ಎಂ.ಬಿ.ಪಾಟೀಲ್ ನೇತೃತ್ವದ ಉನ್ನತ ಮಟ್ಟದ ನಿಯೋಗದ ದಕ್ಷಿಣ ಕೊರಿಯಾ ಭೇಟಿ ಅಂತ್ಯ
ಬೆಂಗಳೂರು : ರಾಜ್ಯದಲ್ಲಿ ಸ್ಮಾರ್ಟ್‍ಫೋನ್‍ಗಳ ಕ್ಯಾಮೆರಾ ಪರೀಕ್ಷಿಸುವ ಯಂತ್ರಗಳನ್ನು ತಯಾರಿಸುವ ಘಟಕ ಆರಂಭಿಸುವ ಯೋಜನೆಯ ಒಪ್ಪಂದಕ್ಕೆ ದಕ್ಷಿಣ ಕೊರಿಯಾದ ಹೈವಿಷನ್ ಕಂಪೆನಿಯು ಕರ್ನಾಟಕ ಸರಕಾರದ ಜೊತೆ ಶುಕ್ರವಾರ ಸೋಲ್‍ನಲ್ಲಿ ಒಪ್ಪಂದಕ್ಕೆ ಸಹಿ ಹಾಕಿದೆ.
ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ನೇತೃತ್ವದಲ್ಲಿನ ರಾಜ್ಯದ ಉನ್ನತ ಮಟ್ಟದ ನಿಯೋಗವು ಹೈವಿಷನ್ ಸಿಇಒ ಚೋಯಿ ಡೂ-ವನ್ ಅವರನ್ನು ಭೇಟಿಯಾದ ಸಂದರ್ಭದಲ್ಲಿ ಈ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಈ ಕ್ಯಾಮೆರಾ ಇನ್‍ಸ್ಪೆಕ್ಷನ್ ಮಷಿನ್ಸ್ ತಯಾರಿಕಾ ಘಟಕವು ಫಾಕ್ಸ್ ಕಾನ್‍ನ ತಯಾರಿಕಾ ಘಟಕದ ಸಮೀಪ ಕಾರ್ಯಾರಂಭ ಮಾಡಲಿದೆ. ಇದರಿಂದ ರಾಜ್ಯದ ಎಲೆಕ್ಟ್ರಾನಿಕ್ಸ್ ತಯಾರಿಕಾ ಉದ್ಯಮದ ಬೆಳವಣಿಗೆಗೆ ನೆರವಾಗಲಿದೆ.
ಎಲೆಕ್ಟ್ರಾನಿಕ್ಸ್ ವಲಯಕ್ಕೆ ದೇಶದಲ್ಲಿಯೇ ಗರಿಷ್ಠ ಮಟ್ಟವಾಗಿರುವ ಶೇ.30-35ರಷ್ಟು ಸಬ್ಸಿಡಿಯನ್ನು ಕರ್ನಾಟಕ ಸರಕಾರ ನೀಡುತ್ತಿರುವುದನ್ನು ಸಚಿವ ಪಾಟೀಲ್, ಹೈವಿಷನ್ ಕಂಪೆನಿಯ ಮುಖ್ಯಸ್ಥರ ಗಮನಕ್ಕೆ ತಂದರು. ರಾಜ್ಯದ ಉನ್ನತ ಮಟ್ಟದ ನಿಯೋಗವು ಎಲ್‍ಎಕ್ಸ್ ಇಂಟರ್ ನ್ಯಾಷನಲ್ ಕಾರ್ಪ್, ಸ್ಯಾಮ್ಸಂಗ್ ಎಲೆಕ್ಟ್ರಾನಿಕ್ಸ್ ಮುಖ್ಯಸ್ಥರನ್ನೂ ಭೇಟಿಯಾಗಿ ಮಾತುಕತೆ ನಡೆಸಿತು.
