ಶಿವಮೊಗ್ಗ | ಮನೆಯಲ್ಲೇ ಗಾಂಜಾ ಬೆಳೆದ ಆರೋಪ: ಮೂವರು ವೈದ್ಯಕೀಯ ವಿದ್ಯಾರ್ಥಿಗಳ ಬಂಧನ

Update: 2023-06-24 18:14 GMT

ಶಿವಮೊಗ್ಗ, ಜೂ.24: ಮನೆಯಲ್ಲೇ ಗಾಂಜಾ ಬೆಳೆದು ಮಾರಾಟ ಮಾಡುತ್ತಿರುವ ಆರೋಪದಲ್ಲಿ ಮೆಡಿಕಲ್ ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ತಮಿಳುನಾಡು, ಕೇರಳದ ಮೂವರು ವಿದ್ಯಾರ್ಥಿಗಳು ಮನೆಯಲ್ಲೆ ಹೈಟೆಕ್ ಫಾರ್ಮಿಂಗ್ ಮೂಲಕ ಗಾಂಜಾ ಬೆಳೆದು ಮಾರಾಟ ಮಾಡುತ್ತಿದ್ದರೆನ್ನಲಾಗಿದೆ.

ತಮಿಳುನಾಡು ಕೃಷ್ಣಗಿರಿಯ ವಿಘ್ನರಾಜ್ (28) ಎಂಬಾತ ಇಲ್ಲಿನ ಖಾಸಗಿ ಮೆಡಿಕಲ್ ಕಾಲೇಜಿನಲ್ಲಿ ಓದುತ್ತಿದ್ದು ಶಿವಗಂಗಾ ಲೇಔಟ್ ನಲ್ಲಿ ಮನೆ ಮಾಡಿಕೊಂಡಿದ್ದ. ಇಲ್ಲಿ ಮನೆ ಮಾಲಕರ ಗಮನಕ್ಕೆ ಬಾರದಂತೆ ಮನೆಯೊಳಗೆ ಕೃತಕ ವಾತಾವರಣ ಸೃಷ್ಟಿಸಿ (ಸ್ಪೈಡರ್ ಫಾರ್ಮಿಂಗ್) ಪಾಟ್ಗಳಲ್ಲಿ ಗಾಂಜಾ ಬೆಳೆದು ಕಾಲೇಜು ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದುದಾಗಿ ತಿಳಿದುಬಂದಿದೆ.

ಮೂರುವರೆ ವರ್ಷದಿಂದ ಈ ದಂಧೆಯಲ್ಲಿ ತೊಡಗಿಕೊಂಡಿದ್ದಾರೆ ಎಂಬ ಮಾಹಿತಿ ಪೊಲೀಸರಿಗೆ ಲಭ್ಯವಾಗಿದ್ದು ಇದರಲ್ಲಿ ಯಾರ್ಯಾರು ಭಾಗಿಯಾಗಿದ್ದಾರೆ ಎಂದು ತನಿಖೆ ನಡೆಸಲಾಗುತ್ತಿದೆ. ಕೇರಳ ಇಡುಕ್ಕಿಯ ವಿನೋದ್ ಕುಮಾರ್ (27), ತಮಿಳುನಾಡು ಧರ್ಮಪುರಿಯ ಪಾಂಡಿದೊರೈ (27) ಎಂಬವರು ಗಾಂಜಾ ಖರೀದಿಗೆ ಬಂದಿದ್ದು ಅವರನ್ನು ಸಹ ಬಂಧಿಸಲಾಗಿದೆ.

ಆರೋಪಿಗಳಿಂದ 227 ಗ್ರಾಂ ಗಾಂಜಾ, 1.53 ಕೆಜಿ ಹಸಿ ಗಾಂಜಾ, 10 ಗ್ರಾಂ ಚರಸ್, ಗಾಂಜಾ ಬೀಜಗಳಿದ್ದ ಚಿಕ್ಕ ಬಾಟಲ್, 3 ಕೆನಾಬಿಲ್ ಆಯಿಲ್ ಸಿರಂಜ್, ಗಾಂಜಾಪುಡಿ ಮಾಡಲು ಬಳಸುತ್ತಿದ್ದ ಎರಡು ಡಬ್ಬಿಗಳು, 1 ಇಲೆಕ್ಟ್ರಾನಿಕ್ ತೂಕದ ಯಂತ್ರ, 1 ಎಕ್ಸಿಟ್ ಫ್ಯಾನ್, 6 ಟೇಬಲ್ ಫ್ಯಾನ್, 2 ಸ್ಟೆಬಲೈಸರ್, 3 ಎಲ್ಇಡಿ ಲೈಟ್, ರೋಲಿಂಗ್ ಪೇಪರ್, 2 ಹುಕ್ಕಾ ಕೊಳವೆ, 4 ಹುಕ್ಕಾ ಕ್ಯಾಪ್, ಗಾಂಜಾ ಗಿಡದ ಕಾಂಡ, 19 ಸಾವಿರ ರೂ. ನಗದು ವಶಪಡಿಸಿಕೊಂಡು ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಒಟ್ಟು ಆರು ಲಕ್ಷ ರೂ. ಗಾಂಜಾ ಬೆಳೆಯಲು ವಿನಿಯೋಗಿಸಿದ್ದ ಎಂದು ತಿಳಿದುಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News