ಸಕಲೇಶಪುರದ ಯರಗಳ್ಳಿಯಲ್ಲಿ ಸಾವಿರಾರು ಮರಗಳ ಕಡಿತಲೆ ಪ್ರಕರಣ: ಸಮಗ್ರ ತನಿಖೆಗೆ ಈಶ್ವರ್ ಖಂಡ್ರೆ ಆದೇಶ

Update: 2025-02-06 23:46 IST
ಸಕಲೇಶಪುರದ ಯರಗಳ್ಳಿಯಲ್ಲಿ ಸಾವಿರಾರು ಮರಗಳ ಕಡಿತಲೆ ಪ್ರಕರಣ: ಸಮಗ್ರ ತನಿಖೆಗೆ ಈಶ್ವರ್ ಖಂಡ್ರೆ ಆದೇಶ

ಅರಣ್ಯ ಸಚಿವ ಈಶ್ವರ್ ಖಂಡ್ರೆ

  • whatsapp icon

ಬೆಂಗಳೂರು: ಹಾಸನದ ಸಕಲೇಶಪುರ ತಾಲೂಕಿನ ಯರಗಳ್ಳಿಯಲ್ಲಿ ಸಾವಿರಾರು ಮರಗಳ ಕಡಿತಲೆ ಆಗಿದೆ ಎನ್ನಲಾದ ಪ್ರಕರಣದ ಸಮಗ್ರ ತನಿಖೆ ನಡೆಸಿ, ಕಾನೂನು ಕ್ರಮ ಜರುಗಿಸುವಂತೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಗುರುವಾರ ಈ ಸಂಬಂಧ ಅರಣ್ಯ ಕಚೇರಿಗೆ ಬಂದ ದೂರಿನ ಹಿನ್ನೆಲೆಯಲ್ಲಿ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಅವರಿಗೆ ಸಚಿವ ಈಶ್ವರ್ ಖಂಡ್ರೆ ಈ ಸೂಚನೆ ನೀಡಿದ್ದಾರೆ.

ಅತ್ತಿಹಳ್ಳಿ ಸಮೀಪದ ಯರಗಳ್ಳಿಯಲ್ಲಿ ಮರಗಳನ್ನು ಕತ್ತರಿಸಿ ರಾಶಿ ಹಾಕಿರುವುದು ಜಿಪಿಎಸ್ ಚಿತ್ರದಿಂದ ವೇದ್ಯವಾಗುತ್ತಿದ್ದು ಈ ಬಗ್ಗೆ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ನೇತೃತ್ವದ ತಂಡದಿಂದ ತನಿಖೆ ನಡೆಸಿ ಕ್ರಮ ಜರುಗಿಸಬೇಕು ಎಂದು ಈಶ್ವರ್ ಖಂಡ್ರೆ ಸೂಚಿಸಿದ್ದಾರೆ.

ಸರಕಾರಿ, ಅರಣ್ಯ ಅಥವಾ ಪರಿಭಾವಿತ ಅರಣ್ಯ ಪ್ರದೇಶದಲ್ಲಿ ಮರ ಕಡಿದಿದ್ದಲ್ಲಿ ಅರಣ್ಯ ಅಪರಾಧ ಪ್ರಕರಣ ದಾಖಲಿಸಿ ನಿಯಮಾನುಸಾರ ಕ್ರಮ ಜರುಗಿಸಬೇಕು. ಪಟ್ಟಾ ಜಮೀನಿನಲ್ಲಿ ಅನುಮತಿ ಪಡೆದು ಮರ ಕಡಿದಿದ್ದರೆ ಇಷ್ಟೊಂದು ಪ್ರಮಾಣದ ಮರ ಕಡಿಯಲು ಅನುಮತಿ ನೀಡಿದ ಅಧಿಕಾರಿಯ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಈಶ್ವರ್ ಖಂಡ್ರೆ ತಿಳಿಸಿದ್ದಾರೆ.

ಒಂದೊಮ್ಮೆ ಮರ ಕಡಿತಲೆಗೆ ಅನುಮತಿಯೇ ಇಲ್ಲದೆ ಅಕ್ರಮ ಕಡಿತಲೆ ಮಾಡಿದ್ದಲ್ಲಿ ಈ ವಲಯದ ಅರಣ್ಯ ಸಿಬ್ಬಂದಿಯ ನಿರ್ಲಕ್ಷ್ಯವೂ ಸೇರಿದಂತೆ ಸಮಗ್ರ ತನಿಖೆ ನಡೆಸಿ, ಕೈಗೊಂಡ ಕ್ರಮದ ವಿವರದೊಂದಿಗೆ 3 ದಿನಗಳೊಳಗಾಗಿ ವರದಿಯನ್ನು ಸಲ್ಲಿಸಬೇಕು ಎಂದು ಈಶ್ವರ್ ಖಂಡ್ರೆ ಸೂಚಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News