ನಾಳೆ (ಸೆ.26) ಬೆಂಗಳೂರು ಬಂದ್: ಏನಿರುತ್ತೆ ? ಏನಿರಲ್ಲ ? ಇಲ್ಲಿದೆ ಸಂಪೂರ್ಣ ಮಾಹಿತಿ

Update: 2023-09-25 16:01 GMT

ಬೆಂಗಳೂರು, ಸೆ.25: ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸುವುದನ್ನು ಖಂಡಿಸಿ ‘ಕರ್ನಾಟಕ ಜಲ ಸಂರಕ್ಷಣಾ ಸಮಿತಿ’ ನೇತೃತ್ವದಲ್ಲಿ ಮಂಗಳವಾರ ‘ಬೆಂಗಳೂರು ಬಂದ್’ಗೆ ಕರೆ ನೀಡಲಾಗಿದ್ದು, ಸರಕಾರಿ ಕಚೇರಿಗಳು ಹೊರತುಪಡಿಸಿ, ಉಳಿದ ಬಹುತೇಕ ಸೇವೆಗಳಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ. ಮತ್ತೊಂದೆಡೆ ಕಾವೇರಿ ಮಾತ್ರವಲ್ಲದೆ, ರಾಜ್ಯವ್ಯಾಪಿ ನದಿಗಳ ಜಲ ವಿವಾದ ಬಗೆಹರಿಸುವಂತೆ ಆಗ್ರಹಿಸಿ ಕನ್ನಡ ಒಕ್ಕೂಟವೂ ಸೆ.29ರಂದು ‘ಅಖಂಡ ಕರ್ನಾಟಕ ಬಂದ್’ಗೆ ಕರೆ ನೀಡಿದೆ.

ಬೆಂಗಳೂರು ಬಂದ್ ಹಿನ್ನೆಲೆ ಆಸ್ಪತ್ರೆ, ಔಷಧಿ, ಹಾಲು ಸೇರಿ ತುರ್ತು ಸೇವೆಗಳು ಹೊರತುಪಡಿಸಿ, ಎಲ್ಲ ರೀತಿಯ ಚಟುವಟಿಕೆಗಳು ಬಂದ್ ಆಗುವ ಸಾಧ್ಯತೆ ದಟ್ಟವಾಗಿದೆ. ಇನ್ನೊಂದೆಡೆ ಬೆಂಗಳೂರು ಜಿಲ್ಲಾ ವ್ಯಾಪ್ತಿಯಲ್ಲಿರುವ ಎಲ್ಲ ಶಾಲಾ-ಕಾಲೇಜುಗಳಿಗೆ ಸೆ.26ರಂದು ಒಂದು ದಿನ ಮಾತ್ರ ರಜೆ ಘೋಷಣೆ ಮಾಡಲಾಗಿದೆ ಎಂದು ನಗರ ಜಿಲ್ಲಾಧಿಕಾರಿ ದಯಾನಂದ್ ಪ್ರಕಟಿಸಿದ್ದಾರೆ.

ಅದೇ ರೀತಿ, ಕಾನೂನು ವಿವಿಯ ನಾಳಿನ(ಸೆ.26) ಎಲ್ಲ ಪರೀಕ್ಷೆಗಳನ್ನು ಅಕ್ಟೋಬರ್ 8ಕ್ಕೆ ಮುಂದೂಡಿಕೆ ಮಾಡಿ ಕರ್ನಾಟಕ ರಾಜ್ಯ ಕಾನೂನು ವಿವಿ ಮೌಲ್ಯಮಾಪನ ಕುಲಸಚಿವರು ಆದೇಶ ಹೊರಡಿಸಿದ್ದಾರೆ. ಉಳಿದ ಪರೀಕ್ಷೆಗಳು ಯಥಾ ರೀತಿ ನಡೆಯಲಿವೆ ಎಂದೂ ಅವರು ಉಲ್ಲೇಖಿಸಿದ್ದಾರೆ.

ಬಿಜೆಪಿ, ಜೆಡಿಎಸ್, ಆಪ್ ಪಕ್ಷ, ಆಟೊ ಚಾಲಕರ ಸಂಘ, ಖಾಸಗಿ ಬಸ್, ವಾಹನಗಳ ಸಂಘಗಳ ಸೇರಿದಂತೆ ಒಟ್ಟು 125ಕ್ಕೂ ಅಧಿಕ ಸಂಘಟನೆಗಳ ಮುಖ್ಯಸ್ಥರು ಬಂದ್‍ಗೆ ಬೆಂಬಲ ಸೂಚಿಸಿರುವ ಹಿನ್ನೆಲೆ ಬಂದ್ ಬಿಸಿ ಸಾರ್ವಜನಿಕರಿಗೆ ತಟ್ಟಲಿದೆ.

