ತಿಮ್ಮನಹಳ್ಳಿ: ಕಲ್ಲು ಗಣಿ, ಕ್ರಶರ್ ಗಳಿಂದ ಮನೆಗಳ ಗೋಡೆಗಳಿಗೆ ಹಾನಿ; ರಸ್ತೆ ತಡೆದು ಗ್ರಾಮಸ್ಥರಿಂದ ಧರಣಿ

Update: 2023-11-24 14:45 GMT

ಚಿಕ್ಕಮಗಳೂರು: ಗ್ರಾಮದಲ್ಲಿರುವ 6 ಕ್ರಶರ್ ಗಳಿಂದಾಗಿ ಗ್ರಾಮದಲ್ಲಿರುವ ಮನೆಗಳು ಬಿರುಕು ಬಿಡುತ್ತಿದ್ದು, ಗಣಿಯಿಂದ ಹೊರ ಬರುವ ಧೂಳಿನಿಂದಾಗಿ ಕೃಷಿ ಜಮೀನುಗಳಲ್ಲಿ ಬೆಳೆ ನಾಶವಾಗುತ್ತಿದೆ. ರಾತ್ರಿ, ಹಗಲೆನ್ನದೇ ಕ್ರಶರ್ ಗಳಲ್ಲಿ ಸ್ಪೋಟ ಮಾಡುತ್ತಿರುವುದರಿಂದ ಗ್ರಾಮಸ್ಥರು ಊರು ಬಿಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಿ ತಾಲೂಕಿನ ನಾಗರವಾಳು ಗ್ರಾಮ ಸಮೀಪದ ತಿಮ್ಮನಹಳ್ಳಿಯಲ್ಲಿ ಶುಕ್ರವಾರ ಗ್ರಾಮಸ್ಥರು ಟಿಪ್ಪರ್ ವಾಹನಗಳನ್ನು ತಡೆದು, ಕ್ರಶರ್ ಗಳನ್ನು ಬಂದ್ ಮಾಡಿಸಿ ಪ್ರತಿಭಟನೆ ನಡೆಸಿದರು.

ಶುಕ್ರವಾರ ಬೆಳಗ್ಗೆ ತಿಮ್ಮನಹಳ್ಳಿ ಮಾರ್ಗವಾಗಿ ಕ್ರಶರ್ ಗಳಿಗೆ ಹೋಗುತ್ತಿದ್ದ ಟಿಪ್ಪರ್ ಗಳನ್ನು ರಸ್ತೆಯಲ್ಲೇ ತಡೆದು ನಿಲ್ಲಿಸಿದ ಗ್ರಾಮಸ್ಥರು ಕ್ರಶರ್ ಮಾಲಕರು, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಹಾಗೂ ಜಿಲ್ಲಾಡಳಿತದ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಮಾತನಾಡಿದ ಮುಖಂಡರು, ಗ್ರಾಮದಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯವರು 6 ಕ್ರಶರ್ ಗಳಿಗೆ ಅನುಮತಿ ನೀಡಿದ್ದು, ಸುಮಾರು 30 ಎಕರೆ ಜಾಗದಲ್ಲಿ 6 ಕ್ರಶರ್‍ಗಳು ಕಳೆದ ಅನೇಕ ವರ್ಷಗಳಿಂದ ಗಣಿಗಾರಿಕೆ ಮಾಡುತ್ತಿವೆ. ಗಣಿ ಹಾಗೂ ಕ್ರಶರ್ ಗಳ ಮಾಲಕರು ಸರಕಾರದ ಕಾನೂನು ಉಲ್ಲಂಘಿಸಿ ಅಕ್ರಮವಾಗಿ ಗಣಿಗಾರಿಕೆ ಮಾಡುತ್ತಿದ್ದು, ಗಣಿಗಾರಿಕೆಗಾಗಿ ರಾತ್ರಿ ಹಾಗೂ ಹಗಲು ಕಲ್ಲುಗಳನ್ನು ಸ್ಪೋಟಿಸಲಾಗುತ್ತಿದೆ. ಸ್ಪೋಟದಿಂದಾಗಿ ಭೂಮಿ ನಡುಗಿ ಗ್ರಾಮದಲ್ಲಿರುವ ಬಹುತೇಕ ಮನಗಳ ಗೋಡೆಗಳು ಬಿರುಕು ಬಿಡುತ್ತಿದ್ದು, ಕೆಲ ಮನೆಗಳು ಕುಸಿದು ಬೀಳುವ ಹಂತದಲ್ಲಿದೆ. ಸ್ಪೋಟದ ರಭಸಕ್ಕೆ ರಾತ್ರಿ ವೇಳೆ ಮನೆಮಂದಿ, ಮಕ್ಕಳು ನಿದ್ದೆ ಮಾಡದಂತಾಗಿದೆ ಎಂದು ಆರೋಪಿಸಿದರು.

