ಒಳಮೀಸಲಾತಿ ಜಾರಿಗೆ ಮುಂದಾದ ತೆಲಂಗಾಣ, ಕರ್ನಾಟಕದಲ್ಲಿ ಹೋರಾಟ ಪ್ರಾರಂಭ

Update: 2024-10-03 17:00 GMT

ಸುಪ್ರೀಂ ಕೋರ್ಟ್ |  PTI

ಬೆಂಗಳೂರು : ತೆಲಂಗಾಣದ ಕಾಂಗ್ರೆಸ್ ಸರ್ಕಾರ ಸುಪ್ರೀಂ ನ್ಯಾಯಾದೇಶವನ್ನು ಅಧ್ಯಯನ ಮಾಡಿ ಶಿಫಾರಸ್ಸು ಮಾಡಲು ಮೂರು ವಾರಗಳ ಹಿಂದೆ ಒಂದು ಕ್ಯಾಬಿನೆಟ್ ಉಪಸಮಿತಿಯನ್ನು ರಚಿಸಿದೆ. ಆ ಉಪ ಸಮಿತಿಗೆ ಸಂಬಂಧಪಟ್ಟ ಪರಿಶಿಷ್ಟ ಜಾತಿಗಳು ಮತ್ತು ಸಂಸ್ಥೆಗಳು ಮತ್ತು ಆಸಕ್ತರು ಖುದ್ದಾಗಿ ತಮ್ಮ ಅಭಿಪ್ರಾಯಗಳನ್ನು ನೀಡಬಹುದು ಎಂದು ಹೇಳಿದೆ.

ತೆಲಂಗಾಣದಲ್ಲಿ ಒಳ ಮೀಸಲಾತಿ ಜಾರಿಗೆ ಆಕ್ಷೇಪಣೆ ಕೇಳಲು ಸಮಿತಿ ಜಾರಿ ಮಾಡಿರುವುದು, ಮೀಸಲಾತಿಯನ್ನು ವಿಳಂಬ ಮಾಡುವ ತಂತ್ರ ಎಂದೂ ವಿಶ್ಲೇಷಿಸಲಾಗುತ್ತಿದೆ. ವಿಶೇಷವೆಂದರೆ ತೆಲಂಗಾಣ ಹೊರತು ಪಡಿಸಿ, ಬೇರೆ ಯಾವ ರಾಜ್ಯದಲ್ಲೂ ಒಳ ಮೀಸಲಾತಿ ಜಾರಿಗೆ ತೀರ್ಮಾನ ಮಾಡಿಲ್ಲ. ಹರಿಯಾಣದಲ್ಲಿ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಒಳ ಮೀಸಲಾತಿ ಜಾರಿ ಮಾಡುವ ಹೇಳಿಕೆ ನೀಡಿದ್ದು ಬಿಟ್ಟರೆ, ಬೇರೆ ಎಲ್ಲೂ ಒಳ ಮೀಸಲಾತಿ ಜಾರಿಯ ಒಲವು ಕಂಡು ಬರುತ್ತಿಲ್ಲ. ಬಿಜೆಪಿ ಬಹುಮತದ ಸರಕಾರವಿರುವ ಉತ್ತರ ಪ್ರದೇಶ, ಮಧ್ಯಪ್ರದೇಶದಲ್ಲೂ ಒಳ ಮೀಸಲಾತಿ ಜಾರಿ ಮಾಡುವ ಕೆಲಸವನ್ನು ಬಿಜೆಪಿಯೂ ಮಾಡಿಲ್ಲ. ಈ ವಿಚಾರದಲ್ಲಿ ಬಿಜೆಪಿ ಕಾಂಗ್ರೆಸ್ ಎರಡೂ ಪಕ್ಷಗಳಲ್ಲೂ ಗೊಂದಲವಿದ್ದಂತಿದೆ.