ಎಲ್‍ಎಕ್ಸ್ ಇಂಟರ್ ನ್ಯಾಷನಲ್ ಕಾರ್ಪ್ ಮುಖ್ಯಸ್ಥರ ಭೇಟಿ ಸಂದರ್ಭದಲ್ಲಿ ವಿದ್ಯುತ್ ಚಾಲಿತ ವಾಹನ, ಬ್ಯಾಟರಿ ತಯಾರಿಕೆ ಸಾಧ್ಯತೆ ಮತ್ತು ವಹಿವಾಟು ವಿಸ್ತರಣೆ ಅವಕಾಶಗಳ ಬಗ್ಗೆ ಸಚಿವ ಪಾಟೀಲ್ ಅವರು ಚರ್ಚೆ ನಡೆಸಿದರು. ಎಲ್‍ಜಿ ಕಾರ್ಪ್‍ನ ಪ್ರತ್ಯೇಕ ಕಂಪೆನಿಯಾಗಿರುವ ಎಲ್‍ಎಕ್ಸ್ ಇಂಟರ್ ನ್ಯಾಷನಲ್ ಕಾರ್ಪ್‍ನ ವಿಭಿನ್ನ ವಹಿವಾಟುಗಳಾದ ಎಲ್‍ಎಕ್ಸ್ ಸೆಮಿಕಾನ್, ಎಲ್‍ಎಕ್ಸ್ ಗ್ಲಾಸ್, ಎಲ್‍ಎಕ್ಸ್ ಪ್ಲಾಸ್ಟಿಕ್ ಮತ್ತು ಎಲ್‍ಎಕ್ಸ್ ಹೌಸಸ್ ವಹಿವಾಟು ಮತ್ತು ಎಲ್‍ಜಿ ಎನರ್ಜಿ ಸೊಲುಷನ್ಸ್ ಜೊತೆಗಿನ ಸಹಯೋಗದ ಬಗ್ಗೆ ಚರ್ಚೆ ನಡೆಸಲಾಯಿತು.
ಸ್ಯಾಮ್‍ಸಂಗ್ ಎಲೆಕ್ಟ್ರಾನಿಕ್ಸ್ ಮುಖ್ಯಸ್ಥರ ಜೊತೆಗಿನ ಭೇಟಿ ಸಂದರ್ಭದಲ್ಲಿ ಸ್ಮಾರ್ಟ್‍ಫೊನ್, ಎಲೆಕ್ಟ್ರಾನಿಕ್ಸ್, ಬ್ಯಾಟರಿ ಸೆಲ್ ತಯಾರಿಕೆಗೆ ಕರ್ನಾಟಕದಲ್ಲಿ ಇರುವ ಅನುಕೂಲತೆಗಳನ್ನು ನಿಯೋಗವು ಮನವರಿಕೆ ಮಾಡಿಕೊಟ್ಟಿತು. ಸೆಮಿಕಂಡಕ್ಟರ್, ವಿದ್ಯುತ್ ಚಾಲಿತ ವಾಹನ, ಜೈವಿಕ ತಂತ್ರಜ್ಞಾನ ವಲಯಗಳಲ್ಲಿ ಕರ್ನಾಟಕವು ಉತೃಷ್ಟ ಮೂಲಸೌಲಭ್ಯ, ಪರಿಣತ ತಂತ್ರಜ್ಞರು, ಪೂರಕ ಪರಿಸರದ ನೆರವಿನಿಂದ ಜಾಗತಿಕ ಆವಿಷ್ಕಾರದಲ್ಲಿ ಮುನ್ನಡೆ ಸಾಧಿಸುತ್ತಿರುವುದನ್ನು ವಿವರಿಸಲಾಗಿದೆ.
ರಾಯಭಾರಿಗೆ ಕೃತಜ್ಞತೆ ಸಲ್ಲಿಕೆ: ವಿವಿಧ ಕಂಪೆನಿಗಳ ಜೊತೆಗಿನ ಭೇಟಿ ಮತ್ತು ಸೋಲ್‍ನಲ್ಲಿ ಏರ್ಪಡಿಸಿದ್ದ ರೋಡ್ ಶೋ ಯಶಸ್ಸಿಗೆ ಸಹಕರಿಸಿದ ದಕ್ಷಿಣ ಕೊರಿಯಾದಲ್ಲಿನ ಭಾರತದ ರಾಯಭಾರಿ ಅಮಿತ್ ಕುಮಾರ್ ಅವರಿಗೆ ಸಚಿವ ಪಾಟೀಲ್ ಅವರು ಇದೇ ಸಂದರ್ಭದಲ್ಲಿ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.