ಗಣಿಯಲ್ಲಿ ಸ್ಪೋಟದ ವೇಳೆ ಭಾರೀ ದೂಳು ಏಳುತ್ತಿದ್ದು, ಈ ಧೂಳು ಅಕ್ಕಪಕ್ಕದ ಕೃಷಿ ಜಮೀನಿನ ಮೇಲೆ ಬೀಳುತ್ತಿರುವುದರಿಂದ ಜಮೀನುಗಳಲ್ಲಿ ಬೆಳೆದ ಬೆಳೆಗಳು ನಾಶವಾಗುತ್ತಿವೆ. ಧೂಳಿನಿಂದಾಗಿ ಮಕ್ಕಳು, ಮಹಿಳೆಯರು ವಿವಿಧ ರೋಗಗಳಿಗೆ ತುತ್ತಾಗುತ್ತಿದ್ದು, ಧೂಳಿನಿಂದಾಗಿ ಗ್ರಾಮದಲ್ಲಿರುವ ಕುಡಿಯುವ ನೀರಿನ ಮೂಲ ಕಲುಷಿತವಾಗಿದ್ದು, ಕುಡಿಯಲು ನೀರೂ ಸಿಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇಲ್ಲಿರುವ 6 ಗಣಿ ಹಾಗೂ ಕ್ರಶರ್‍ಗಳಿಂದಾಗುತ್ತಿರುವ ತೊಂದರೆಗಳ ಬಗ್ಗೆ ಸಂಬಂಧಿಸಿದ ಇಲಾಖಾಧಿಕಾರಿಗಳಿಗೆ ಅನೇಕ ಬಾರು ದೂರು ನೀಡಿದರೂ ಸೌಜನ್ಯಕ್ಕೂ ಸ್ಥಳಕ್ಕೆ ಭೇಟಿ ನೀಡದೇ ನಿರ್ಲಕ್ಷ್ಯ ವಹಿಸಿದ್ದಾರೆ. ಅಧಿಕಾರಿಗಳು, ಗಣಿ ಮಾಲಕರ ನಿರ್ಲಕ್ಷ್ಯಕ್ಕೆ ಬೇಸತ್ತು ಗ್ರಾಮಸ್ಥರು ಗ್ರಾಮ ತೊರೆಯುತ್ತಿದ್ದು, ಈಗಾಗಲೇ ಗ್ರಾಮದಲ್ಲಿದ್ದ 10 ಕುಟುಂಬಗಳು ಗಣಿಯಿಂದ ತಮ್ಮ ಮನೆಗೆ ಆಗಿರುವ ತೊಂದರೆಯಿಂದ ಬೇಸತ್ತು ಊರು ಬಿಟ್ಟು ಬೇರೆ ಗ್ರಾಮಕ್ಕೆ ವಲಸೆ ಹೋಗಿದ್ದಾರೆ. ಗ್ರಾಮದಲ್ಲಿರುವ ಇತಿಹಾಸ ಪ್ರಸಿದ್ಧ ರಂಗನಾಥಸ್ವಾಮಿ ದೇವಾಲಯವೂ ಗಣಿಗಾರಿಕೆಯಿಂದ ಬಿರುಕು ಬಿಟ್ಟಿದೆ ಎಂದು ಅಳಲು ತೋಡಿಕೊಂಡರು.

