಕಡೆ ಕ್ರೋಡೀಕರಿಸಿ ವಿಂಗಡಿಸುವ ಕೆಲಸ ಮಾಡಲಾಗುತ್ತಿದೆ. ಇದಕ್ಕೆ ಏಳು ತಂಡಗಳನ್ನು ಮಾಡಿದ್ದು, ಈ ತಂಡಗಳು ಉತ್ತಮ ಸಲಹೆಗಳನ್ನು ಆಯ್ಕೆ ಮಾಡುತ್ತದೆ. Voice of the citizens, should be voice of the karnataka ಮಾತಿನಂತೆ ಜನಸಾಮಾನ್ಯರ ಮಾತುಗಳಿಗೆ ಮನ್ನಣೆ ನೀಡಲು ಸರ್ಕಾರ ಮುಂದಾಗಿದೆ. ಸೋಮವಾರ ಬೆಳಗ್ಗೆ ಜ್ಞಾನಜ್ಯೋತಿ ಸಭಾಂಗಣದಲ್ಲಿ ಸಭೆ ಸೇರಿ ಚರ್ಚೆ ನಡೆಸಲಾಗುವುದು ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News