ಶಿವಮೊಗ್ಗ: ಯುವತಿಯ ಅಪಹರಣ ಪ್ರಕರಣ ಸುಖಾಂತ್ಯ
ಶಿವಮೊಗ್ಗ, ಜು.18: ನಗರದ ಅಶೋಕ ವೃತ್ತದ ಬಳಿ ನಡೆದಿದ್ದ ಯುವತಿಯನ್ನು ಇನ್ನೋವಾ ಕಾರಿನಲ್ಲಿ ಅಪಹರಿಸಿದ್ದ ಪ್ರಕರಣ ಸುಖಾಂತ್ಯ ಕಂಡಿದೆ.
ಜೋಡಿಯನ್ನು ಪತ್ತೆ ಮಾಡಿದ ಪೊಲೀಸರು ವಿಚಾರಣೆ ನಡೆಸಿದ ಬಳಿಕ ಅವರಿಬ್ಬರೂ ವಯಸ್ಕರಾಗಿದ್ದು ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ಮದುವೆಗೆ ಪಾಲಕರ ವಿರೋಧವಿದ್ದ ಕಾರಣ ಮದುವೆ ವಿಚಾರವನ್ನು ಮುಚ್ಚಿಟ್ಟಿದ್ದಾಗಿ ಪೊಲೀಸರ ಬಳಿ ತಿಳಿಸಿದ ಬಳಿಕ ಬಿಟ್ಟು ಕಳುಹಿಸಿದ್ದಾರೆ ಎಂದು ತಿಳಿದುಬಂದಿದೆ.
ಶಿವಮೊಗ್ಗದ ಹೊಸಮನೆ ಯುವತಿ ಮತ್ತು ಗಾಜನೂರಿನ ಯುವಕ ಪರಸ್ಪರ ಪ್ರೀತಿಸಿದ್ದರು. ಗಾಜನೂರಿನ ಯುವಕ ಸಿಸಿ ಕ್ಯಾಮರಾ ಅಳವಡಿಸುವ ಕೆಲಸ ಮಾಡಿಕೊಂಡಿದ್ದು ಹೊಸಮನೆಯಲ್ಲಿ ಅಂಗಡಿ ತೆರೆದಿದ್ದ. ಪಕ್ಕದಲ್ಲೇ ಯುವತಿಯ ಮನೆ ಇದ್ದುದರಿಂದ ಇಬ್ಬರ ನಡುವೆ ಪ್ರೀತಿ ಮೂಡಿತ್ತು. ಮನೆಯವರಿಗೆ ತಿಳಿಸದೇ ನಾಲ್ಕು ತಿಂಗಳ ಹಿಂದೆಯೇ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ವಿವಾಹ ನೋಂದಣಿ ಮಾಡಿಕೊಂಡಿದ್ದರು ಎನ್ನಲಾಗಿದೆ.
ಸೋಮವಾರ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಯುವತಿ ತನ್ನ ತಾಯಿಯೊಂದಿಗೆ ಹೊರಟಿದ್ದಳು. ಬಸ್ ನಿಲ್ದಾಣದ ಬಳಿ ತೆರಳುತ್ತಿದ್ದಾಗ ಇನ್ನೋವಾ ಕಾರಿನಲ್ಲಿ ಬಂದ ಯುವಕ ಹಾಡಹಗಲೇ ಯುವತಿಯನ್ನು ಕರೆದೊಯ್ದಿದ್ದ. ಯುವತಿಯ ತಾಯಿ ಗಾಬರಿಗೊಂಡು ದೊಡ್ಡಪೇಟೆ ಠಾಣೆಗೆ ಬಂದು ತನ್ನ ಪುತ್ರಿಯನ್ನು ಯಾರೋ ಕಾರಿನಲ್ಲಿ ಬಂದು ಅಪಹರಿಸಿದ್ದಾಗಿ ದೂರು ನೀಡಿದ್ದರು ಎನ್ನಲಾಗಿದೆ.
ಕಾರ್ಯಪ್ರವೃತ್ತರಾದ ಪೊಲೀಸರು ಅಶೋಕ ವೃತ್ತದ ಬಳಿ ಇದ್ದ ಸಿಸಿ ಕ್ಯಾಮರಾ ಪರಿಶೀಲಿಸಿ ಇನ್ನೋವಾ ಕಾರಿನ ಬೆನ್ನು ಬಿದ್ದಿದ್ದರು. ಪೊಲೀಸರು ಹಿಂಬಾಲಿಸಿದ್ದನ್ನು ಅರಿತ ಜೋಡಿ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ಠಾಣೆಗೆ ತೆರಳಿ ಪೊಲೀಸರಿಗೆ ರಕ್ಷಣೆ ಮೊರೆ ಇಟ್ಟಿದ್ದರು. ಇಬ್ಬರು ಪರಸ್ಪರ ಮದುವೆಯಾದ ವಿಚಾರ ತಿಳಿಸಿದ ಬಳಿಕ ಜೋಡಿಯನ್ನು ಪೊಲೀಸರು ಬಿಟ್ಟು ಕಳುಹಿಸಿದ್ದಾರೆ ಎಂದು ತಿಳಿದುಬಂದಿದೆ.