ಹೋರಾಟದ ಮೂಲಕವೇ ಮತ್ತೆ ಸುಪ್ರೀಂ ಕೋರ್ಟ್ ಆದೇಶ ಜಾರಿ ಮಾಡಬೇಕಾದ ಸಂಕಷ್ಟ ಒಳಮೀಸಲಾತಿ ಹೋರಾಟಗಾರರಿಗೆ ಬಂದಿದೆ. ಹಾಗಾದರೆ ಸುಪ್ರೀಂ ಕೋರ್ಟ್ ಆದೇಶಕ್ಕೂ ಬೆಲೆಯಿಲ್ಲವೇ? ಈ ದೇಶದಲ್ಲಿ ನಾವು ಯಾವುದನ್ನು ನಂಬಬೇಕು? ಇದು ನ್ಯಾಯಾಂಗ ನಿಂದನೆ ಎಂದು ಒಳಮೀಸಲಾತಿ ಹೋರಾಟಗಾರರು ಆರೋಪಿಸಿದ್ದಾರೆ.

ಕಾಂಗ್ರೆಸ್ ಆಡಳಿತವಿರುವ ಕರ್ನಾಟಕದಲ್ಲಿ ಒಳ ಮೀಸಲಾತಿ ಜಾರಿಗೆ ಹೋರಾಟ ನಡೆಯುತ್ತಿದೆ. ಪರಿಶಿಷ್ಟ ಜಾತಿಗಳಿಗೆ ಒಳ ಮೀಸಲಾತಿ ಕಲ್ಪಿಸಲು ಆಗ್ರಹಿಸಿ ಮಾದಿಗ ಸಮುದಾಯದ ಮುಖಂಡರು ಗುರುವಾರ ರಾಯಚೂರು ಬಂದ್ ಗೆ ಕರೆ ನೀಡಿದ್ದರು. ಇದು ಹೋರಾಟದ ಕಾವನ್ನು ಮತ್ತಷ್ಟು ಹೆಚ್ಚಿಸಿದೆ.

ಸುಪ್ರೀಂ ಕೋರ್ಟ್ ಆದೇಶ ಪಾಲನೆಯಲ್ಲಿ ಕರ್ನಾಟಕ ಸರಕಾರ ಹಿಂದೆ ಮುಂದೆ ನೋಡುತ್ತಿದೆ ಎಂದು ಒಳ ಮೀಸಲಾತಿ ಹೋರಾಟಗಾರರು ಆರೋಪಿಸಿದ್ದಾರೆ. ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರಿಗೆ ಒಳಮೀಸಲಾತಿಯ ಬಗ್ಗೆ ಒಲವಿಲ್ಲ. ಬೇರೆ ಬೇರೆ ರಾಜ್ಯಗಳಲ್ಲಿ ಈ ವಿಚಾರದಲ್ಲಿ ಪಕ್ಷಕ್ಕೆ ಹಿನ್ನಡೆಯಾಗಬಹುದು ಎಂದು ಖರ್ಗೆಯವರು ಒಳ ಮೀಸಲಾತಿ ಜಾರಿಗೆ ಹಿಂದೇಟು ಹಾಕುತ್ತಿದ್ದಾರೆ ಎಂದು ಹೋರಾಟಗಾರರು ಆರೋಪಿಸಿದ್ದಾರೆ.

ಮೂಲಗಳ ಪ್ರಕಾರ ತೆಲಂಗಾಣದ ಸಿಎಂ ರೇವಂತ್ ರೆಡ್ಡಿ, ಕರ್ನಾಟಕ ಸಿಎಂ ಸಿದ್ದರಾಮಯ್ಯನವರು ಒಳಮೀಸಲಾತಿ ಜಾರಿಗೆ ಬಗ್ಗೆ ಒಲವು ತೋರಿಸುತ್ತಿದ್ದಾರೆ .

