ರಾಜ್ಯ ಸರಕಾರಕ್ಕೆ ʼಜಾತಿಗಣತಿ ʼ ವರದಿ ಸಲ್ಲಿಕೆ

Update: 2024-02-29 17:06 GMT

ಬೆಂಗಳೂರು : ರಾಜ್ಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದ 2015ನೆ ಸಾಲಿನಲ್ಲಿ ನಡೆಸಿದ್ದ ‘ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ'(ಜಾತಿವಾರು ಜನಗಣತಿ) ವರದಿಯನ್ನು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ್ ಹೆಗ್ಡೆ ನೇತೃತ್ವದ ಸಮಿತಿ ಅಧಿಕೃತವಾಗಿ ರಾಜ್ಯ ಸರಕಾರಕ್ಕೆ ಸಲ್ಲಿಸಿತು.

ಗುರುವಾರ ಇಲ್ಲಿನ ವಿಧಾನಸೌಧದ ಮುಖ್ಯಮಂತ್ರಿಗಳ ಕೊಠಡಿಯಲ್ಲಿ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ್ ಹೆಗ್ಡೆ ನೇತೃತ್ವದ ಸಮಿತಿ ಸದಸ್ಯರು ರಾಜ್ಯದ ವಿವಿಧ ಸಮುದಾಯಗಳ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸ್ಥಿತಿಗತಿಗಳು ಹಾಗೂ ಶಿಫಾರಸುಗಳನ್ನು ಒಳಗೊಂಡ ಮಹತ್ವದ 200 ಪುಟಗಳ ಪ್ರಧಾನ ವರದಿ ಹಾಗೂ 48 ಸಂಪುಟಗಳಷ್ಟಿರುವ ದತ್ತಾಂಶದ ಸಮಗ್ರ ವಿವರಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹಸ್ತಾಂತರ ಮಾಡಿದರು.

ವರದಿ ಸ್ವೀಕಾರ ಮಾಡಿ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷಾ ವರದಿಯನ್ನು ಸ್ವೀಕರಿಸಲಾಗಿದೆ. ವರದಿಯಲ್ಲಿ ಏನೇನಿದೆ ಎಂಬುವುದು ಮಾಹಿತಿ ಇಲ್ಲ. ಸಚಿವ ಸಂಪುಟ ಸಭೆಯಲ್ಲಿ ಈ ವರದಿಯ ಬಗ್ಗೆ ಚರ್ಚೆ ನಡೆಸಲಾಗುವುದು. ಇನ್ನೂ, ಈ ಬಗ್ಗೆ ಸಮಗ್ರವಾಗಿ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ್ ಹೆಗ್ಡೆ ಮಾತನಾಡಿ, ‘2014-15ರಲ್ಲಿ ಅಂದಿನ ರಾಜ್ಯ ಸರಕಾರದ ಆದೇಶದ ಮೇರೆಗೆ ಆಯಾ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಶಿಕ್ಷಕರು, ಅಧಿಕಾರಿಗಳು ದತ್ತಾಂಶ ವರದಿ ತಯಾರಿಸಿದ್ದಾರೆ. ಈ ಹಿಂದೆ ಆಯೋಗದ ಅಧ್ಯಕ್ಷರಾಗಿದ್ದ ಕಾಂತರಾಜ್ ನೇತೃತ್ವದ ಸಮಿತಿ ವರದಿ ಸಲ್ಲಿಕೆ ಮಾಡಬೇಕಿತ್ತು. ಕೆಲ ತಾಂತ್ರಿಕ ಕಾರಣದಿಂದ ಸಲ್ಲಿಕೆಯಾಗಿರಲಿಲ್ಲ. ಇದೀಗ ನಾವು ವರದಿಯನ್ನು ಸರಕಾರಕ್ಕೆ ಸಲ್ಲಿಸಿದ್ದೇವೆ ಎಂದು ಹೇಳಿದರು.

