ಸಿದ್ದರಾಮಯ್ಯನವರಿಗೆ ಮೊದಲ ಬಾರಿ ಗೂಟದ ಕಾರು ಸಿಕ್ಕಿದ್ದು ಬಿಜೆಪಿಯಿಂದ: ಈಶ್ವರಪ್ಪ

Update: 2023-09-11 15:17 GMT

ಶಿವಮೊಗ್ಗ: ಕಾಂಗ್ರೆಸ್ ದೇಶ ಲೂಟಿ ಮಾಡಿದ ಸರ್ಕಾರ. ಹೀಗಾಗಿ ಕಾಂಗ್ರೆಸ್ಸೇತರ ಸರ್ಕಾರಕ್ಕೆ ಅಟಲ್ ಜಿ ಬೇಷರತ್ ಬೆಂಬಲ ನೀಡಿದ್ದರು. ಆಗ ಎಚ್ ಡಿ ದೇವೇಗೌಡ ಪ್ರಧಾನಿಯಾದರು. ಸಿದ್ದರಾಮಯ್ಯ ಕಾವಲು ಸಮಿತಿ ಅಧ್ಯಕ್ಷರಾಗಿದ್ದರು. ಮೊದಲ ಬಾರಿ ಗೂಟದ ಕಾರು ಸಿಕ್ಕಿದ್ದು ಬಿಜೆಪಿಯಿಂದ ಎಂದು ಕೆ.ಎಸ್. ಈಶ್ವರಪ್ಪ ಹೇಳಿದರು.

ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಆಗ ಅವರು ಬಿಜೆಪಿಗೆ ರಾಷ್ಟ್ರೀಯವಾದಿ ಪಕ್ಷ ಅಂತಿದ್ದರು. ಯಾಕೆಂದರೆ ಅವರಿಗೆ ಗೂಟದ ಕಾರು ಸಿಕ್ಕಿತ್ತು. ಆದರೆ ಈಗ ಕೋಮುವಾದಿ ಅಂತಿದ್ದಾರೆ ಎಂದು ಟೀಕಿಸಿದರು.

ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ - ಜೆಡಿಎಸ್ ಮೈತ್ರಿಗೆ 28ಕ್ಕೆ 28 ಸೀಟು ಸಿಗುತ್ತದೆ. ಕಾಂಗ್ರೆಸ್ ಶೂನ್ಯ ಸಾಧನೆ ಮಾಡಲಿದೆ. ಹಿಂದೆ ಕಾಂಗ್ರೆಸ್ ನಿಂದ ಬಿಜೆಪಿಗೆ ಬಂದ 17 ಶಾಸಕರನ್ನು ಮತ್ತೆ ಸೇರಿಸಿಕೊಳ್ಳಲ್ಲ ಅಂದಿದ್ದರು. ಈಗ ಕರೆಯುತ್ತಿದ್ದಾರೆ, ಆದರೆ ಯಾರೂ ಕಾಂಗ್ರೆಸ್ ಗೆ ಹೋಗಲ್ಲ ಎಂದರು.

ಉಚಿತ ವಿದ್ಯುತ್ ಕೊಡವುದಿರಲಿ, ಎಷ್ಟೇ ಹಣ ಕೊಡುತ್ತೇವೆ ಎಂದರೂ ವಿದ್ಯುತ್ ಸಿಗುತ್ತಿಲ್ಲ. ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸ್ವೀಕರಿಸುತ್ತಿಲ್ಲ. ಯಾಕೆಂದರೆ ಸರ್ಕಾರದ ಬಳಿ ಹಣವಿಲ್ಲ. ಕೊನೆಯ ಪಕ್ಷ ಅರ್ಜಿ ಹಾಕಿದವರಿಗೆ ಯಾವಾಗ ಹಣ ಕೊಡುತ್ತಾರೆ ಎನ್ನುವುದನ್ನು ಹೇಳಲಿ. ಯುವ ನಿಧಿ ಆರಂಭವೇ ಆಗಿಲ್ಲ. ಬಸ್ ಫ್ರೀ ಯಿಂದ ಬೆಂಗಳೂರಿನಲ್ಲಿ ಮುಷ್ಕರ ಆರಂಭವಾಗಿದೆ. ಇವರ ಐದೂ ಗ್ಯಾರಂಟಿ ಸಂಪೂರ್ಣ ವಿಫಲವಾಗಿದೆ. ಸಿಎಂ, ಡಿಸಿಎಂ ಅದನ್ನು ಸ್ಪಷ್ಟಪಡಿಸಲಿ ಎಂದು ಟೀಕಿಸಿದರು.

ಜಿಲ್ಲಾ ಉಸ್ತುವಾರಿ ಸಚಿವರು ಒಬ್ಬ ರೈತನನ್ನೂ ಭೇಟಿ ಮಾಡುತ್ತಿಲ್ಲ. ಅವರಿಗೆ ಧೈರ್ಯ ತುಂಬುವ ಕೆಲಸ ಮಾಡುತ್ತಿಲ್ಲ. ರಾಜ್ಯದಲ್ಲಿ 150ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರೈತರು ಪರಿಹಾರಕ್ಕಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆಂದು ಸಚಿವರು ಹೇಳಿರುವುದು ರೈತರಿಗೆ ಮಾಡಿರುವ ಅಪಮಾನ. ರೈತರ ಬೆಳೆ ಪರಿಹಾರ ಸಿಗುತ್ತಿಲ್ಲ ಎಂದರು.

ಉಸ್ತುವಾರಿ ಸಚಿವ ಮಧು ಅವರು ಡಿಸಿ ಜೊತೆ ಸಭೆ ನಡೆಸಲಿ. ರೈತರ ಆತ್ಮಹತ್ಯೆ, ಬೆಳೆ ಪರಿಹಾರ ಕುರಿತು ಮಾಹಿತಿ ಪಡೆಯಲಿ. ರಾಜ್ಯದಲ್ಲಿ ಗಂಭೀರ ಪರಿಸ್ಥಿತಿ ತಲೆದೋರಿದೆ. ಗ್ಯಾರಂಟಿ ಅಂತ ಜನರನ್ನು ಪರದಾಡುವಂತೆ ಮಾಡಿದ್ದಾರೆ. ರೈತರ ಶಾಪ ನಿಮಗೆ ತಟ್ಟದಿರಲಿ. ಪ್ರಾಮಾಣಿಕವಾಗಿ ಕೆಲಸ ಮಾಡಿದರೆ ಜನ ನಂಬುತ್ತಾರೆ. ಇಲ್ಲದಿದ್ದರೆ ಮೋಸಗಾರ ಸರ್ಕಾರವೆಂದು ಜನ ಬೀದಿಗಿಳಿಯುತ್ತಾರೆ. ಹಾಗಾಗಿ ಸರ್ಕಾರದ ನಿಲುವಿನ ಬಗ್ಗೆ ಸ್ಪಷ್ಟಪಡಿಸಲಿ ಎಂದು ಹೇಳಿದರು.

ಪತ್ರಿಕಾಗೋಷ್ಟಿಯಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಟಿ.ಡಿ ಮೇಘರಾಜ್, ಪ್ರಮುಖರಾದ ಸಾಲೇಕೊಪ್ಪ ರಾಮಚಂದ್ರ, ವಿನ್ಸೆಂಟ್ ರೋಡ್ರಿಗಸ್, ಅಣ್ಣಪ್ಪ ಸೇರಿದಂತೆ ಹಲವರಿದ್ದರು.

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News