ಗ್ರಾಮದಲ್ಲಿ ಇನ್ನು ಮುಂದೆ ಗಣಿಗಾರಿಕೆ, ಕ್ರಶರ್‍ಗಳನ್ನ ನಡೆಸಬಾರದು. ಎಲ್ಲ ಕ್ರಶರ್‍ಗಳನ್ನು ಬಂದ್ ಮಾಡಬೇಕೆಂದು ರಸ್ತೆಯಲ್ಲಿ ಟಿಪ್ಪರ್‍ಗಳನ್ನು ಅಡ್ಡಹಾಕಿ ಕೆಲ ಹೊತ್ತು ಪ್ರತಿಭಟನೆ ನಡೆಸಿದ ಗ್ರಾಮಸ್ಥರು, ಸ್ಥಳಕ್ಕೆ ಅಧಿಕಾರಿಗಳು ಬರಬೇಕೆಂದು ಪಟ್ಟು ಹಿಡಿದರು. ಕೆಲ ಹೊತ್ತಿನ ಬಳಿಕ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಜಿಲ್ಲಾಧಿಕಾರಿ ವಿಂದ್ಯಾ ಸ್ಥಳಕ್ಕೆ ಭೇಟಿ ನೀಡಿದರು. ವೇಳೆ ಗ್ರಾಮಸ್ಥರು, ಗಣಿಗಾರಿಕೆ ಹಾಗೂ ಕ್ರಶರ್ ನಿಂದಾಗಿರುವ ತೊಂದರೆಗಳನ್ನು ವಿವರಿಸಿದರು.

ಗ್ರಾಮಸ್ಥರ ಅಳಲು ಆಲಿಸಿದ ಅಧಿಕಾರಿ ವಿಂದ್ಯಾ, ಗಣಿಯಿಂದಾಗುತ್ತಿರುವ ಸಮಸ್ಯೆಗಳ ಬಗ್ಗೆ ಪರಿಸರ ಮಾಲಿನ್ಯ ಇಲಾಖೆ, ಕಂದಾಯ, ಅರಣ್ಯ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಅಧಿಕಾರಿಗಳ ತಂಡದೊಂದಿಗೆ ಗ್ರಾಮಕ್ಕೆ ಭೇಟಿ ನೀಡಲಾಗುವುದು. ಸಮಸ್ಯೆಗಳನ್ನು ಖುದ್ದು ಪರಿಶೀಲಿಸಿ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಭರವಸೆ ನೀಡಿದರು. ಅಧಿಕಾರಿಯ ಭರವಸೆಯಿಂದಾಗಿ ಗ್ರಾಮಸ್ಥರು ಧರಣಿ ಕೈಬಿಟ್ಟು ಸಮಸ್ಯೆ ಪರಿಹಾರಕ್ಕೆ ಗಡುವು ನೀಡಿದರು.

ತಹಶೀಲ್ದಾರ್ ನೇತೃತ್ವದಲ್ಲಿ ಸಭೆ: ತಿಮ್ಮನಹಳ್ಳಿ ಗ್ರಾಮದಲ್ಲಿ ಗಣಿ ಹಾಗೂ ಕ್ರಶರ್‍ಗಳಿಂದಾಗಿ ಗ್ರಾಮಸ್ಥರಿಗೆ ಆಗುತ್ತಿರುವ ಸಮಸ್ಯೆಗಳ ಹಿನ್ನೆಲೆಯಲ್ಲಿ ಗ್ರಾಮಸ್ಥರು ಶುಕ್ರವಾರ ಧರಣಿ ನಡೆಸಿದ್ದ ಬೆನ್ನಲ್ಲೇ ನಗರದ ತಾಲೂಕು ಕಚೇರಿಯಲ್ಲಿ ತಹಶೀಲ್ದಾರ್ ಡಾ.ಸುಮಂತ್ ಅವರು ಗಣಿ, ಕ್ರಶರ್ ಮಾಲಕರು ಮತ್ತು ಗ್ರಾಮಸ್ಥರೊಂದಿಗೆ ಸಭೆ ನಡೆಸಿದ್ದಾರೆಂದು ತಿಳಿದು ಬಂದಿದ್ದು, ಸಭೆಯಲ್ಲಿ ಗ್ರಾಮಸ್ಥರು ಗಣಿಯಿಂದಾಗಿರುವ ಸಮಸ್ಯೆಗಳ ಬಗ್ಗೆ ಅಧಿಕಾರಿ ಬಳಿ ಅಳಲು ತೋಡಿಕೊಂಡು ಸಮಸ್ಯೆ ಪರಿಹಾರಕ್ಕೆ ಮನವಿ ಮಾಡಿದ್ದಾರೆಂದು ತಿಳಿದು ಬಂದಿದೆ.






 


 


Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News