ಮಧ್ಯವರ್ತಿಗಳನ್ನು ಕಚೇರಿಗೆ ಸೇರಿಸದೇ ಜನರ ಸೇವೆ ಮಾಡಿ: ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಸೂಚನೆ
ಬೆಂಗಳೂರು: ತಹಶೀಲ್ದಾರ್ ಕಚೇರಿಗೆ ಬರುವವರ ಕಣ್ಣೀರು ಒರೆಸುವುದಕ್ಕಿಂತ ಪುಣ್ಯದ ಕೆಲಸ ಬೇರೆ ಇಲ್ಲ. ಮಾಸಲು ಬಟ್ಟೆಯಲ್ಲಿ ಬರುವ ಬಡವರ ಕಣ್ಣೀರು ಒರೆಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಅಧಿಕಾರಿಗಳಿಗೆ ಕರೆ ನೀಡಿದರು.
ಬುಧವಾರ ನಗರದಲ್ಲಿರುವ ಕೆಎಎಸ್ ಸಂಘದ ಸಭಾಂಗಣದಲ್ಲಿ ಆಯೋಜಿಸಿದ್ದ ಕರ್ನಾಟಕ ಆಡಳಿತಾ ಸೇವಾ ಅಧಿಕಾರಿಗಳ ಸಂಘದ ದಿನಚರಿ ಮತ್ತು ವಾರ್ಷಿಕ ಕ್ಯಾಲೆಂಡರ್ ಬಿಡುಗಡೆ ಮಾಡಿ ಮಾತನಾಡಿದ ಅವರು, ಸವೆದ ಚಪ್ಪಲಿ, ಹರಕಲು ಚಡ್ಡಿ, ಮಾಸಿದ ಬಟ್ಟೆ, ಅವಿದ್ಯಾವಂತರ ಪರವಾಗಿ ನಿಮ್ಮಗಳ ಹೃದಯ ಮಿಡಿಯಬೇಕು. ಈ ಜವಾಬ್ದಾರಿಯನ್ನು ನಿರ್ವಹಿಸಿ, ಮಧ್ಯವರ್ತಿಗಳನ್ನು ನಿಮ್ಮ ಕಚೇರಿ ಬಳಿ ಸೇರಿಸದೆ ಜನರ ಸೇವೆ ಮಾಡಿ ಎಂದರು.
ರಾಜಕಾರಣಗಳಿಗೆ, ಅಧಿಕಾರಿಗಳಿಗೆ ಜನರು ಸವಲತ್ತುಗಳನ್ನು ಒದಗಿಸಿದ್ದಾರೆ. ಜನರ ತೆರಿಗೆ ಹಣದಲ್ಲಿ ನಮಗೆ ಸವಲತ್ತುಗಳು ಸಿಕ್ಕಿವೆ. ಸುಗಮ ಜನಪರ ಆಡಳಿತ ಕೊಡಲಿ ಎನ್ನುವ ಕಾರಣದಿಂದ ಜನರಿಂದ ನಮಗೆ ಸವಲತ್ತು ಸಿಕ್ಕಿವೆ. ಜನರ ಅಭ್ಯುದಯ ನಮ್ಮ ಗುರಿ ಆಗಬೇಕು ಎಂದರು.
ಬಲಾಡ್ಯರು ದುರ್ಬಲರ ಮೇಲೆ ದೌರ್ಜನ್ಯ ನಡೆಸದಂತೆ ಎಚ್ಚರಿಕೆ ವಹಿಸಬೇಕು. ಸರಕಾರದ ಸವಲತ್ತುಗಳನ್ನು ಅರ್ಹ ಫಲಾನುಭವಿಗಳಿಗೆ ಪರಿಣಾಮಕಾರಿಯಾಗಿ ತಲುಪಿಸಬೇಕು. ಸಣ್ಣ ಪುಟ್ಟ ರೆವಿನ್ಯೂ ಸಮಸ್ಯೆಗಳಿಗೆ ಜನರು ಸಿಎಂ ಬಳಿಗೆ ಬರುತ್ತಾರೆ ಎಂದರೆ ಅಧಿಕಾರಿಗಳು ಜನರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ ಎಂದೇ ಪರಿಗಣಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಕಾರ್ಯಕ್ರಮದಲ್ಲಿ ಕಂದಾಯ ಸಚಿವ ಕೃಷ್ಣಬೈರೇಗೌಡ, ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್, ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್, ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು, ಕೆಎಎಸ್ ಅಧಿಕಾರಿಗಳ ಸಂಘದ ಅಧ್ಯಕ್ಷ ಶಿವಸ್ವಾಮಿ ಭಾಗವಹಿಸಿದ್ದರು.
.......................