ಸಂಪೂರ್ಣ ಮನೆ ಹಾನಿಗೆ 1.2 ಲಕ್ಷ ರೂ.ಪರಿಹಾರದ ಜೊತೆಗೆ ಮನೆ ಒದಗಿಸಲು ತೀರ್ಮಾನ : ಸಿದ್ದರಾಮಯ್ಯ

Update: 2024-08-05 10:12 GMT

PC : x/@siddaramaiah

ಬೆಳಗಾವಿ : ಮಳೆಯಿಂದ ಸಂಪೂರ್ಣ ಮನೆ ಹಾನಿ ಸಂಭವಿಸಿದ ಸಂತ್ರಸ್ತರಿಗೆ 1.2 ಲಕ್ಷ ರೂ.ಪರಿಹಾರದ ಜೊತೆಗೆ ಮನೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು.

ಸೋಮವಾರ ಪ್ರವಾಹ ಪೀಡಿತ ಬೆಳಗಾವಿ ಜಿಲ್ಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಹಿಂದೆ ಬಿ.ಎಸ್.ಯಡಿಯೂರಪ್ಪನವರು ಸಂಪೂರ್ಣ ಮನೆ ಹಾನಿಗೆ 5 ಲಕ್ಷ ರೂ. ಪರಿಹಾರ ಘೋಷಿಸಿದ್ದರು. ಈ ನೆರವಿನ ದುರುಪಯೋಗವಾಯಿತು. ಹಾಗೂ ಹಲವರಿಗೆ ಮೊದಲನೇ ಕಂತು ಮಾತ್ರ ಬಿಡುಗಡೆಯಾಗಿ, ಎರಡು ಹಾಗೂ ಮೂರನೇ ಕಂತಿನ ಪರಿಹಾರ ಈವರೆಗೂ ದೊರೆತಿಲ್ಲ. ಈ ಹಿನ್ನೆಲೆಯಲ್ಲಿ ನಮ್ಮ ಸರ್ಕಾರ 1.2 ಲಕ್ಷ ರೂ. ಪರಿಹಾರ ಹಾಗೂ ಮನೆ ನೀಡುವ ನಿರ್ಧಾರ ಮಾಡಿದೆ" ಎಂದು ಸ್ಪಷ್ಟಪಡಿಸಿದರು.

ಪರಿಹಾರ ಕೆಲಸ ಪ್ರಾರಂಭ : ರಾಜ್ಯದ ಹಲವೆಡೆ ಮಳೆಯಿಂದ ಹಾನಿಯಾಗಿದೆ. ಎಲ್ಲ ಕಡೆ ಪರಿಹಾರ ಕೆಲಸಗಳನ್ನು ಪ್ರಾರಂಭಿಸಲಾಗಿದೆ. ಮೈಸೂರು, ಹಾಸನ, ಕೊಡಗು ಜಿಲ್ಲೆಗಳಿಗೆ ಭೇಟಿನೀಡಲಾಗಿದ್ದು, ಮೃತಪಟ್ಟವರಿಗೆ ಹಾಗೂ ಜಾನುವಾರುಗಳು ಸತ್ತಿರುವುದಕ್ಕೆ ಕೂಡಲೇ ಪರಿಹಾರ ವಿತರಿಸಲಾಗುತ್ತಿದೆ. ಮನೆಗಳ ಬಿದ್ದಿರುವುದಕ್ಕೆ ಪರಿಹಾರ, ವಿದ್ಯುತ್‌ ಕಂಬ, ಟ್ರಾನ್ಸ್‌ಫಾರ್ಮರ್‌ಗಳ ದುರಸ್ತಿ ಮೊದಲಾದ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಮುಂದಿನ ವಾರ ಹೆಚ್ಚು ಮಳೆ-ಕಟ್ಟೆಚ್ಚರ ವಹಿಸಲು ಸೂಚನೆ : ಮುಂದಿನ ವಾರ ಹೆಚ್ಚು ಮಳೆಯಾಗುವ ಮುನ್ಸೂಚನೆ ಇದೆ. ಆದ್ದರಿಂದ ಕಂದಾಯ, ವಿಪತ್ತು ನಿರ್ವಹಣೆ, ಅರಣ್ಯ ಇಲಾಖೆ, ಇಂಧನ, ನೀರಾವರಿ ಸೇರಿದಂತೆ ಎಲ್ಲ ಇಲಾಖೆಗಳು ಎಚ್ಚರಿಕೆ ವಹಿಸುವಂತೆ ತಿಳಿಸಲಾಗಿದೆ ಎಂದರು.

ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಬೆಳಗಾವಿ ಜಿಲ್ಲೆಯ ಶಾಸಕರು ಮತ್ತಿತರ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News