ಸಿದ್ದಗಂಗಾ ಮಠಾಧೀಶರಿಂದ ʼನನ್ನ ಅರಿವಿನ ಪ್ರವಾದಿʼ ಪುಸ್ತಕ ಬಿಡುಗಡೆ

Update: 2023-09-28 14:04 GMT

ತುಮಕೂರು.ಸೆ.28: ʼʼಭಾರತ ಸಾಧು ಸಂತರ ನಾಡು ,ದೇಶಕ್ಕೆ ಮಾರ್ಗದರ್ಶನ ನೀಡಿದ ಮಹನೀಯರಲ್ಲಿ ಕೊನೆಯ ಪ್ರವಾದಿ ಮುಹಮ್ಮದ್ ಪೈಗಂಬರರು ಒಬ್ಬರು, ʼನನ್ನ ಅರಿವಿನ ಪ್ರವಾದಿʼ ಎಂಬ ಪುಸ್ತಕದ ಮೂಲಕ ಅವರನ್ನು ಜನರಿಗೆ ಪರಿಚಯಿಸುವ ಕೆಲಸವನ್ನು ಯೋಗೀಶ್ ಮಾಸ್ಟರ್ ಮಾಡಿರುವುದು ಸಂತೋಷ ಪಡುವಂತಹ ವಿಚಾರʼʼ ಎಂದು ಸಿದ್ದಗಂಗಾ ಮಠಾಧ್ಯಕ್ಷ ಶ್ರೀಶ್ರೀ ಸಿದ್ದಲಿಂಗಸ್ವಾಮೀಜಿ ತಿಳಿಸಿದ್ದಾರೆ.

ಬುಧವಾರ ಶ್ರೀಸಿದ್ದಗಂಗಾ ಮಠದಲ್ಲಿ ಜಮಾ -ಅತೆ ಇಸ್ಲಾಮಿ ಹಿಂದ್ ವತಿಯಿಂದ ಮಂಗಳೂರಿನ ಶಾಂತಿ ಪ್ರಕಾಶನ ಹೊರತಂದಿರುವ ನನ್ನ ಅರಿವಿನ ಪ್ರವಾದಿ ಎಂಬ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಅವರು, ಇಡೀ ಪ್ರಪಂಚದಲ್ಲಿಯೇ ಎಲ್ಲಾ ಧರ್ಮಗಳ ಜನರು ಇರುವ ಏಕೈಕ ರಾಷ್ಟ್ರವೆಂದರೆ ಅದು ಭಾರತ ಮಾತ್ರ. ಇಲ್ಲಿ ಹಿಂದು,ಮುಸ್ಲಿಂ, ಕ್ರಿಶ್ಚಿಯನ್,ಬೌದ್ದ, ಜೈನ, ಪಾರ್ಸಿ ಹೀಗೆ ಎಲ್ಲ ಧರ್ಮದ ಜನರು ಸಾವಿರಾರು ವರ್ಷಗಳ ಕಾಲದಿಂದಲೂ ಅಣ್ಣ ತಮ್ಮಂದಿರಂತೆ ಬದುಕುತಿದ್ದಾರೆ ಎಂದರು.

ನನ್ನ ಅರಿವಿನ ಪ್ರವಾದಿ ಪುಸ್ತಕದ ಮೂಲಕ ಸಾಹಿತಿ, ಅಂಕಣಕಾರ, ರಂಗಭೂಮಿಯಲ್ಲಿಯೂ ತೊಡಗಿಸಿಕೊಂಡಿರುವ ಯೋಗೀಶ್ ಮಾಸ್ಟರ್,ಬಸವಣ್ಣ ವಚನ,ಜೈನ ಉಕ್ತಿಗಳನ್ನು ಉಲ್ಲೇಖಸಿ, ಮುಹಮ್ಮದ್ ಪೈಗಂಬರ ಭೋಧನೆಗಳನ್ನು ಪರಿಚಯಿಸಿ ದ್ದಾರೆ.ಯಾವ ಧರ್ಮವೂ ಜಗತ್ತಿಗೆ ಹಿಂಸೆಯನ್ನು ಬೋಧಿಸಿಲ್ಲ ಮತ್ತು ಪ್ರೋತ್ಸಾಹಿಸುವುದು ಇಲ್ಲ ಎಂಬುದನ್ನು ಈ ಪುಸ್ತಕದ ಮೂಲಕ ಅರಿಯಬಹುದಾಗಿದೆ ಎಂದು ಶ್ರೀಸಿದ್ದಲಿಂಗಸ್ವಾಮೀಜಿ ಬಣ್ಣಿಸಿದರು.

