ರಾಜ್ಯ ಕಾಂಗ್ರೆಸ್ ಸರಕಾರ ಲಿಂಗಾಯತ ಸಮುದಾಯದ ಋಣಭಾರದಲ್ಲಿದೆ: ಬಸವ ಜಯ ಮೃತ್ಯುಂಜಯ ಶ್ರೀ
ದಾವಣಗೆರೆ, ಅ.3: ರಾಜ್ಯ ಕಾಂಗ್ರೆಸ್ ಸರಕಾರ ಲಿಂಗಾಯತ ಸಮುದಾಯದ ಋಣಭಾರದಲ್ಲಿದೆ ಎಂಬುದನ್ನು ಮರೆಯಬಾರದು ಎಂದು ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಎಚ್ಚರಿಕೆ ನೀಡಿದ್ದಾರೆ.
ನಗರದಲ್ಲಿ ಮಂಗಳವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಲಿಂಗಾಯತ ಸಮುದಾಯದ ಅಧಿಕಾರಿಗಳಿಗೆ ಅನ್ಯಾಯವಾಗುತ್ತಿದೆ ಎಂಬುದಾಗಿ ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಹೇಳಿದ್ದಾರೆ. ನನಗೂ ಕೆಲವು ಅಧಿಕಾರಿಗಳು ಅದೇ ರೀತಿ ತಿಳಿಸಿದ್ದಾರೆ ಎಂದರು. ಯಾವುದೇ ಪಕ್ಷ ಅಧಿಕಾರಕ್ಕೆ ಬಂದಾಗ ಒಂದು ಸಮುದಾಯದ ಅಧಿಕಾರಿಗಳಿಗೆ ತಾರತಮ್ಯ ಮಾಡುವುದು ಸಹಜ. ಅದರಂತೆ ಕಾಂಗ್ರೆಸ್ ಸರಕಾರದಲ್ಲೂ ಆಗುತ್ತಿದೆ. ಕಾಂಗ್ರೆಸ್ ಅಧಿಕಾರದಲ್ಲಿ ಲಿಂಗಾಯತ ಸಮಾಜದ ಅಧಿಕಾರಿಗಳಿಗೆ ಆಯಕಟ್ಟಿನ ಹುದ್ದೆಗಳಲ್ಲಿ ಅನ್ಯಾಯ ಆಗುತ್ತಿದೆ ಎಂದು ಹೇಳಿರುವ ಶಾಮನೂರು ಶಿವಶಂಕರಪ್ಪ ಅವರ ನೋವನ್ನು ಸರಕಾರ ಅರ್ಥ ಮಾಡಿಕೊಂಡು ಸರಿಪಡಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಬೇಕೆಂದು ಹೇಳಿದರು.
ಚುನಾವಣೆಗೆ ಮುನ್ನ ಮೀಸಲು ಬೇಕು: 2024ರ ಲೋಕಸಭೆ ಚುನಾವಣೆಗೆ ಮುನ್ನವೇ ಪಂಚಮಸಾಲಿ ಸಮಾಜಕ್ಕೆ ರಾಜ್ಯ ಸರಕಾರ ಪ್ರವರ್ಗ-2ಎ ಮೀಸಲಾತಿ ನೀಡಬೇಕು. ಎಲ್ಲ ಲಿಂಗಾಯತ ಸಮುದಾಯಗಳನ್ನು ಕೇಂದ್ರದ ಹಿಂದುಳಿದ ವರ್ಗ ಗಳ ಪಟ್ಟಿಗೆ ಸೇರಿಸಲು ಶಿಫಾರಸು ಮಾಡಬೇಕು ಎಂದು ಹೋರಾಟ ನಡೆಸಲಾಗುತ್ತಿದೆ. ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ನಂತರ ನಮ್ಮ ಬೇಡಿಕೆ ಈಡೇರಿಸಬೇಕು ಎಂಬುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕೇಳಲಾಗಿತ್ತು. ಬಜೆಟ್ ಸಭೆ ನಂತರ ಭೇಟಿಯಾಗುವುದಾಗಿ ಹೇಳಿದ್ದರು. ಈ ನಡುವೆ ನಮ್ಮ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಮೂಹಿಕ ಇಷ್ಟಲಿಂಗ ಪೂಜೆ ನೆರವೇರಿಸುವ ಮೂಲಕ ಹೋರಾಟ ಪುನರಾರಂಭಿಸಲಾಗಿದೆ. ಅ.13ರಂದು ಧಾರವಾಡದಲ್ಲಿ ಹೋರಾಟ ನಡೆಯಲಿದ್ದು, ಶೀಘ್ರವೇ ದಾವಣಗೆರೆಯಲ್ಲೂ ಹೋರಾಟ ನಡೆಸಲಾಗುವುದು ಎಂದು ಶ್ರೀಗಳು ತಿಳಿಸಿದರು.
ಕೇಂದ್ರವೂ ಜಾತಿ ಗಣತಿ ನಡೆಸಲಿ:
ಜಾತಿ ಗಣತಿ ನಡೆಸಬೇಕೆಂಬ ಎಂಬ ಒತ್ತಾಯ ಎಲ್ಲೆಡೆ ಕೇಳಿ ಬರುತ್ತಿದೆ. ಬ್ರಿಟಿಷ್ ಆಡಳಿತಾವಧಿಯಲ್ಲಿ ಜಾತಿ ಗಣತಿ ನಡೆದ ನಂತರ ಮತ್ತೆ ನಡೆದಿಲ್ಲ. ಕೇಂದ್ರ ಸರಕಾರವೂ ಜಾತಿ ಗಣತಿಗೆ ಮುಂದಾಗಬೇಕು. ಯಾವುದೋ ಒಂದು ಸಮುದಾಯ ಗುರಿಯಾಗಿಸಿಕೊಂಡು ದುರುದ್ದೇಶದಿಂದ ಗಣತಿ ನಡೆಸಬಾರದು. ಸಂವಿಧಾನದ ಆಶಯದಂತೆ ವೈಜ್ಞಾನಿಕವಾಗಿ ದೇಶದ ಅಭಿವೃದ್ಧಿಗೆ ಪೂರಕವಾಗಿ ಮತ್ತು ಎಲ್ಲ ಸಮುದಾಯಗಳಿಗೆ ಅಗತ್ಯ ಸೌಲಭ್ಯ, ಸಾಮಾಜಿಕ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಜಾತಿ ಗಣತಿ ನಡೆಸಬೇಕೆಂದು ಬಸವ ಜಯಮೃತ್ಯುಂಜಯ ಸ್ವಾಮೀಜಿ ಆಗ್ರಹಿಸಿದರು.