ಸಿದ್ದರಾಮಯ್ಯ ರಾಜೀನಾಮೆ ಪ್ರಶ್ನೆಯೇ ಇಲ್ಲ, ಅವರನ್ನು 5 ವರ್ಷ ಯಾರೂ ಅಲುಗಾಡಿಸಲು ಸಾಧ್ಯವಿಲ್ಲ: ಸಚಿವ ಝಮೀರ್ ಅಹ್ಮದ್ ಖಾನ್
ಬೆಂಗಳೂರು: ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಹಾಗೂ ಜನಪ್ರತಿನಿಧಿಗಳ ನ್ಯಾಯಾಲಯ ತೀರ್ಪು ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ವಸತಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಝಮೀರ್ ಅಹಮದ್ ಖಾನ್, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜೀನಾಮೆ ಕೊಡುವ ಪ್ರೆಶ್ನೆಯೇ ಇಲ್ಲ ಎಂದು ಹೇಳಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಲೋಕಾಯುಕ್ತ ತನಿಖೆಗೆ ಅದೇಶಿಸಲಾಗಿದೆ. ತನಿಖೆ ನಡೆಯಲಿ, ನಂತರ ಸತ್ಯ ತಿಳಿಯಲಿದೆ. ಇದರಲ್ಲಿ ಸಿದ್ದರಾಮಯ್ಯ ಅವರ ಏನೂ ಪಾತ್ರ ಇಲ್ಲ ಎಂದು ಝಮೀರ್ ಹೇಳಿದ್ದಾರೆ.
ಹೈಕೋರ್ಟ್ ನಲ್ಲೂ ವಿಚಾರಣೆಗೆ ಅನುಮತಿ ಕೊಟ್ಟಿಲ್ಲ. ಜನಪ್ರತಿನಿಧಿಗಳ ನ್ಯಾಯಾಲಯ ದಲ್ಲಿ ತನಿಖೆಗೆ ಆದೇಶ ಬಂದಿದೆ. ನಾವು ತನಿಖೆಗೆ ಸಿದ್ದ ಎಂದು ಹೇಳಿದರು.
ಹೈಕಮಾಂಡ್ ಸಿದ್ದರಾಮಯ್ಯ ಅವರ ಜತೆ ಇದೆ. ಶಾಸಕರು, ಸಚಿವರು ಅವರ ಜತೆ ಇದ್ದೇವೆ. ರಾಜೀನಾಮೆ ಕೊಡಬೇಡಿ ಎಂದು ನಾವೆಲ್ಲರೂ ಹೇಳಿದ್ದೇವೆ. ಕೆಸಿ ವೇಣುಗೋಪಾಲ್, ರಣದೀಪ್ ಸಿಂಗ್ ಸುರ್ಜೆವಾಲಾ ಕೂಡಾ ಸಿದ್ದರಾಮಯ್ಯ ರಾಜೀನಾಮೆ ನೀಡುವ ಅಗತ್ಯ ಇಲ್ಲ. ಕಾನೂನಾತ್ಮಕ ಹೋರಾಟ ಮಾಡಲಿದ್ದಾರೆ ಎಂದು ಹೇಳಿದ್ದಾರೆ. ಅವರನ್ನು ಐದು ವರ್ಷ ಯಾರೂ ಅಲುಗಾಡಿಸಲು ಸಾಧ್ಯವಿಲ್ಲ. ಮೂಡಾ ಪ್ರಕರಣ ಸಂಪೂರ್ಣ ರಾಜಕೀಯ ಪ್ರೇರಿತ ಎಂದು ತಿಳಿಸಿದರು.