ಈಡಿ ಪ್ರಕರಣ ವಜಾಗೊಳಿಸಿದ ಸುಪ್ರೀಂ ಕೋರ್ಟ್‌ ; ಡಿ.ಕೆ.ಶಿವಕುಮಾರ್ ಪ್ರತಿಕ್ರಿಯಿಸಿದ್ದು ಹೀಗೆ...

Update: 2024-03-05 14:27 GMT

ಬೆಂಗಳೂರು: ನನ್ನ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನನಗೆ ರಿಲೀಫ್ ಕೊಟ್ಟಿದೆ ಎಂಬ ಮಾಹಿತಿ ಬಂದಿದೆ. ಸುಪ್ರೀಂಕೋರ್ಟ್ ಹಾಗೂ ನ್ಯಾಯಾಧೀಶರಿಗೆ ಸಾಷ್ಟಾಂಗ ನಮನಗಳನ್ನು ಸಲ್ಲಿಸುತ್ತೇನೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.

ಮಂಗಳವಾರ ಮುಖ್ಯಮಂತ್ರಿಯ ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ನ್ಯಾಯ ಪೀಠದಿಂದ ಅನ್ಯಾಯ ಆಗುವುದಿಲ್ಲ ಎಂದು ನಂಬಿದ್ದೆ. ಅದರಂತೆ ನ್ಯಾಯ ಸಿಕ್ಕಿದ್ದು ಸಂತೋಷವಾಗಿದೆ. ನನ್ನ ಪರವಾಗಿ ನಿಂತ ನಮ್ಮ ನಾಯಕರು, ಸ್ನೇಹಿತರು, ದೇಶದಾದ್ಯಂತ ನನಗೆ ಒಳ್ಳೆಯದನ್ನು ಬಯಸಿದ ಹಿತೈಷಿಗಳಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದರು.

ನ್ಯಾಯಾಲಯದ ಆದೇಶ ಪ್ರತಿ ಸಿಕ್ಕ ನಂತರ ಪೂರ್ಣ ಪ್ರಮಾಣದ ಹೇಳಿಕೆ ನೀಡುತ್ತೇನೆ. ನನ್ನ ಕಷ್ಟದ ದಿನಗಳಲ್ಲಿ ಸಿಕ್ಕ ಅತ್ಯಂತ ಸಂತೋಷದ ದಿನ ಇಂದು. ಸಿಬಿಐನವರು ಈಗಲೂ ಏನೆಲ್ಲಾ ಮಾಡುತ್ತಿದ್ದಾರೆ ಎಂದು ಸದ್ಯದಲ್ಲೇ ಬಹಿರಂಗಪಡಿಸುತ್ತೇನೆ. ಈ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸುವ ಪ್ರಯತ್ನ ನಡೆಯುತ್ತಿದೆಯಂತೆ. ಅವರು ಮೇಲ್ಮನವಿ ಹಾಕಲಿ. ಅವರು ಎಲ್ಲ ರೀತಿಯ ಹೋರಾಟ ಮಾಡಲಿ. ನಾನು ಸಿದ್ಧನಿದ್ದೇನೆ ಎಂದು ಅವರು ತಿಳಿಸಿದರು.

ನಾನು ಯಾವುದೇ ತಪ್ಪು ಮಾಡಿಲ್ಲ. ಹೀಗಾಗಿ ನನ್ನ ಮನೆ ಮೇಲೆ ಐಟಿ ದಾಳಿ ನಡೆದ ಮೊದಲ ದಿನದಿಂದಲೂ ನಾನು ಆತ್ಮವಿಶ್ವಾಸದಿಂದ ಎದುರಿಸಿದ್ದೆ. ಈಗಲೂ ಆತ್ಮವಿಶ್ವಾಸದಲ್ಲಿ ಇದ್ದೇನೆ, ಮುಂದೆಯೂ ಇರುತ್ತೇನೆ. ಅವರು ನನಗೆ ಎಷ್ಟು ತೊಂದರೆ ಕೊಡಲು ಪ್ರಯತ್ನಿಸುತ್ತಾರೋ ನಾನು ರಾಜಕೀಯವಾಗಿ ಅಷ್ಟೇ ಎತ್ತರಕ್ಕೆ ಬೆಳೆಯುತ್ತೇನೆ. ಸರಕಾರ ತನಿಖೆಯ ಅನುಮತಿ ಹಿಂಪಡೆದಿದ್ದರೂ ಸಿಬಿಐ ನನ್ನ ಆಪ್ತರಿಗೆ ಕಿರುಕುಳ ಮುಂದುವರೆಸಿದೆ ಎಂದು ಶಿವಕುಮಾರ್ ದೂರಿದರು.

ನನಗೆ ಯಾರೂ ವಿರೋಧಿಗಳಿಲ್ಲ. ಇದು ಪ್ರಕೃತಿ ನಿಯಮ. ನಮಗೆ ತೊಂದರೆ ಕೊಡುವವರೆಲ್ಲರೂ ನಮಗೆ ಒಂದು ರೂಪ ನೀಡುತ್ತಿರುತ್ತಾರೆ. ಕಲ್ಲು ಪ್ರಕೃತಿ, ಕಡಿದರೆ ಆಕೃತಿ, ಪೂಜಿಸಿದರೆ ಸಂಸ್ಕೃತಿ. ನಮಗೆ ಇಂತಹ ಏಟು ಬಿದ್ದಾಗ ನಾವು ಉತ್ತಮ ರೂಪ ಪಡೆಯುತ್ತೇವೆ ಎಂದು ಉಪ ಮುಖ್ಯಮಂತ್ರಿ ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News