ಕರ್ನಾಟಕದಲ್ಲಿ 20 ವರ್ಷದಿಂದ ನೆನೆಗುದಿಗೆ ಬಿದ್ದಿದ್ದ ಹಲವು ಉದ್ಯೋಗಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಈ ಸಂದರ್ಭದಲ್ಲಿ ಒಳಮೀಸಲಾತಿ ಜಾರಿಯಾದರೆ ಒಳ ಮೀಸಲಾತಿ ಬಯಸಿರುವ ಪಂಗಡಗಳಿಗೆ ಬಹಳಷ್ಟು ಪ್ರಯೋಜನವಾಗಲಿದೆ. ಒಳ ಮೀಸಲಾತಿ ಜಾರಿಮಾಡದೇ ನೇಮಕಾತಿ ಮಾಡಿದರೆ, ಮತ್ತೆ ಸಮುದಾಯದ ಆಕಾಂಕ್ಷಿಗಳಿಗೆ ಅನ್ಯಾಯವಾಗಲಿದೆ. 75 ವರ್ಷಗಳಿಂದ ಆದ ಅನ್ಯಾಯ ಮತ್ತೆ ಪುನರಾವರ್ತನೆಯಾಗುವ ಆತಂಕ ಒಳಮೀಸಲಾತಿ ಜಾರಿ ಹೋರಾಟಗಾರರಲ್ಲಿದೆ.

ಸಧ್ಯದಲ್ಲೇ ಸಿಎಂ ಮಾದಿಗ ಮುಖಂಡರನ್ನು ಈ ವಿಚಾರವಾಗಿ ಭೇಟಿಯಾಗಿ ಮಾತನಾಡಲಿದ್ದಾರೆ. ಇದು ನಮಗೆ ಒಳಮೀಸಲಾತಿ ಜಾರಿಯ ಭರವಸೆ ನೀಡಿದೆ. ಆ ಬಳಿಕ ನಾವು ಸಿಎಂ ಮನೆಗೆ ಮುತ್ತಿಗೆ ಹಾಕಬೇಕೆ ಅಥವಾ ಬೇರೆ ಯಾವ ರೀತಿಯಲ್ಲಿ ಹೋರಾಟ ಮಾಡಬಹುದು ಎನ್ನುವುದನ್ನು ತೀರ್ಮಾನ ಮಾಡಲಿದ್ದೇವೆ ಎಂದು ಒಳ ಮೀಸಲಾತಿಯ ಹೋರಾಟಗಾರ ಅಂಬಣ್ಣ ಅರೋಲಿಕರ್ ಹೇಳಿದ್ದಾರೆ.

ಚುನಾವಣೆ ಮುಂಚೆ ಕಾಂಗ್ರೆಸ್ ಪಕ್ಷವು ಒಳ ಮೀಸಲಾತಿಯನ್ನು ನಮ್ಮ ಸರಕಾರದ ಮೊದಲ ಕ್ಯಾಬಿನೆಟ್ ನಲ್ಲಿಯೇ ಜಾರಿ ಮಾಡುತ್ತೇವೆ ಎಂದು ಹೇಳಿತ್ತು. ಗ್ಯಾರಂಟಿಗಳ ಮಧ್ಯೆ ಸರಕಾರ ಮಾಡಿದ್ದ ಈ ಘೋಷಣೆ ನಮಗೆ ಹೊಸ ಹುರುಪು ನೀಡಿತ್ತು. ಗ್ಯಾರಂಟಿ ಜಾರಿಗೆ ಎಸ್ಸಿ ಎಸ್ಟಿ ಗೆ ಮೀಸಲಿಟ್ಟಿದ್ದ 56 ಸಾವಿರ ಕೋಟಿ ರೂ. ಬಳಸಿದರು. ಆದರೂ ನಾವು ಸುಮ್ಮನಾದೆವು. ಒಂದೂವರೆ ವರ್ಷವಾದರೂ, ಸುಪ್ರೀಂ ಕೋರ್ಟ್ ತೀರ್ಪು ನೀಡಿದರೂ ಒಳಮೀಸಲಾತಿ ಜಾರಿಯಾಗಿಲ್ಲ. 56 ಸಾವಿರ ಕೋಟಿ ಖರ್ಚು ಮಾಡುವವರಿಗೆ ಒಳ ಮೀಸಲಾತಿ ಜಾರಿಗೆ ಅನುದಾನ ಬೇಕೇ? ಒಂದು ಸಾಲಿನ ನಿರ್ಣಯ ಅಷ್ಟೇ ಬೇಕಾಗಿತ್ತು ಎಂದು ಅಂಬಣ್ಣ ಬೇಸರ ವ್ಯಕ್ತಪಡಿಸಿದರು.

