ರಾಹುಲ್ ಗಾಂಧಿ ಸುಳ್ಳು ಮಾತಿನಿಂದ ಭಾರತ ವಿರೋಧಿಗಳಿಗೆ ಹೊಸ ಶಕ್ತಿ : ಸಂಸದ ತೇಜಸ್ವಿ ಸೂರ್ಯ

Update: 2024-09-13 13:06 GMT

 ತೇಜಸ್ವಿಸೂರ್ಯ(Screengrab:x/@BJP4Karnataka)

ಬೆಂಗಳೂರು: ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಅಮೆರಿಕದಲ್ಲಿ ಭಾರತದ ವಿರುದ್ಧ ಮಾತನಾಡಿದ್ದು, ಇದನ್ನು ದೇಶ ಗಂಭೀರವಾಗಿ ಪರಿಗಣಿಸುತ್ತಿದೆ. ರಾಹುಲ್ ಗಾಂಧಿ ಮಾತುಗಳು ಸುಳ್ಳಿನಿಂದ ಕೂಡಿರುವುದಷ್ಟೇ ಅಲ್ಲದೆ, ಭಾರತ ವಿರೋಧಿಸುವ ಶಕ್ತಿಗಳಿಗೆ ಹೊಸ ಶಕ್ತಿ ಕೊಟ್ಟಂತೆ ಕಾಣಿಸುತ್ತಿದೆ ಎಂದು ಬಿಜೆಪಿ ಯುವ ಮೋರ್ಚಾ ರಾಷ್ಟೀಯಾಧ್ಯಕ್ಷ ತೇಜಸ್ವಿಸೂರ್ಯ ಆಕ್ಷೇಪಿಸಿದ್ದಾರೆ.

ಶುಕ್ರವಾರ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯದಲ್ಲಿ ಮಾತನಾಡಿದ ಅವರು, ವಿದೇಶದಲ್ಲಿ ರಾಹುಲ್ ಗಾಂಧಿಯವರನ್ನು ಭೇಟಿ ಮಾಡಿದ ವ್ಯಕ್ತಿಗಳ ಹಿನ್ನೆಲೆಯನ್ನು ಗಮನಿಸಿದರೆ, ಯಾರು ಭಾರತದ ವಿರೋಧಿಗಳಿದ್ದಾರೋ ಅವರ ಜೊತೆ ರಾಹುಲ್ ಗಾಂಧಿಯವರು ಸ್ನೇಹಿತರಾಗಿರುವುದು ಸ್ಪಷ್ಟಗೊಳ್ಳುತ್ತದೆ ಎಂದು ತಿಳಿಸಿದರು.

ʼಇಂಡಿಯಾಸ್ ಎನಿಮೀಸ್ ಆರ್ ರಾಹುಲ್ ಗಾಂಧಿಸ್ ಫ್ರೆಂಡ್ಸ್ʼ, ಇದು ರಾಹುಲ್ ಗಾಂಧಿಯವರ ವರ್ತನೆ, ಅವರು ವಿದೇಶದಲ್ಲಿ ಆಡಿದ ಮಾತುಗಳು, ಭೇಟಿ ಮಾಡಿದ ಜನರಿಂದ ಸ್ಪಷ್ಟವಾಗುತ್ತಿದೆ. ದೇಶದ ಒಳಗಡೆ ರಾಹುಲ್ ಗಾಂಧಿಯವರು, ಬಿಜೆಪಿ ಮೀಸಲಾತಿಯನ್ನು ರದ್ದು ಮಾಡುತ್ತದೆ, ಜಾತಿ ಆಧಾರದ ಗಣತಿ ಮಾಡಿ, ಒಬಿಸಿ, ಎಸ್‍ಸಿ ಎಸ್‍ಟಿಗಳಿಗೆ ಅನ್ಯಾಯ ಆಗುತ್ತಿದೆ ಎಂದು ಭಾಷಣ ಮಾಡುತ್ತಾರೆ. ಆದರೆ, ವಿದೇಶದಲ್ಲಿ ಹೋದ ತಕ್ಷಣವೇ ಅಮೆರಿಕದಲ್ಲಿ ಇದ್ದ ತಕ್ಷಣ ಕಾಂಗ್ರೆಸ್ ಅಧಿಕಾರ ಸಿಕ್ಕಿದಾಗ ಮೀಸಲಾತಿ ರದ್ದು ಮಾಡುವುದಾಗಿ ಭಾಷಣ ಮಾಡುತ್ತಾರೆ ಎಂದು ಟೀಕಿಸಿದರು.

ರಾಹುಲ್ ಗಾಂಧಿಯವರು ಅಮೆರಿಕದಲ್ಲಿ ಭೇಟಿ ಮಾಡಿದ ವ್ಯಕ್ತಿಗಳ ಚಾರಿತ್ರ್ಯ, ಹಿನ್ನೆಲೆ ಕೇಳಿದರೆ ಆಶ್ಚರ್ಯಪಡುವಂತಿದೆ. ಭಾರತದ ವಿರುದ್ಧ ಅಮೆರಿಕದಲ್ಲಿ, ಅಮೆರಿಕದ ಸಂಸತ್ತಿನಲ್ಲಿ ನಿರಂತರವಾಗಿ ಮಾತನಾಡಿದ, ಭಾರತ ವಿರೋಧಿ ಕಾರ್ಯಕರ್ತ ಇಲ್ಹನ್ ಒಮರ್‍ರನ್ನು ರಾಹುಲ್ ಗಾಂಧಿ ಭೇಟಿ ಮಾಡಿದ್ದಾರೆ. ಜಮ್ಮು-ಕಾಶ್ಮೀರದಲ್ಲಿ ಭಾರತವು ಮಾನವ ಹಕ್ಕುಗಳನ್ನು ಉಲ್ಲಂಘಿಸಿದ್ದಾಗಿ ಪ್ರಸ್ತಾಪಿಸಿದ ವ್ಯಕ್ತಿ ಇವರು ಎಂದು ತೇಜಸ್ವಿ ಸೂರ್ಯ ಉಲ್ಲೇಖಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News