‘ರಾಜ್ಯ ಸರಕಾರದ ಸೂಚನೆಯಂತೆ ಲಭ್ಯವಿರುವ ದತ್ತಾಂಶದ ಆಧಾರದಡಿ ವರದಿ ಸಿದ್ಧಪಡಿಸಲಾಗಿದೆ. ವೈಜ್ಞಾನಿಕವಾಗಿ ವರದಿ ತಯಾರು ಮಾಡಲಾಗಿದೆ. ಸಮೀಕ್ಷಾ ವರದಿಯ ಕುರಿತ ವಿವಾದದ ಬಗ್ಗೆ ನಾನು ಯಾವುದೇ ಪ್ರತಿಕ್ರಿಯಿಸುವುದಿಲ್ಲ. ರಾಜ್ಯ ಸರಕಾರಕ್ಕೆ ವರದಿಯನ್ನು ಸಲ್ಲಿಸುವುದು ನನ್ನ ಕೆಲಸ. ವರದಿ ಜಾರಿ ಬಗ್ಗೆ ನನಗೆ ಗೊತ್ತಿಲ್ಲ. ಅದು ರಾಜ್ಯ ಸರಕಾರಕ್ಕೆ ಬಿಟ್ಟಿದ್ದು ಎಂದು ಜಯಪ್ರಕಾಶ್ ಹೆಗಡೆ ವಿವರಿಸಿದರು.

ವರದಿಯಲ್ಲ ಏನಿದೆ?: ‘ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ವರದಿಯು ಪ್ರತ್ಯೇಕವಾಗಿ ಒಟ್ಟು 13 ಪ್ರತಿಗಳನ್ನು ಒಳಗೊಂಡಿದೆ. ಮೊದಲನೆಯದಾಗಿ, ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ-2015, ಸಮಗ್ರ ರಾಜ್ಯ ವರದಿ, ಜಾತಿವಾರು ಜನಸಂಖ್ಯಾವಿವರ-1 ಸಂಪುಟ, ಜಾತಿ ಹಾಗು ವರ್ಗಗಳ ಪ್ರಮುಖ ಲಕ್ಷಣಗಳು, (ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳನ್ನು ಹೊರತುಪಡಿಸಿ-8 ಸಂಪುಟಗಳು), ಜಾತಿ ಹಾಗೂ ವರ್ಗಗಳ ಪ್ರಮುಖ ಲಕ್ಷಣಗಳು (ಪರಿಶಿಷ್ಟ ಜಾತಿಗಳ)-1 ಸಂಪುಟ, ಜಾತಿ ಹಾಗೂ ವರ್ಗಗಳ ಪ್ರಮುಖ ಲಕ್ಷಣಗಳು (ಪರಿಶಿಷ್ಟ ಪಂಗಡಗಳ) 1 ಸಂಪುಟ, ವಿಧಾನಸಭಾ ಕ್ಷೇತ್ರಗಳ ಜಾತಿವಾರು ಅಂಕಿ-ಅಂಶಗಳು (2 ಸಿಡಿಗಳು), ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ-2015ರ ದತ್ತಾಂಶಗಳ ಅಧ್ಯಯನ ವರದಿ-2024 ಇದೆ ಎಂದು ಆಯೋಗದ ಮೂಲಗಳು ತಿಳಿಸಿವೆ.

ವರದಿ ಸೋರಿಕೆಯಾಗಿಲ್ಲ: ‘ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷಾ ವರದಿ’ಯೂ ಯಾವುದೇ ಸಂದರ್ಭದಲ್ಲಿಯೂ ಸೋರಿಕೆ ಸಂಬಂಧದ ಆರೋಪ ಸುಳ್ಳು. ಇಷ್ಟು ದೊಡ್ಡದಾದ ಇಡೀ ವರದಿ ಹೇಗೆ ಸೋರಿಕೆ ಆಗುತ್ತದೆ?. ಆಯೋಗದ ಹಿಂದಿನ ಅಧ್ಯಕ್ಷರಾದ ಕಾಂತರಾಜ ಅವರ ವರದಿಯಲ್ಲಿ ಬಿಟ್ಟ ಹೋದ ಉಪಜಾತಿಗಳನ್ನು ಈ ವರದಿಯಲ್ಲಿ ಸೇರಿಸಲಾಗಿದೆ’

