ಸಹಕಾರ ಮಹಾಮಂಡಳದ ಬಹುಕೋಟಿ ರೂ.ಅಕ್ರಮ ವರ್ಗಾವಣೆ ಪ್ರಕರಣ: ಮೂವರನ್ನು ಬಂಧಿಸಿದ ಸಿಐಡಿ

Update: 2025-01-28 15:02 GMT
ಸಹಕಾರ ಮಹಾಮಂಡಳದ ಬಹುಕೋಟಿ ರೂ.ಅಕ್ರಮ ವರ್ಗಾವಣೆ ಪ್ರಕರಣ: ಮೂವರನ್ನು ಬಂಧಿಸಿದ ಸಿಐಡಿ

ಸಾಂದರ್ಭಿಕ ಚಿತ್ರ

  • whatsapp icon

ಬೆಂಗಳೂರು: ರಾಜ್ಯ ಪತ್ತಿನ ಸಹಕಾರ ಸಂಘಗಳ ಮಹಾಮಂಡಳವು ಬೆಂಗಳೂರು ನಗರ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ (ಬಿಡಿಸಿಸಿ) ಮತ್ತು ರಾಜ್ಯ ಅಪೆಕ್ಸ್ ಸಹಕಾರಿ ಬ್ಯಾಂಕ್‍ನಲ್ಲಿಟ್ಟಿದ್ದ ನಿಗದಿತ ಠೇವಣಿ (ಎಫ್‍ಡಿ) ಅಕ್ರಮ ವರ್ಗಾವಣೆ ಪ್ರಕರಣ ಸಂಬಂಧ ಮಾಜಿ ಸಿಇಒ ಸೇರಿ ಮೂವರನ್ನು ಅಪರಾಧ ತನಿಖಾ ಇಲಾಖೆ (ಸಿಐಡಿ) ಪೊಲೀಸರು ಬಂಧಿಸಿದ್ದಾರೆ.

ಸಂಸ್ಥೆಯ ಹಿಂದಿನ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ (ಸಿಇಒ) ಆಶಾಲತಾ ಪಿ ಪ್ರಕರಣದ ಪ್ರಮುಖ ಆರೋಪಿ ಆಗಿದ್ದು, ಈಕೆಯ ಸಹೋದರ ಪುತ್ರ ಜೆ.ಮಂಜುನಾಥ್, ಆತನ ಸ್ನೇಹಿತರಾದ ವಿಜಯ್ ಕಿರಣ್ ಮತ್ತು ಸುಜಯ್ ಎಂಬವರನ್ನು ಸಿಐಡಿ ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.

19.34 ಕೋಟಿಯನ್ನು ಖಾಸಗಿ ವ್ಯಕ್ತಿಗಳ ಖಾತೆಗಳಿಗೆ ಅಕ್ರಮವಾಗಿ ವರ್ಗಾಯಿಸಿ ವಂಚಿಸಿರುವ ಆರೋಪ ಸಂಬಂಧ ಮಹಾಮಂಡಳದ ಅಧ್ಯಕ್ಷ ರಾಜು ಸಲ್ಲಿಸಿದ್ದ ದೂರು ಆಧರಿಸಿ, ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನಂತರ ಪ್ರಕರಣದ ತನಿಖೆಯನ್ನು ಸಿಐಡಿಗೆ ವರ್ಗಾವಣೆ ಮಾಡಲಾಗಿತ್ತು.

ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ಪ್ರಮುಖ ಆರೋಪಿ ಆಶಾಲತಾ ಹಾಗೂ ಅವರ ಪತಿ ಎನ್.ಸೋಮಶೇಖರ್ ಬ್ಯಾಂಕಾಕ್‍ಗೆ ಪರಾರಿಯಾಗಿದ್ದಾರೆ. ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಲಾಗಿದೆ. ದಂಪತಿ ವಿಚಾರಣೆಗೆ ಬಂದಿಲ್ಲ. ಹೀಗಾಗಿ, ಅವರ ಪತ್ತೆಗೆ ಇಂಟರ್ ಪೋಲ್ ಮೂಲಕ ಬ್ಲೂ ಕಾರ್ನರ್ ನೋಟಿಸ್ ಹೊರಡಿಸಲು ನಿರ್ಧರಿಸಲಾಗಿದೆ ಎಂದು ತನಿಖಾಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರಥಮ ದರ್ಜೆ ಸಹಾಯಕಿ ಹಾಗೂ ಅಕೌಂಟೆಂಟ್ ಹುದ್ದೆಗೆ ನೇಮಕಗೊಂಡಿದ್ದ ಆಶಾಲತಾ 2017ರಿಂದ 2023ರವರೆಗೂ ಮಹಾಮಂಡಳದ ಪ್ರಭಾರ ಸಿಇಒ ಆಗಿದ್ದರು. ಈ ಅವಧಿಯಲ್ಲಿ ಸಂಸ್ಥೆಯು ಬಿಡಿಸಿಸಿ ಮತ್ತು ಅಪೆಕ್ಸ್ ಬ್ಯಾಂಕ್ ಶಾಖೆಗಳಲ್ಲಿ ನಿಗದಿತ ಠೇವಣಿಯಲ್ಲಿ ಇರಿಸಿದ್ದ ಮೊತ್ತವನ್ನು ತನ್ನ ಪತಿ ಮತ್ತು ಇತರರ ಖಾತೆಗಳಿಗೆ ವರ್ಗಾವಣೆ ಮಾಡಿ ವಂಚಿಸಿದ್ದಾರೆ ಎಂಬುದು ತನಿಖೆಯಿಂದ ತಿಳಿದುಬಂದಿದೆ ಎಂದು ಸಿಐಡಿ ಮೂಲಗಳು ಮಾಹಿತಿ ನೀಡಿವೆ.

ಜಂಟಿ ಖಾತೆಯಾಗಿದ್ದರೂ ಅಧ್ಯಕ್ಷರ ಸಹಿ ಇಲ್ಲದೆ ಆಶಾಲತಾ ಅವರೊಬ್ಬರೇ ನಕಲಿ ಸಹಿ ಮಾಡಿ, ಪತಿ ಹಾಗೂ ಇತರೆ ಆರೋಪಿಗಳ ಖಾತೆಗೆ ಮಹಾಮಂಡಳದ ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಿದ್ದರು. ನಿಶ್ಚಿತ ಠೇವಣಿ ಇರಿಸಿದಂತೆ ನಕಲಿ ದಾಖಲೆಗಳನ್ನು ಸೃಷ್ಟಿಸಿ, ಲೆಕ್ಕಪರಿಶೋಧಕರಿಗೂ ಸಲ್ಲಿಸಿದ್ದರು. ಲೆಕ್ಕಪರಿಶೋಧಕರು ಈ ನಕಲಿ ದಾಖಲೆಗಳನ್ನು ಪರಿಶೀಲಿಸದೆ ವರದಿ ನೀಡಿದ್ದರು ಎಂದು ತಿಳಿದುಬಂದಿದೆ.

ಸದ್ಯ ಬಂಧನಕ್ಕೊಳಗಾಗಿರುವ ಆರೋಪಿಗಳಾದ ಮಂಜುನಾಥ್, ವಿಜಯ್ ಕಿರಣ್ ಮತ್ತು ಸುಜಯ್ ತಮ್ಮ ಖಾತೆಗೆ ಜಮೆಯಾಗಿದ್ದ ಹಣವನ್ನು ಡ್ರಾ ಮಾಡಿ ಆಶಾಲತಾಗೆ ಮರಳಿಸಿದ್ದರು. ಆರೋಪಿಗಳು ಪ್ರತಿ ಹಣಕಾಸು ವ್ಯವಹಾರಕ್ಕೆ 15 ಸಾವಿರ ಕಮಿಷನ್ ಪಡೆದುಕೊಳ್ಳುತ್ತಿದ್ದರು ಎನ್ನುವ ಮಾಹಿತಿ ವಿಚಾರಣೆಯಲ್ಲಿ ಗೊತ್ತಾಗಿದೆ ಎಂದು ಸಿಐಡಿ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News