ಶಿವಮೊಗ್ಗ | ನಿಗದಿತ ಸಮಯಕ್ಕೆ ಸಿಗದ ಕಾರು; ಶೋ ರೂಂಗೆ ದಂಡ

Update: 2023-11-01 11:14 GMT

ಸಾಂದರ್ಭಿಕ ಚಿತ್ರ

ಶಿವಮೊಗ್ಗ, ನ.1: ಮುಂಗಡ ಬುಕ್ಕಿಂಗ್ ಮಾಡಿದರೂ ನಿಗದಿತ ಸಮಯಕ್ಕೆ ಕಾರು ಡೆಲೆವರಿ ನೀಡದೆ, ಬುಕ್ಕಿಂಗ್ ಹಣ ಮರಳಿಸದೆ ಸತಾಯಿಸಿದ ಆರೋಪ ಪ್ರಕರಣದಲ್ಲಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಪರಿಹಾರ ನೀಡುವಂತೆ ಕಾರ್ ಶೋ ರೂಂ ಒಂದಕ್ಕೆ ಆದೇಶಿಸಿದೆ.

ನಗರದ ವೈ.ಎಲ್.ರವಿಕುಮಾರ್ ಎಂಬುವರು ಶಿವಮೊಗ್ಗದ ಪ್ರತಿಷ್ಠಿತ ಕಾರು ಶೋರೂಮ್‌ನಲ್ಲಿ ಸ್ಕಾರ್ಪಿಯೋ ಎನ್‌ಝಡ್ 6 ಡೀಸೆಲ್ ಎಂಟಿ ಬಿಳಿ ಬಣ್ಣದ ಕಾರು ಖರೀದಿಗೆ 21 ಸಾವಿರ ರೂ. ಪಾವತಿಸಿದ್ದರು. 2023ರ ಆಗಸ್ಟ್ 6ರಂದು ಬುಕ್ಕಿಂಗ್ ಮಾಡಿದ್ದರು. ಆದರೆ ಉತ್ಪಾದನಾ ಘಟಕದಲ್ಲಿ ತೊಂದರೆ ಉಂಟಾಗಿದೆ ಎಂದು ಕಾರಣ ನೀಡಿ ಸಂಸ್ಥೆ ಕಾರು ನೀಡಿರಲಿಲ್ಲ. ಮುಂಗಡ ಹಣವನ್ನೂ ಮರಳಿಸಿರಲಿಲ್ಲ.

ಈ ಕುರಿತು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಮುಂದೆ ಸೂಕ್ತ ಪರಿಹಾರ ಕೋರಿ ರವಿಕುಮಾರ್ ಅವರು ಪ್ರಕರಣ ದಾಖಲಿಸಿದ್ದರು. ಆಯೋಗದಿಂದ ಜಾರಿಗೊಳಿಸಿದ ನೋಟಿಸ್‌ಗೆ ಎದುರುದಾರರು ಕಲಾಪಕ್ಕೆ ಹಾಜರಾಗಿರದ ಕಾರಣ ಏಕಪಕ್ಷೀಯವಾಗಿ ಆದೇಶಿಸಲಾಗಿದೆ. ಪ್ರಕರಣದ ಅಂಶಗಳು ಮತ್ತು ಅರ್ಜಿದಾರರು ಹಾಜರುಪಡಿಸಿದ ದಾಖಲೆಗಳನ್ನು ಪರಿಗಣಿಸಿ, ಪರಿಶೀಲಿಸಿದಾಗ ಎದುರುದಾರರ ಸೇವಾ ನೂನ್ಯತೆ ಕಂಡುಬಂದಿದ್ದು ಪ್ರಸ್ತುತ ಪ್ರಕರಣವನ್ನು ಭಾಗಶಃ ಪುರಸ್ಕರಿಸಲಾಗಿದೆ.

ಎದುರುದಾರರು ದೂರುದಾರರಿಂದ ಪಡೆದ ಮುಂಗಡ ಹಣ 21 ಸಾವಿರ ರೂ.ಗಳನ್ನು ಶೇ.9 ಬಡ್ಡಿ ಸಮೇತ ಪಾವತಿಸಬೇಕು. ಮಾನಸಿಕ ಹಿಂಸೆ ಹಾಗೂ ಇತ್ಯಾದಿಗಳಿಗೆ ಸಂಬಂಧಿಸಿದಂತೆ ಪರಿಹಾರವಾಗಿ 10 ಸಾವಿರ ರೂ., ವ್ಯಾಜ್ಯದ ಖರ್ಚು ವೆಚ್ಚಗಳ ಬಾಬ್ತು 10 ಸಾವಿರ ರೂ. ಪಾವತಿಸಬೇಕು ಎಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಟಿ.ಶಿವಣ್ಣ, ಸದಸ್ಯರಾದ ಸವಿತಾ ಬಿ. ಪಟ್ಟಣಶೆಟ್ಟಿ ಮತ್ತು ಬಿ.ಡಿ.ಯೋಗಾನಂದ ಅವರು ಪೀಠವು ಆದೇಶಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News