ಕಲಬುರಗಿ ಕೇಂದ್ರೀಯ ವಿವಿಯಲ್ಲಿ ಸರಸ್ವತಿ ಪೂಜೆ: ವಿದ್ಯಾರ್ಥಿಗಳಿಂದ ವಿರೋಧ
ಕಲಬುರಗಿ, ಫೆ.15: ಇಲ್ಲಿನ ಕಡಗಂಚಿ ಕೇಂದ್ರೀಯ ವಿಶ್ವವಿದ್ಯಾನಿಲಯ ಆಡಳಿತ ಸೌಧ ಹಾಗೂ ಗ್ರಂಥಾಲಯಲ್ಲಿ ಆಯೋಜಿಸಿದ್ದ ಸರಸ್ವತಿ ಪೂಜೆಗೆ ಸಂಶೋಧನಾ ವಿಭಾಗದ ವಿದ್ಯಾರ್ಥಿಗಳು ವಿರೋಧ ವ್ಯಕ್ತಪಡಿಸಿರುವ ವೀಡಿಯೊ ವೈರಲ್ ಆಗಿದೆ.
ಕೇಂದ್ರೀಯ ವಿಶ್ವವಿದ್ಯಾನಿಲಯದ ಆಡಳಿತ ಸೌಧಾ ಹಾಗೂ ಗ್ರಂಥಾಲಯದಲ್ಲಿ ಬುಧವಾರ ಕೆಲವು ಶಿಕ್ಷಕರು ಮತ್ತು ಗ್ರಂಥಾಲಯದ ಮುಖ್ಯ ಅಧಿಕಾರಿಯ ಸಮ್ಮುಖದಲ್ಲಿ ವಸಂತ ಪಂಚಮಿ ನಿಮಿತ್ತ ವಿವಿಯಲ್ಲಿ ಚೌಟ್ರಿ ಹಾಕಿ ಸರಸ್ವತಿ ಪೂಜೆ ಮಾಡಲಾಗಿದೆ. ವಿವಿಯ ಕುಲಪತಿ ಪ್ರೊ.ಸತ್ಯನಾರಾಯಣ ಕೂಡಾ ಭಾಗವಹಿಸಿದ್ದರು. ಗ್ರಂಥಾಲಯದಲ್ಲಿ ಧಾರ್ಮಿಕ ಚಟುವಟಿಕೆ ಹಮ್ಮಿಕೊಂಡಿರುವುದಕ್ಕೆ ಸಂಶೋಧನಾ ವಿಭಾಗದ ವಿದ್ಯಾರ್ಥಿಗಳು ವಿರೋಧ ವ್ಯಕ್ತಪಡಿಸಿದ್ದಾರೆ.
ವಿವಿಯಲ್ಲಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಪ್ರತಿಮೆಗೆ ಹೂವಿನ ಹೊರಹಾಕಲು ಅಡ್ಡಿ ಪಡೆಸುವ ಸಿಬ್ಬಂದಿ ವಿವಿಯ ಸಾರ್ವಜನಿಕ ಪ್ರದೇಶದಲ್ಲಿ ಧಾರ್ಮಿಕ ಆಚರಣೆ ನಡೆಸುತ್ತಿರುವುದನ್ನು ಖಂಡಿಸಿದ್ದಾರೆ. ಗ್ರಂಥಾಲಯವನ್ನು ದೇವಸ್ಥಾನ ಮಾಡುತ್ತೀರಾ ಎಂದು ವಿವಿಯ ಮುಖ್ಯ ಗ್ರಂಥಪಾಲಕರನ್ನು ತರಾಟೆಗೈದಿದ್ದಾರೆ.
ವಿದ್ಯಾರ್ಥಿಗಳಲ್ಲಿ ಮೂಢನಂಬಿಕೆಯ ಆಚರಣೆಗಳಗೆ ಪ್ರೋತ್ಸಾಹ ನೀಡುವ ಆಚರಣೆ ಅವಕಾಶ ಕಲ್ಪಿಸುವ ಮೂಲಕ ಗ್ರಂಥಾಲಯವನ್ನು ಧಾರ್ಮಿಕ ಕೇಂದ್ರವನ್ನಾಗಿಸುತ್ತಿದೆ ಎಂದು ಆರೋಪಿಸಿದ್ದಾರೆ.
ಈ ನಡುವೆ ಸರಸ್ವತಿ ಪೂಜೆಗೆ ಅಡ್ಡಿಪಡಿಸಿರುವ ವಿದ್ಯಾರ್ಥಿಗಳಿಗೆ ಹಿಂದೂ ವಿರೋಧಿ ಎಂದು ರಾತ್ರಿಯಿಡಿ ಬೆದರಿಕೆ ಕರೆಗಳು ಮತ್ತು ಅವ್ಯಾಚವಾಗಿ ನಿಂದಿಸುವ ಕರೆಗಳು ಬರುತ್ತಿವೆ ಎಂದು ಸಂಶೋಧನಾ ವಿದ್ಯಾರ್ಥಿಯೊಬ್ಬರು 'ವಾರ್ತಾಭಾರತಿ'ಗೆ ಮಾಹಿತಿ ನೀಡಿದ್ದಾರೆ.
ಇಂತಹ ವಿವಾದಕ್ಕೆ ಕಾರಣವಾಗುತ್ತಿರುವ ಕಲಬುರಗಿ ಕೇಂದ್ರೀಯ ವಿಶ್ವವಿದ್ಯಾನಿಲಯ ಆಡಳಿತ ಸುಧಾರಣೆಗೆ ಸರಕಾರ ಯಾವ ರೀತಿ ಕ್ರಮಕೈಗೊಳ್ಳಲಿದೆ ಎಂಬುದು ಕಾದು ನೊಡಬೇಕಿದೆ.