ಅವಧಿ ಮುಕ್ತಾಯದೊಳಗೆ ‘ಸಾಮಾಜಿಕ, ಶೈಕ್ಷಣಿಕ ಸಮೀಕ್ಷಾ’ ವರದಿ ಸಲ್ಲಿಸುವೆ: ಜಯಪ್ರಕಾಶ್ ಹೆಗ್ಡೆ

Update: 2024-01-24 15:49 GMT

ಕೆ.ಜಯಪ್ರಕಾಶ ಹೆಗ್ಡೆ

ಬೆಂಗಳೂರು, ಜ. 24: ಜನವರಿ ತಿಂಗಳ ಅಂತ್ಯದ ವೇಳೆ (ಜ. 31)ನಮ್ಮ ಅವಧಿ ಮುಕ್ತಾಯಗೊಳ್ಳಲಿದ್ದು, ನನ್ನ ಅವಧಿ ಮುಗಿಯುವ ವೇಳೆಗೆ ‘ಸಾಮಾಜಿಕ, ಶೈಕ್ಷಣಿಕ ಸಮೀಕ್ಷಾ(ಜಾತಿಗಣತಿ) ವರದಿ’ಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಕರ್ನಾಟಕ ರಾಜ್ಯ ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ ಹೆಗ್ಡೆ ತಿಳಿಸಿದ್ದಾರೆ.

ಬುಧವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ‘ಸಮೀಕ್ಷಾ ವರದಿ ಸಲ್ಲಿಸಲು ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿ ಸಮಯ ಕೇಳಿದ್ದು, ಅವರು ಆಯವ್ಯಯ ಸಿದ್ಧತೆಯಲ್ಲಿ ನಿರತರಾಗಿದ್ದಾರೆ. ಅವರು ಸಮಯ ಕೊಟ್ಟರೆ ವರದಿ ಸಲ್ಲಿಸಲು ಕ್ರಮ ವಹಿಸಲಾಗುವುದು' ಎಂದು ನುಡಿದರು.

ಸಮೀಕ್ಷಾ ವರದಿ ಜಯಪ್ರಕಾಶ್ ಹೆಗ್ಡೆ ಅಥವಾ ಎಚ್.ಕಾಂತರಾಜ ವರದಿ ಎಂದೇನೂ ಇಲ್ಲ. ಆಯೋಗವು ಸಂಗ್ರಹಿಸಿರುವ ದತ್ತಾಂಶಗಳನ್ನು ವಿಶ್ಲೇಷಿಸಿ ವರದಿ ಸಿದ್ಧಪಡಿಸಬೇಕಿತ್ತು. ಅದಕ್ಕಾಗಿ ಸಮಯಾವಕಾಶ ಪಡೆದಿದ್ದೆವು. ವರದಿ ಸಿದ್ಧಪಡಿಸುವ ಕೆಲಸ ಮುಗಿಯುತ್ತಾ ಬಂದಿದ್ದು, ಆ ವರದಿಯನ್ನು ಸರಕಾರಕ್ಕೆ ಸಲ್ಲಿಕೆ ಮಾಡಲಾಗುವುದು ಎಂದು ಅವರು ತಿಳಿಸಿದರು.

ಸಮೀಕ್ಷಾ ವರದಿ ಸರಕಾರ ಸ್ವೀಕರಿಸಿ, ಬಹಿರಂಗಗೊಂಡ ಬಳಿಕ ಪರ-ವಿರೋಧದ ಚರ್ಚೆ ನಡೆದರೆ ಒಳ್ಳೆಯದು. ಆಯೋಗವು ವರದಿಯನ್ನು ಸರಕಾರ ಸಂಪುಟ ಸಭೆಯಲ್ಲಿ ಚರ್ಚಿಸಿ ಮುಂದಿನ ತೀರ್ಮಾನ ಮಾಡಲಿದೆ. ಆದರೆ, ಇದೀಗ ವರದಿ ನೀಡುವುದಷ್ಟೇ ನಮ್ಮ ಕೆಲಸ. ನನ್ನ ಅವಧಿಯನ್ನು ಮತ್ತೊಮ್ಮೆ ವಿಸ್ತರಿಸುವ ಬಗ್ಗೆ ಬಹಿರಂಗವಾಗಿ ಏನನ್ನು ಹೇಳುವುದಿಲ್ಲ ಎಂದು ಜಯಪ್ರಕಾಶ್ ಹೆಗ್ಡೆ ನಿರಾಕರಿಸಿದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News