ಇಸ್ರೋ ಕೇಂದ್ರಕ್ಕೆ ಭೇಟಿ ನೀಡಿ ವಿಜ್ಞಾನಿಗಳನ್ನು ಸನ್ಮಾನಿಸಿದ ಸ್ಪೀಕರ್ ಯು.ಟಿ. ಖಾದರ್
ಬೆಂಗಳೂರು: ಭಾರತದ ಚಂದ್ರಯಾನ-3 ಯೋಜನೆಯ ‘ವಿಕ್ರಮ’ ಲ್ಯಾಂಡರ್ ಚಂದ್ರನ ದಕ್ಷಿಣ ಧ್ರುವದ ಸಮೀಪ ಬುಧವಾರ ಯಶಸ್ವಿಯಾಗಿ ನೆಲಸ್ಪರ್ಶ ಮಾಡಿದೆ. ಈ ಹಿನ್ನೆಲೆಯಲ್ಲಿ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಅವರು ನಗರದ ಪೀಣ್ಯದಲ್ಲಿರುವ ಇಸ್ರೋ ಕೇಂದ್ರಕ್ಕೆ ಭೇಟಿ ನೀಡಿ ಚಂದ್ರಯಾನ-3 ಯಶಸ್ಸಿಗೆ ಕಾರಣರಾದ ಇಸ್ರೋ ಅಧ್ಯಕ್ಷ ಸೋಮನಾಥ ಸೇರಿದಂತೆ ಅಲ್ಲಿಯ ವಿಜ್ಞಾನಿಗಳು, ಸಿಬ್ಬಂದಿ ವರ್ಗದವರನ್ನು ಅಭಿನಂದಿಸಿದರು.
ʼʼದೇಶದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೋದ ಚಂದ್ರಕ್ರಾಂತಿಗೆ ನನ್ನದೊಂದು ಸಲಾಂ. ಚಂದ್ರನ ದಕ್ಷಿಣ ಧ್ರುವದ ಮೇಲಿಳಿದ ಜಗತ್ತಿನ ಮೊದಲ ದೇಶ ಭಾರತ ಎಂಬ ಮಾತು ಕೇಳುತ್ತಲೇ ಮೈ ರೋಮಾಂಚನವಾಗುತ್ತಿದೆ. ಈ ಐತಿಹಾಸಿಕ ಕಾಲಘಟ್ಟಕ್ಕೆ ನಾನು ಸಹ ಸಾಕ್ಷಿಯಾಗಿದ್ದೇನೆ ಎಂಬುದೇ ಹೆಮ್ಮೆಯ ವಿಚಾರʼʼ ಎಂದು ಯು.ಟಿ. ಖಾದರ್ ಟ್ವೀಟ್ ಮಾಡಿದ್ದಾರೆ.
ʼʼಇಸ್ರೊ ಸಂಸ್ಥೆಯ ಮುಖ್ಯಸ್ಥರು ಹಾಗೂ ಎಲ್ಲಾ ಸಿಬ್ಬಂದಿ ವರ್ಗಕ್ಕೆ ನನ್ನ ತುಂಬ ಹೃದಯದ ಅಭಿನಂದನೆಗಳು. ನಮ್ಮ ವಿಜ್ಞಾನಿಗಳ ಸಾಧನೆ ದಿಗಂತದಾಚೆಗೂ ಮುಂದುವರಿಯಲಿ. ಇಸ್ರೋ ಗೆಲ್ಲುತ್ತಲೇ ಇರಲಿ. ಭಾರತದ ಬಾವುಟ ಹೊಸ ಕಕ್ಷೆ ತಲುಪಲಿ. ಮೇರಾ ಭಾರತ್ ಮಹಾನ್ ʼʼ ಎಂದು ಅವರು ಬರೆದುಕೊಂಡಿದ್ದಾರೆ.