ನಡೆದಂತೆ ನಡೆ, ನುಡಿದಂತೆ ನಡೆ ಎಲ್ಲವೂ ಮಾತಿನಲ್ಲಷ್ಟೇ. ನ್ಯಾಯದೇಶ ಜಾರಿಗೆ ಆದೇಶವಿದ್ದರೂ ಸಾರ್ವಜನಿಕ ಆಕ್ಷೇಪ ಕೇಳಲು ಯಾವ ಸರಕಾರವೂ ಸಮಿತಿ ಮಾಡುವ ಅಗತ್ಯ ಇಲ್ಲ. ಕೇವಲ ದತ್ತಾಂಶ ಸಂಗ್ರಹಕ್ಕೆ ಒಂದು ಸಮಿತಿ ಬೇಕಿತ್ತು. ಆದರೆ ಆಕ್ಷೇಪ ಕೇಳಲು ಸಮಿತಿ ಮಾಡಿದ್ದು ಕಾಲಹರಣ. ಬೇರೆ ಜಾತಿಗಳ ಓಲೈಕೆಗೆ ಈ ಕೆಲಸ ಮಾಡುತ್ತಿದ್ದಾರೆ. ಇದೊಂದು ರೀತಿಯಲ್ಲಿ ಪಾಳೆಯಗಾರಿಕೆ. ಜೀತದಾಳುಗಳು ಜೀತದಾಳಾಗಿಯೇ ಇರಬೇಕು. ಅವರು ಕೆಲಸ ಮಾಡಬಾರದು ಎಂಬ ಮನಸ್ಥಿತಿ. ಇದು ಪ್ರಜಾಪ್ರಭುತ್ವ ಅಲ್ಲ ಎಂದು ಅಂಬಣ್ಣ ಅರೋಲಿಕರ್ ಆಕ್ರೋಶ ವ್ಯಕ್ತಪಡಿಸಿದರು.

ಬೇರೆ ಜಾತಿಗಳ ಓಲೈಕೆಗೆ ನೀವು ಹೋಗುವುದಿದ್ದರೆ ಮಾದಿಗ ಸಮುದಾಯಕ್ಕೆ ಸಿಗಬೇಕಾದ ಶೇ.6 ಮೀಸಲಾತಿ ನೀಡಿ. ಉಳಿದ ಶೇ.15 ನೀವು ಆಮೇಲೆ ತೀರ್ಮಾನಿಸಿ ಎಂದು ಹೇಳಬಹುದು. ಆದರೆ 101 ಉಪ ಜಾತಿಗಳ ಜೊತೆ ನಮ್ಮ ಸೌಹಾರ್ದತೆ ಕೆಡಬಹುದು. ಆ ಕಾರಣಕ್ಕಾಗಿ ಎಸ್ಸಿ ಎಸ್ಟಿ ಎರಡೂ ಪಂಗಡಗಳಲ್ಲಿ 151 ಉಪ ಜಾತಿಗಳಲ್ಲಿ ಒಳ ಮೀಸಲಾತಿ ಜಾರಿಯಾಗಬೇಕು ಎಂಬ ಹೋರಾಟ ನಮ್ಮದು ಎಂದು ಅಂಬಣ್ಣ ಅರೋಲಿಕರ್ ಕಳಕಳಿ ವ್ಯಕ್ತಪಡಿಸಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ಇರ್ಷಾದ್‌ ಎಂ.ವೇಣೂರು

contributor

Similar News