ಮೂಡಿಗೆರೆ: ತಾಲೂಕು ಆಸ್ಪತ್ರೆಯಲ್ಲಿ ಮೃತ ಮಹಿಳೆ ಕೈಯಲ್ಲಿದ್ದ ಚಿನ್ನದ ಬಳೆಗಳ ಕಳವು; ದೂರು ದಾಖಲು

Update: 2023-10-30 07:21 GMT

ಸಾಂದರ್ಭಿಕ ಚಿತ್ರ (Credit:livemint.com)

ಚಿಕ್ಕಮಗಳೂರು: ಹೃದಯಾಘಾತದಿಂದ ಮೃತಪಟ್ಟ ಮಹಿಳೆಯ ಕೈಯಲ್ಲಿದ್ದ 2ಚಿನ್ನದ ಬಳೆಗಳನ್ನು ಕಳವು ಮಾಡಿರುವ ಘಟನೆ ಮೂಡಿಗೆರೆ ಪಟ್ಟಣದ ಎಂಜಿಎಂ ಆಸ್ಪತ್ರೆಯಲ್ಲಿ ತಡವಾಗಿ ಬೆಳಕಿಗೆ ಬಂದಿದ್ದು, ಪ್ರಕರಣ ಸಂಬಂಧ ಮೂಡಿಗೆರೆ ಪೊಲೀಸ್ ಠಾಣೆಯಯಲ್ಲಿ ತಳವಾರ ಗ್ರಾಮದ ಶಮಂತ್ ಎಂಬವರು ದೂರು ದಾಖಲಿಸಿದ್ದಾರೆ.

ಅ.23ರಂದು ತಾಲೂಕಿನ ತಳವಾರ ಗ್ರಾಮದ ಶಮಂತ್ ಎಂಬವರ ಮನೆಯಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮವೊಂದಕ್ಕೆ ಶಮಂತ್ ಆಪ್ತ ಸ್ನೇಹಿತ ಶೇಖರ್ ಅವರು ಪತ್ನಿ ಅನಿತಾ, ತಾಯಿ ಲಕ್ಷ್ಮೀದೇವಿಯೊಂದಿಗೆ ಆಗಮಿಸಿದ್ದರು. ಶಮಂತ್ ಅವರ ಮನೆಯಲ್ಲಿ ಅ.24ರಂದು ಬೆಳಗ್ಗೆ 6ಕ್ಕೆ ಲಕ್ಷ್ಮಿದೇವಿಯವರಿಗೆ ತೀವ್ರ ಹೃದಯಾಘಾತಗಿದೆ. ಕೂಡಲೇ ಶೇಖರ್ ಅವರು ತಮ್ಮ ಕಾರಿನಲ್ಲಿ ಲಕ್ಷ್ಮೀದೇವಿ ಅವರನ್ನು ಅನಿತಾ ಹಾಗೂ ಶಮಂತ್ ಜೊತೆಯಲ್ಲಿ ತಳವಾರದಿಂದ ಮೂಡಿಗೆರೆ ಎಂ.ಜಿ.ಎಂ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರು. ಆಸ್ವತ್ರೆಯ ಸಿಬ್ಬಂದಿ ತಕ್ಷಣ ಲಕ್ಷ್ಮೀದೇವಿ ಅವರನ್ನು ತುರ್ತು ಚಿಕಿತ್ಸಾ ವಿಭಾಗದ ಕೊಠಡಿಗೆ ತಪಾಸಣೆ ನಡೆಸಲು ಕರೆದುಕೊಂಡು ಹೋಗಿದ್ದು, ತಪಾಸಣೆ ನಡೆಸಿದ ವೈದ್ಯರು ಲಕ್ಷ್ಮೀದೇವಿ ಮೃತಪಟ್ಟಿದ್ದಾರೆಂದು ತಿಳಿಸಿದ್ದರು.

ಮೃತ ಲಕ್ಷ್ಮೀದೇವಿ ಅವರ ಮೃತದೇಹವನ್ನು ಕೊಠಡಿಯಿಂದ ಹೊರ ತಂದ ಸಂದರ್ಭದಲ್ಲಿ ಅವರ ಕೈಯಲ್ಲಿದ್ದ 4 ಚಿನ್ನದ ಬಳೆಗಳ ಪೈಕಿ 2 ಚಿನ್ನದ ಬಳೆಗಳು ನಾಪತ್ತೆಯಾಗಿರುವುದನ್ನು ಲಕ್ಷ್ಮೀದೇವಿ ಮಗ ಶೇಖರ್ ಹಾಗೂ ಸೊಸೆ ಅನಿತಾ ಗಮನಿಸಿದ್ದಾರೆ. ಈ ಸಂಬಂಧ ಆಸ್ಪತ್ರೆ ಸಿಬ್ಬಂದಿಯನ್ನು ವಿಚಾರಿಸಿದಾಗ, ತಮಗೆ ಏನೂ ಗೊತ್ತಿಲ್ಲ ಎಂದು ಸಿಬ್ಬಂದಿ ತಿಳಿಸಿದ್ದಾರೆ. ಲಕ್ಷ್ಮೀದೇವಿ ಅವರನ್ನು ತುರ್ತು ಚಿಕಿತ್ಸಾ ಕೊಠಡಿಗೆ ತಪಾಸಣೆಗೆ ಕರೆದೊಯ್ದ ವೇಳೆ ಅವರ ಎರಡೂ ಕೈಗಳಲ್ಲಿ ತಲಾ ಎರಡು ಚಿನ್ನದ ಬಳೆಗಳಿದ್ದು, ಕೊಠಡಿಯಿಂದ ಮೃತದೇಹ ಹೊರ ತಂದಾಗ ಎರಡೂ ಕೈಗಳಲ್ಲಿ ತಲಾ ಒಂದೊಂದು ಚಿನ್ನದ ಬಳೆಗಳಿದ್ದವು. ಎರಡೂ ಚಿನ್ನದ ಬಳೆಗಳ ಒಟ್ಟು ಮೌಲ್ಯ ಸುಮಾರು 2 ಲಕ್ಷ ರೂ. ಎಂದು ಶೇಖರ್ ಸ್ನೇಹಿತ ಶಮಂತ್ ಮೂಡಿಗೆರೆ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ಲಕ್ಷ್ಮೀ ದೇವಿ ಅವರ ಮೃತದೇಹದಲ್ಲಿದ್ದ ಎರಡು ಚಿನ್ನದ ಬಳೆಗಳನ್ನು ಆಸ್ಪತ್ರೆಯಲ್ಲಿ ಯಾರೋ ಕಳವು ಮಾಡಿದ್ದು, ಈ ಸಂಬಂಧ ಆಸ್ಪತ್ರೆಯ ಸಿಬ್ಬಂದಿಯನ್ನು ವಿಚಾರಣೆಗೊಳಪಡಿಸಬೇಕು. ಸಿಸಿ ಕ್ಯಾಮರಾಗಳನ್ನು ಪರಿಶೀಲಿಸಬೇಕು. ಕಳುವಾದ ಬಳೆಗಳನ್ನು ಪತ್ತೆಮಾಡಿ ಆರೋಪಿಗಳ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ. ಪ್ರಕರಣ ಸಂಬಂಧ ದೂರು ದಾಖಲಿಸಿಕೊಂಡಿರುವ ಮೂಡಿಗೆರೆ ಠಾಣೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News