ಶಾಂತಿ ಪ್ರಕಾಶನ ಕನ್ನಡದಲ್ಲಿ ಮುಹಮ್ಮದ್ ಪೈಗಂಬರರ ಪ್ರವಚನಗಳನ್ನು ಹೊರ ತರುವ ಮೂಲಕ ಸಮಾಜದಲ್ಲಿ ಸೌಹಾರ್ದ ಮೂಡಿಸಲು ಹೊರಟಿದೆ. ಅಕ್ಬರ್ ಆಲಿ ಉಡುಪಿ ರವರು ಕನ್ನಡದಲ್ಲಿಯೇ ಪ್ರವಚನ ನೀಡಿ, ಧರ್ಮ,ಧರ್ಮಗಳ ನಡುವಿನ ದ್ವೇಷ ಭಾವನೆಯನ್ನು ತಿಳಿಗೊಳಿಸುವ ಪ್ರಯತ್ನ ಮಾಡಿದ್ದಾರೆ. ಶಾಂತಿ ಪ್ರಕಾಶನದ 270ನೇ ಪುಷ್ಪಗ್ರಂಥ ಇದಾಗಿದೆ. ಇದು ಹೆಚ್ಚು ಜನರನ್ನು ತಲುಪಿ,ಜನರಲ್ಲಿ ದ್ವೇಷ, ಅಸೂಯೆಗಳು ಅಳಿಸಿ, ವಿಶ್ವಶಾಂತಿ ನೆಲೆಸಲು ಸಹಕಾರವಾಗಲಿ ಎಂದು ಶುಭ ಹಾರೈಸಿದರು.

 ಶಾಂತಿ ಪ್ರಕಾಶನದ ಪರವಾಗಿ ಮಾತನಾಡಿದ ಅಕ್ಬರ ಆಲಿ ಉಡುಪಿ, ಇಸ್ಲಾಂ ಧರ್ಮದ ಕೊನೆಯ ಪ್ರವಾದಿ ಮಹಮದ್ ಪೈಗಂಬರ್‍ರ ಭೋಧನೆಗಳನ್ನು ಜೈನ, ಬೌಧ್ಧ,ಲಿಂಗಾಯಿತ ಧರ್ಮದ ಉಕ್ತಿಗಳ ಜೊತೆಗೆ ತುಲನೆ ಮಾಡಿ ವಾಸ್ತವವನ್ನು ಜನತೆಗೆ ತಿಳಿಸುವ ಕೆಲಸವನ್ನು ಶಾಂತಿ ಪ್ರಕಾಶನ ಮಾಡುತ್ತಿದೆ.ಕನ್ನಡ ಸಾಹಿತ್ಯಕ್ಕೆ ಆ ಮೂಲಕ ಒಳ್ಳೆಯ ಕೊಡುಗೆಯನ್ನು ನೀಡುತ್ತಿದೆ.ನನ್ನ ಅರಿವಿನ ಪ್ರವಾದಿ ಜನರ ನಡುವಿನ ಗೋಡೆಯನ್ನು ಕೆಡವಿ ಸೌಹಾರ್ಧ ಸೇತುವೆಯನ್ನು ನಿರ್ಮಿಸುವಂತಾಗಲಿ ಎಂದರು.

ಕಾರ್ಯಕ್ರಮದಲ್ಲಿ ಜಮಾ -ಅತೆ ಇಸ್ಲಾಮಿ ಹಿಂದ್‍ನ ತುಮಕೂರು ಜಿಲ್ಲಾಧ್ಯಕ್ಷ ಅಬ್ದುಲ್ ಜಬ್ಬಾರ್, ಸ್ಥಾನಿಕ ಅಧ್ಯಕ್ಷ ಅಸಾದುಲ್ಲಾ ಖಾನ್,ಮುಖಂಡರಾದ ನೌಶಾದ್ ಅನ್ಸರ್ ಪಾಷಾ, ಅನ್ಸಾರ್ ಅಹ್ಮದ್, ತಮೀಜುದ್ದೀನ್,ತಾಜುದ್ದೀನ್ ಷರೀಫ್, ಹನೀಫ್‍ವುಲ್ಲಾ,ಮೌಲಾನ ಖಾಲಿದ್ ನದ್ವಿ, ಇಮಾಮ್ ಬೇಗ್, ಬಾಬು ಅಹಮದ್ ಖಾನ್ ಮತಿತ್ತರರು ಪಾಲ್ಗೊಂಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News