ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ:ಮತ್ತೆ ರೇವಣ್ಣ ನಿವಾಸದಲ್ಲಿ ಪಂಚನಾಮೆ

Update: 2024-05-10 15:46 GMT

ಬೆಂಗಳೂರು: ಹಾಸನ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಅತ್ಯಾಚಾರ ಪ್ರಕರಣ ಸಂಬಂಧ ಎಸ್‌ಐಟಿ ತನಿಖಾಧಿಕಾರಗಳು ಇಲ್ಲಿನ ಬಸವನಗುಡಿಯಲ್ಲಿರುವ ಶಾಸಕ ಎಚ್.ಡಿ.ರೇವಣ್ಣ ನಿವಾಸದಲ್ಲಿ ಪಂಚನಾಮೆ ನಡೆಸಿ, ಸ್ಥಳೀಯರ ಹೇಳಿಕೆ ದಾಖಲು ಮಾಡಿಕೊಂಡರು.

ಪ್ರಜ್ವಲ್ ರೇವಣ್ಣ ಅಶ್ಲೀಲ ವೀಡಿಯೊ ಪ್ರಕರಣದಲ್ಲಿ ಈಗಾಗಲೇ ಹೊಳೆನರಸಿಪುರದಲ್ಲಿರುವ ಎಚ್.ಡಿ.ರೇವಣ್ಣ ಅವರ ನಿವಾಸದಲ್ಲಿ ಸಂತ್ರಸ್ತೆ ಮಹಿಳೆಯೊಂದಿಗೆ ತೆರಳಿ ಪಂಚನಾಮೆಯನ್ನು ನಡೆಸಿದ್ದರು. ಶುಕ್ರವಾರ ಬೆಂಗಳೂರಿನ ಬಸವನಗುಡಿಯಲ್ಲಿರುವ ಆರೋಪಿಯ ಮತ್ತೊಂದು ನಿವಾಸದಲ್ಲೂ ಪಂಚನಾಮೆ ಪ್ರಕ್ರಿಯೆ ನಡೆಸಲಾಯಿತು.

3ನೆ ಎಫ್‍ಐಆರ್: ಪ್ರಜ್ವಲ್ ರೇವಣ್ಣ ವಿರುದ್ಧ ಮೂರನೆ ಎಫ್‍ಐಆರ್ ದಾಖಲು ಮಾಡಲಾಗಿದ್ದು, ಇದರಲ್ಲಿ ಒಂದಕ್ಕಿಂತ ಒಂದು ಕಠಿಣ ಸೆಕ್ಷನ್‍ಗಳನ್ನು ಉಲ್ಲೇಖ ಮಾಡಲಾಗಿದೆ.

ಐಪಿಸಿ ಸೆಕ್ಷನ್ 376(2)(ಎನ್) (ಮಹಿಳೆಯ ಮೇಲೆ ಪದೇ ಪದೇ ಅತ್ಯಾಚಾರ), 376(2)(ಕೆ) (ಮಹಿಳೆ ಮೇಲೆ ಪದೇ ಪದೇ ಅತ್ಯಾಚಾರ), 354(ಎ) (ಲೈಂಗಿಕ ಅನುಕೂಲಕ್ಕಾಗಿ ಬೇಡಿಕೆ), 354(ಬಿ) (ಬಟ್ಟೆ ಹಿಡಿದು ಎಳೆದಾಡಿದ ಆರೋಪ), 354(ಸಿ) (ಖಾಸಗಿ ಚಿತ್ರಗಳನ್ನ ಸೆರೆ ಹಿಡಿದು ವೀಕ್ಷಣೆ ಮಾಡುವುದು, ಆಕೆಯ ಒಪ್ಪಿಗೆ ಇಲ್ಲದೆ ಪ್ರಸಾರ ಮಾಡುವುದು), 506 (ಬೆದರಿಕೆ ಹಾಕುವುದು)ಅಡಿ ಮೊಕದ್ದಮೆ ದಾಖಲಾಗಿದೆ ಎಂದು ಮೂಲಗಳು ತಿಳಿಸಿವೆ.

ದೇವರಾಜೇಗೌಡ, ಕಾರ್ತಿಕ್‍ಗೆ ಎಸ್‌ಐಟಿ ನೋಟಿಸ್

ಪೆನ್‍ಡ್ರೈವ್ ಹಂಚಿಕೆ ಆರೋಪ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‌ಐಟಿ ತನಿಖಾಧಿಕಾರಿಗಳು, ಬಿಜೆಪಿ ಮುಖಂಡ ಹಾಗೂ ವಕೀಲ ಜಿ.ದೇವರಾಜೇಗೌಡ ಹಾಗೂ ಪ್ರಜ್ವಲ್ ಮಾಜಿ ಕಾರು ಚಾಲಕ ಕಾರ್ತಿಕ್‍ಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿಗೊಳಿಸಿದೆ.

ನೋಟಿಸ್ ತಲುಪಿದ 24 ಗಂಟೆಯೊಳಗೆ ತನಿಖಾಧಿಕಾರಿಯ ಮುಂದೆ ವಿಚಾರಣೆ ಹಾಜರಾಗುವಂತೆ ಸೂಚಿಸಲಾಗಿದೆ. ಅಲ್ಲದೆ, ಜೆಡಿಎಸ್‍ನ ಚುನಾವಣಾ ಏಜೆಂಟ್ ಪೂರ್ಣಚಂದ್ರ ತೇಜಸ್ವಿ ಎಂಬುವರು, ಎಪ್ರಿಲ್ 23 ರಂದು ಪ್ರಜ್ವಲ್ ರೇವಣ್ಣ ಅವರ ಮಾಜಿ ಕಾರು ಚಾಲಕ ಕಾರ್ತಿಕ್, ಪುಟ್ಟರಾಜು, ಕ್ವಾಲಿಟಿ ಬಾರ್ ಶರತ್, ನವೀನ್‍ಗೌಡ ಹಾಗೂ ಚೇತನ್‍ಗೌಡ ಎಂಬುವರ ವಿರುದ್ಧ ಹಾಸನದ ಸೈಬರ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿಗಳು ಹಾಸನ ನಗರದ 3ನೆ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದರು. ಆದರೆ ಆರೋಪಿಗಳು ಸಲ್ಲಿಸಿದ್ದ ಅರ್ಜಿಯನ್ನು ಮೇ.8 ರಂದು ನ್ಯಾಯಾಲಯ ತಿರಸ್ಕರಿಸಿತ್ತು.

ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಸಂತ್ರಸ್ತೆಯರಿಗೆ ಬೆದರಿಸಿ ದೂರು ಕೊಡಿಸಲಾಗುತ್ತಿರುವ ಬಗ್ಗೆ ನನಗೆ ಗೊತ್ತಿಲ್ಲ. ರಾಷ್ಟ್ರೀಯ ಮಹಿಳಾ ಆಯೋಗ ಸಿಟ್ ಅಧಿಕಾರಿಗಳ ಜೊತೆ ಮಾತಾಡಲಿ. ಏನು ಬೆದರಿಕೆ ಬಂದಿದೆ ಎಂದು ತಿಳಿಸಲಿ.

-ಡಾ.ಜಿ.ಪರಮೇಶ್ವರ್, ಗೃಹ ಸಚಿವ

ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಸಂಪೂರ್ಣ ಗೊಂದಲ ಇದೆ. ನಮ್ಮ ನಿಲುವು ಸ್ಪಷ್ಟವಾಗಿದೆ. ಶಿಕ್ಷೆ ಆಗಬೇಕು. ನಿಷ್ಪಕ್ಷಪಾತ ತನಿಖೆ ನಡೆಸಬೇಕು. ಆದರೆ ಸರಕಾರರ ಈ ಬಗ್ಗೆ ಸಮರ್ಪಕ ಉತ್ತರ ಕೊಡಲಿಲ್ಲ. ಎ.21ಕ್ಕೆ ವಿಡಿಯೋ ಬಂದಿವೆ. ಕೇವಲ ಹಾಸನ ಅಲ್ಲ, ಹುಬ್ಬಳ್ಳಿಗೂ ಬಂದಿವೆ. ಆದರೂ, ಏಕೆ ವಿದೇಶಕ್ಕೆ ಹೋಗದಂತೆ ತಡೆಯಲಿಲ್ಲ. ಈ ಪ್ರಶ್ನೆಗೆ ಇನ್ನೂ ಉತ್ತರ ಬಂದಿಲ್ಲ.

-ಪ್ರಹ್ಲಾದ್ ಜೋಷಿ, ಕೇಂದ್ರ ಸಚಿವ

ಮೂರು ದಿನ ಭೇಟಿಗೆ ಅವಕಾಶವಿಲ್ಲ..!

ನ್ಯಾಯಾಂಗ ಬಂಧನದಲ್ಲಿರುವ ಜೆಡಿಎಸ್ ಶಾಸಕ ಎಚ್.ಡಿ.ರೇವಣ್ಣ ಅವರನ್ನು ಭೇಟಿ ಮಾಡಲು ಮೂರು ದಿನ ಅವಕಾಶ ಇಲ್ಲದಂತೆ ಆಗಿದೆ.ಸತತವಾಗಿ ಸರಕಾರಿ ರಜೆ ಇರುವ ಕಾರಣದಿಂದಾಗಿ ಕಾರಗೃಹ ನಿಯಮದಂತೆ ಆಪ್ತರು, ಕುಟುಂಬಸ್ಥರಿಗೆ ರೇವಣ್ಣ ಭೇಟಿ ಮಾಡಲು ಅವಕಾಶ ಕಲ್ಪಿಸಿಲ್ಲ ಎಂದು ಮೂಲಗಳು ತಿಳಿಸಿವೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News