‘ಬಡವರಿಗೆ ಮನೆ ಹಂಚಿಕೆ’ ಲೋಪವಾದರೆ ಕಠಿಣ ಕ್ರಮ: ಸಚಿವ ಝಮೀರ್ ಅಹ್ಮದ್

Update: 2024-02-10 15:44 GMT

ಬೆಂಗಳೂರು: ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ಬಡ ಕುಟುಂಬಗಳಿಗೆ ನಿರ್ಮಿಸಿ ಕೊಡುತ್ತಿರುವ ಮನೆಗಳ ಗುಣಮಟ್ಟ ಉತ್ತಮವಾಗಿರಬೇಕು. ಜತೆಗೆ ಮೂಲ ಸೌಕರ್ಯ ಸಹಿತ ಎಲ್ಲ ಕಾಮಗಾರಿ ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಬೇಕು ಎಂದು ವಸತಿ ಸಚಿವ ಝಮೀರ್ ಅಹ್ಮದ್ ಖಾನ್ ಸೂಚನೆ ನೀಡಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಈ ತಿಂಗಳ ಅಂತ್ಯದಲ್ಲಿ 36 ಸಾವಿರ ಮನೆಗಳನ್ನು ಫಲಾನುಭವಿಗಳಿಗೆ ಹಂಚಿಕೆ ಮಾಡುತ್ತಿರುವ ಹಿನ್ನಲೆಯಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಅವರು ಮನೆಗಳ ಕಾಮಗಾರಿಯ ಪ್ರಗತಿ ಪರಿಶೀಲನೆ ನಡೆಸಿದರು.

ಮುಖ್ಯಮಂತ್ರಿ ಏಕಕಾಲದಲ್ಲಿ ರಾಜ್ಯದೆಲ್ಲೆಡೆ ಮನೆಗಳ ಹಂಚಿಕೆಗೆ ಚಾಲನೆ ನೀಡಲಿದ್ದು, ಅದೇ ದಿನ ಫಲಾನುಭವಿಗಳಿಗೆ ಮನೆಯ ಕೀಲಿಕೈ ಗಳನ್ನು ನೀಡಬೇಕು. ಕುಡಿಯುವ ನೀರು, ಒಳ ಚರಂಡಿ, ವಿದ್ಯುತ್ ಸಂಪರ್ಕ ಸಹಿತ ಮೂಲ ಸೌಕರ್ಯ ಕಾಮಗಾರಿ ಫೆ.20ರೊಳಗೆ ಮುಗಿದಿರಬೇಕು. ಇಲ್ಲದಿದ್ದರೆ ಸಂಬಂಧ ಪಟ್ಟ ಅಧಿಕಾರಿಗಳನ್ನು ಹೊಣೆ ಮಾಡಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.

ಪ್ರತಿ ಯೋಜನೆಯಲ್ಲಿ ಎಷ್ಟು ಮನೆ ನೀಡಲಾಗುವುದು ಎಂಬ ಗುರಿ ನೀಡಲಾಗಿದೆಯೋ ಅಷ್ಟು ಕೊಡಲೇಬೇಕು. ಗುತ್ತಿಗೆದಾರರಿಂದ ತೊಂದರೆ ಇದ್ದರೆ ಈಗಲೇ ಹೇಳಿಬಿಡಿ, ಅಂತಹವರನ್ನು ಕಪ್ಪು ಪಟ್ಟಿಗೆ ಸೇರಿಸಲಾಗುವುದು. ಅಧಿಕಾರಿಗಳ ನಿರ್ಲಕ್ಷ್ಯದಿಂದ ಸಮಸ್ಯೆ ಆದರೆ ಅಮಾನತು ಸೇರಿದಂತೆ ಕಠಿಣ ಕ್ರಮ ಕೈಗೊಂಡು ಅವರನ್ನೇ ಹೊಣೆ ಮಾಡಲಾಗುವುದು ಎಂದು ಅವರು ತಿಳಿಸಿದರು.

ಮುಖ್ಯಮಂತ್ರಿ ಮನೆ ಹಂಚಿಕೆ ಮಾಡಿದ ನಂತರ ಖುದ್ದು ನಾನೇ ಪ್ರತಿ ಜಿಲ್ಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದೇನೆ. ಎಲ್ಲ ಮನೆಗಳಲ್ಲಿ ಫಲಾನುಭವಿಗಳು ವಾಸ ಇರಬೇಕು. ಹಂಚಿಕೆ ವೇಳೆಗೆ ಎಲ್ಲ ಸೌಕರ್ಯ ಕಲ್ಪಿಸಬೇಕು ಎಂದು ಝಮೀರ್ ಅಹ್ಮದ್ ಖಾನ್ ತಾಕೀತು ಮಾಡಿದರು.

ಕೊಳಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ 10 ವರ್ಷಗಳಲ್ಲಿ ಮಂಜೂರು ಮಾಡಿದ್ದ 1.82 ಲಕ್ಷ ಮನೆಗಳಿಗೆ ಫಲಾನುಭವಿಗಳ ವಂತಿಗೆ ಸರಕಾರವೇ ಭರಿಸುತ್ತಿದೆ. ಫಲಾನುಭ ವಿಗಳು ಒಂದು ಲಕ್ಷ ರೂ. ಪಾವತಿಸಿದರೆ ಉಳಿದ ಮೊತ್ತ ಸರಕಾರ ಭರಿಸುತ್ತಿದೆ. ಮೊದ ಹಂತದಲ್ಲಿ 36 ಸಾವಿರ ಮನೆ ನೀಡಲಾಗುತ್ತಿದೆ ಎಂದು ಅವರು ಹೇಳಿದರು. ಸಭೆಯಲ್ಲಿ ವಸತಿ ಇಲಾಖೆ ಕಾರ್ಯದರ್ಶಿ ನವೀನ್ ರಾಜ್ ಸಿಂಗ್, ಆಯುಕ್ತ ವೆಂಕಟೇಶ್, ಪ್ರಧಾನ ಅಭಿಯಂತರ ಬಾಲರಾಜು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News