ಜಯಪ್ರಕಾಶ್ ಹೆಗ್ಡೆ, ಅಧ್ಯಕ್ಷ, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗ

‘ಇದು ಜಾತಿಗಣತಿ ವರದಿ ಅಲ್ಲ. ಬದಲಿಗೆ ‘ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷಾ ವರದಿ. ಈ ವರದಿಗೆ ಯಾರದ್ದೂ ವಿರೋಧ ಇಲ್ಲ. ಈಗ ವರದಿಯನ್ನು ಸರಕಾರ ಸ್ವೀಕಾರ ಮಾಡಿದ್ದು, ಇದರಲ್ಲಿನ ಅಂಶ ನೋಡಬೇಕಾಗಿದೆ’

ಶಿವರಾಜ ತಂಗಡಗಿ, ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ

 ‘ಸಾಮಾಜಿಕ, ಆರ್ಥಿಕ ಸಮೀಕ್ಷಾ ವರದಿ ಬಗ್ಗೆ ವಿಶೇಷವಾಗಿ ವೀರಶೈವ ಲಿಂಗಾಯತ ಸಮುದಾಯದವರಿಗೆ ಆತಂಕ ಇರುವುದು ನಿಜ. ಏಕೆಂದರೆ ಇಲ್ಲಿ ಹೆಚ್ಚಿನವರು ಉಪಪಂಗಡಗಳ ಹೆಸರು ಬರೆಸಿದ್ದಾರೆ. ಇದರ ಬದಲು ಎಲ್ಲ ಉಪಪಂಗಡಗಳೂ ‘ವೀರಶೈವ ಲಿಂಗಾಯತ' ಎಂದಾಗಬೇಕು ಎಂದು ನಾವು ದನಿ ಎತ್ತಿದ್ದು ನಿಜ. ಇದೇ ರೀತಿಯ ಗೊಂದಲ, ಆತಂಕಗಳು ಒಕ್ಕಲಿಗರು ಸೇರಿದಂತೆ ಹಲವು ಸಮುದಾಯಗಳಿಗೆ ಇದೆ. ಇವೆಲ್ಲವನ್ನೂ ಸರಕಾರ ಪರಿಗಣನೆಗೆ ತೆಗೆದುಕೊಳ್ಳಲಿದೆ. ಅಂತಿಮ ತೀರ್ಮಾನ ಸರಕಾರದ ವಿವೇಚನೆಗೆ ಬಿಟ್ಟಿದ್ದು’

ಎಂ.ಬಿ.ಪಾಟೀಲ್, ಬೃಹತ್ ಕೈಗಾರಿಕಾ ಸಚಿವ

9 ವರ್ಷಗಳ ಬಳಿಕ ಸರಕಾರದ ಕೈಸೇರಿದ ವರದಿ: ರಾಜ್ಯದ ಎಲ್ಲ ಕುಟುಂಬಗಳ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಯನ್ನು ಅರಿಯಲು 158.47ಕೋಟಿ ರೂ.ವೆಚ್ಚದಲ್ಲಿ ಎಚ್.ಕಾಂತರಾಜ ನೇತೃತ್ವದ ಹಿಂದುಳಿದ ವರ್ಗಗಳ ಶಾಶ್ವತ ಆಯೋಗವು 2015ರಲ್ಲಿ ಮನೆ ಮನೆ ಸಮೀಕ್ಷೆ ನಡೆಸಿತ್ತು. ಆದರೆ, ಆಯೋಗದ ಅವಧಿ ಮುಕ್ತಾಯ ವಾಗುವ ಸಂದರ್ಭದಲ್ಲಿ ವರದಿಯನ್ನು ಅಧಿಕೃತವಾಗಿ ಸರಕಾರಕ್ಕೆ ಸಲ್ಲಿಸಿರಲಿಲ್ಲ. ಇದೀಗ ಒಂಭತ್ತು ವರ್ಷಗಳ ಬಳಿಕ ವರದಿಯೂ ರಾಜ್ಯ ಸರಕಾರದ ಕೈಸೇರಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News