ಶೃಂಗೇರಿ | ತುಂಗಾ ನದಿಯಲ್ಲಿ ದಿಢೀರ್ ಹೆಚ್ಚಿದ ನೀರಿನ ಹರಿವು; ನಡುಗಡ್ಡೆಯಲ್ಲಿ ಸಿಲುಕಿಕೊಂಡಿದ್ದ ಒಂದೇ ಕುಟುಂಬದ ಮೂವರ ರಕ್ಷಣೆ
ಚಿಕ್ಕಮಗಳೂರು, ಸೆ.29: ಕಾಫಿನಾಡಿನ ಮಲೆನಾಡು ಭಾಗದಲ್ಲಿ ಕಳೆದ ಎರಡು ದಿನಗಳಿಂದ ಸಾಧಾರಣ ಮಳೆಯಾಗುತ್ತಿದ್ದು, ನಿರಂತರ ಮಳೆಯಿಂದಾಗಿ ಮಲೆನಾಡು ಭಾಗದ ಭದ್ರಾ, ತುಂಗಾ ನದಿಗಳಲ್ಲಿ ನೀರಿನ ಹರಿವೂ ಹೆಚ್ಚುತ್ತಿದೆ.
ಶುಕ್ರವಾರ ಶೃಂಗೇರಿ ತಾಲೂಕು ವ್ಯಾಪ್ತಿಯಲ್ಲಿ ಕೆಲ ಹೊತ್ತು ಧಾರಾಕಾರ ಮಳೆ ಸುರಿದ ಪರಿಣಾಮ ತುಂಗಾನದಿಯಲ್ಲಿ ದಿಢೀರ್ ನೀರಿನ ಹರಿವು ಹೆಚ್ಚಾಗಿದ್ದು, ಈ ವೇಳೆ ಶೃಂಗೇರಿ ಪಟ್ಟಣದ ಮೂಲಕ ಹರಿಯುವ ನದಿಯ ಮಧ್ಯೆ ಇರುವ ನಡುಗಡ್ಡೆಯಲ್ಲಿ ಸಿಲುಕಿಕೊಂಡು ಅಪಾಯದ ಸ್ಥಿತಿಯಲ್ಲಿದ್ದ ಬಾಲಕ ಹಾಗೂ ಆತನ ತಂದೆ, ತಾಯಿಯನ್ನು ಅಗ್ನಿಶಾಮಕದಳ ಹಾಗೂ ಪೊಲೀಸ್ ಸಿಬ್ಬಂದಿ ರಕ್ಷಿಸಿದ ಘಟನೆ ವರದಿಯಾಗಿದೆ.
ಶೃಂಗೇರಿ ಪಟ್ಟಣದ ಶಾರದಾಂಬ ದೇವಾಲಯದ ಪಕ್ಕದಲ್ಲಿ ಹರಿಯುವ ತುಂಗಾ ನದಿಯ ಮಧ್ಯೆ ಇದ್ದ ನಡುಗಡ್ಡೆಗೆ ಬಾಲಕ ಸೇರಿದಂತೆ ಮೂವರು ತೆರಳಿದ್ದರು. ಇದೇ ಸಂದರ್ಭದಲ್ಲಿ ಶೃಂಗೇರಿ ಸುತ್ತಮುತ್ತ ಧಾರಾಕಾರ ಮಳೆಯಾಗಿದ್ದು, ಮಳೆಯಿಂದಾಗಿ ನದಿಯಲ್ಲಿ ನೀರಿನ ಹರಿವು ದಿಢೀರ್ ಏರಿಕೆಯಾಗಿದೆ ಎನ್ನಲಾಗಿದೆ. ನದಿಯಲ್ಲಿ ನೀರಿನ ಹರಿವು ದಿಢೀರ್ ಏರಿಕೆಯಾದ ಪರಿಣಾಮ ನದಿ ಮಧ್ಯೆ ನಡುಗಡ್ಡೆಯಲ್ಲಿ ಸಿಲುಕಿಕೊಂಡಿದ್ದ ಒಂದೇ ಕುಟುಂಬದ ಮೂವರು ಭೀತಿಗೊಳಗಾಗಿ ರಕ್ಷಣೆಗಾಗಿ ಕೂಗಿಕೊಂಡಿದ್ದಾರೆ. ಇದನ್ನು ಗಮನಿಸಿದ ಸ್ಥಳೀಯರು 112 ಸಂಖ್ಯೆಗೆ ಕರೆ ಮಾಡಿದ್ದಾರೆ.
ಕೂಡಲೇ ಕಾರ್ಯಪ್ರವೃತ್ತರಾದ ಶೃಂಗೇರಿ ಪೊಲೀಸ್ ಠಾಣೆಯ ತುರ್ತು ಸ್ಪಂದನಾ ಪೊಲೀಸ್ ಸಿಬ್ಬಂದಿ ಸ್ಥಳಕ್ಕಾಗಮಿಸಿ ಅಗ್ನಿಶಾಮಕದಳದ ಸಿಬ್ಬಂದಿ ಹಾಗೂ ಸ್ಥಳೀಯ ಜನರ ಸಹಕಾರ ಪಡೆದು ಬೋಟ್ ಮೂಲಕ ಮೂವರನ್ನು ರಕ್ಷಣೆ ಮಾಡಿದ್ದಾರೆ. ನಡುಗಡ್ಡೆಗೆ ಸಿಲುಕಿದ್ದವರು ಮೂಲತಃ ಆಂಧ್ರಪ್ರದೇಶದವರಾಗಿದ್ದು, ಕೆಲ ವರ್ಷಗಳಿಂದ ಶೃಂಗೇರಿಯಲ್ಲೇ ನೆಲೆಸಿದ್ದಾರೆಂದು ತಿಳಿದು ಬಂದಿದೆ.
ಮೂವರ ರಕ್ಷಣೆ: ಮೆಚ್ಚುಗೆ ವ್ಯಕ್ತಪಡಿಸಿದ ಎಸ್ಪಿ
ಅಪಾಯದಲ್ಲಿ ಸಿಲುಕಿಕೊಂಡಿದ್ದ ಮೂವರನ್ನು ರಕ್ಷಣೆ ಮಾಡಿದ ಪೊಲೀಸ್, ಅಗ್ನಿಶಾಮಕದಳ ಸಿಬ್ಬಂದಿ ಹಾಗೂ ಸಾರ್ವಜನಿಕರ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮಳೆ ಅಥವಾ ಯಾವುದೇ ತುರ್ತು ಸಂದರ್ಭಗಳಲ್ಲಿ ಸಾರ್ವಜನಿಕರು 112 ಸಂಖ್ಯೆಗೆ ಕರೆ ಮಾಡಿದಲ್ಲಿ ಪೊಲೀಸರು ಹಾಗೂ ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ಬಂದು ಸೇವೆ ನೀಡಲಿದ್ದಾರೆ. ಸಾರ್ವಜನಿಕರು ಇದರ ಸದುಪಯೋಗ ಪಡೆಯಬೇಕು ಎಂದು ಎಸ್ಪಿ ಡಾ.ವಿಕ್ರಮ್ ಆಮ್ಟೆ ಮನವಿ ಮಾಡಿದ್ದಾರೆ.