ಕೆಪಿಎಸ್ಸಿ ಉದ್ಯೋಗಸೌಧ ಕಚೇರಿಯಿಂದ ಜೆಇಗಳ ಆಯ್ಕೆ ಪಟ್ಟಿ ಕಡತ ನಾಪತ್ತೆ!

Update: 2024-03-29 13:51 GMT

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ)ಉದ್ಯೋಗ ಸೌಧ ಕಚೇರಿಯಿಂದ ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿಯ (ಕೆಎಸ್‍ಡಿಬಿ) ಜೂನಿಯರ್ ಇಂಜಿನಿಯರ್ ಗಳ (ಜೆಇ ಸಿವಿಲ್) ಆಯ್ಕೆ ಪಟ್ಟಿಯನ್ನೊಳಗೊಂಡ ಕಡತ ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ.

ಜ.22ರಂದು ನಗರದ ಉದ್ಯೋಗ ಸೌಧದಲ್ಲಿರುವ ಆಯೋಗದ ಕಾರ್ಯದರ್ಶಿಯವರ ಕಚೇರಿ ಕೊಳಗೇರಿ ಅಭಿವೃದ್ಧಿ ಮಂಡಳಿಯಲ್ಲಿ ಜೂನಿಯರ್ ಇಂಜಿನಿಯರ್ ನೇಮಕಾತಿಯ ಆಯ್ಕೆ ಪಟ್ಟಿಯನ್ನು ಸ್ವೀಕರಿಸಲಾಗಿತ್ತು. ಇದೀಗ ಕಡತ ನಾಪತ್ತೆಯಾಗಿದ್ದು, ಕೆಪಿಎಸ್ಸಿ ಸಹಾಯಕ ಕಾರ್ಯದರ್ಶಿ ವಿಧಾನಸೌಧ ಪೊಲೀಸರಿಗೆ ದೂರು ನೀಡಿದ್ದಾರೆ ಎಂದು ಗೊತ್ತಾಗಿದೆ.

ಹೈಕೋರ್ಟ್ ನಿರ್ದೇಶನ ಪ್ರಕಾರ ಕಡತವನ್ನು ಸಿದ್ಧಪಡಿಸಲಾಗಿತ್ತು. ಹೆಚ್ಚುವರಿ ಆಯ್ಕೆ ಪಟ್ಟಿಯನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಅಂಗೀಕರಿಸಿದ ಹೈಕೋರ್ಟ್, ಕಿರಿಯ ಇಂಜಿನಿಯರ್ ಹುದ್ದೆಗೆ ಅರ್ಜಿದಾರರ ಪ್ರಕರಣವನ್ನು ಪರಿಗಣಿಸುವಂತೆ ಕೆಪಿಎಸ್ಸಿಗೆ ಸೂಚಿಸಿತ್ತು. ಅದರಂತೆ ಆಯ್ಕೆ ಪಟ್ಟಿ ಸಿದ್ಧಪಡಿಸಲು ಕ್ರಮಕೈಗೊಳ್ಳಲಾಗಿತ್ತು.

ಇದೀಗ ವಿಧಾನಸೌಧ ಪೊಲೀಸರಿಗೆ ನೀಡಿರುವ ಎಫ್‍ಐಆರ್ ನಲ್ಲಿ, ಕೆಪಿಎಸ್ಸಿ ಕಚೇರಿಯ ಗೌಪ್ಯ ವಿಭಾಗ -3ರಲ್ಲಿ ಕಡತವನ್ನು ಸಿದ್ಧಪಡಿಸಿ ಜ.22 ರಂದು ಸಲ್ಲಿಸಲಾಗಿತ್ತು ಎಂದು ದೂರಿನಲ್ಲಿ ತಿಳಿಸಲಾಗಿದೆ. ಕಡತ ಬಂದಿದಿಯೇ ಎಂದು ಪರಿಶೀಲಿಸುವಂತೆ ಕೆಪಿಎಸ್ಸಿ ಫೆ.20ರಂದು ತನ್ನ ಎಲ್ಲ ವಿಭಾಗಗಳಿಗೆ ಪ್ರಕಟನೆ ನೀಡಿತ್ತು. ಆದರೆ ಕಡತ ಪತ್ತೆ ಯಾಗದ ಕಾರಣ ಕೆಪಿಎಸ್ಸಿ ಫೆ.26ರಂದು ಮತ್ತೆಒಂದು ಪ್ರಕಟನೆ ಹೊರಡಿಸಿ, ಪ್ರತಿ ವಿಭಾಗಕ್ಕೂ ಭೇಟಿ ನೀಡಿ ಪತ್ತೆ ಹಚ್ಚಿ ವರದಿ ಸಲ್ಲಿಸಲು ಅಧಿಕಾರಿಗಳ ತಂಡವನ್ನು ರಚಿಸಲಾಗಿತ್ತು ಎಂದು ತಿಳಿದು ಬಂದಿದೆ.

ಕಡತ ಇನ್ನೂ ಪತ್ತೆಯಾಗಿಲ್ಲ ಎಂದು ಅಧಿಕಾರಿಗಳ ತಂಡ ಕೆಪಿಎಸ್ಸಿಗೆ ಮಾಹಿತಿ ನೀಡಿದೆ. ನಂತರ ಕಡತ ನಾಪತ್ತೆಯಾಗಿರುವ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News