ಯಾವಾವ ಸೇವೆ ಇದೆ?

*ಮೆಟ್ರೋ ವ್ಯವಸ್ಥೆ ಇರುತ್ತೆ

*ಬ್ಯಾಂಕ್

*ಅಂಬುಲೆನ್ಸ್

*ಬಿಎಂಟಿಸಿ ಬಸ್ಸುಗಳು

*ಒಲಾ ಒಬರ್ ಟ್ಯಾಕ್ಸಿ

*ಚಲನಚಿತ್ರ ಮಂದಿರ

*ಔಷಧ ಮಳಿಗೆ

*ಹಾಲಿನ ಬೂತ್

*ಅಂಚೆ ಕಚೇರಿ

*ಸರಕಾರಿ ಕಚೇರಿ

*ಪೆಟ್ರೋಲ್ ಬಂಕ್

---------------------------------

ಏನು ಇರುವುದಿಲ್ಲ?

*ಕೈಗಾರಿಕೆಗಳು

*ಜುವೆಲ್ಲರಿ ಶಾಪ್

*ಶಾಲೆ-ಕಾಲೇಜು

*ಆಟೊ

*ಗೂಡ್ಸ್ ವಾಹನ

*ಖಾಸಗಿ ಬಸ್ಸುಗಳು

*ಮದ್ಯದಂಗಡಿ

---------------------------------

ಬಂದ್ ಕುರಿತು ಸೋಮವಾರ ನಗರದ ಎಲ್ಲೆಡೆ ಕರಪತ್ರ ಹಂಚಿ ಮಾತನಾಡಿದ ಸಮಿತಿ ಮುಖ್ಯಸ್ಥ ಕುರುಬೂರು ಶಾಂತಕುಮಾರ್, ‘ಮಂಗಳವಾರ ನಡೆಯುವ ಬೆಂಗಳೂರು ಬಂದ್‍ಗೆ ವಿದ್ಯಾರ್ಥಿಗಳ ಸಂಘ, ಎಪಿಎಂಸಿ ಕಾರ್ಯಕರ್ತರ ಸಂಘ, ಉದ್ಯಮಿಗಳ ಸಂಸ್ಥೆ, ವಿವಿಧ ನೌಕರರ ಸಂಘ, ಬಿಎಂಟಿಸಿ ಚಾಲಕರ ಸಂಘ, ರೈತಪರ ಸಂಘಟನೆಗಳು, ಕನ್ನಡ ಪರ ಹೋರಾಟಗಾರರ ಸಂಘಟನೆಗಳು, ಆಟೋ ಚಾಲಕರ ಸಂಘಟನೆಗಳು, ಟ್ಯಾಕ್ಸಿ ಕ್ಯಾಬ್ ಚಾಲಕರ ಸಂಘಟನೆಗಳು, ಐಟಿಬಿಟಿ ಸಂಘಟನೆಗಳು, ಕಾರ್ಮಿಕ ಸಂಘಟನೆಗಳು, ಕಲಾವಿದರ ಸಂಘಗಳು, ಹೋಟೆಲ್ ಮಾಲಿಕರ ಸಂಘಟನೆಗಳು, ರಾಜಕೀಯ ಪಕ್ಷಗಳು, ರಸ್ತೆ ಬದಿ ವ್ಯಾಪಾರಿಗಳ ಸಂಘ, ಬಿಬಿಎಂಪಿ ನೌಕರರ ಸಂಘ ಸೇರಿದಂತೆ 150ಕ್ಕೂ ಹೆಚ್ಚು ಸಂಘಟನೆಗಳು ಬೆಂಬಲ ನೀಡಿದ್ದಾರೆ ಎಂದು ಹೇಳಿದರು.

ಇದು ಯಾರನ್ನು ಓಲೈಕೆ ಮಾಡಲು ಈ ಹೋರಾಟ ನಡೆಸುತ್ತಿಲ್ಲ. ರೈತರ ಸಮಸ್ಯೆ, ನೀರಿನ ಅಭಾವ ಕುರಿತು ಸರಕಾರಕ್ಕೆ ಬಿಸಿ ಮುಟ್ಟಿಸಲಾಗುವುದು ಎಂದ ಅವರು, ಕನ್ನಡ ಒಕ್ಕೂಟಕ್ಕೆ ನಾವು ಬೆಂಬಲ ಕೇಳಿದ್ದೇವು. ಆದರೆ, ಅವರು ನೀಡಿಲ್ಲ. ಈ ಹೋರಾಟ ನಿಗದಿ ಆಗಿರುವ ಹಿನ್ನೆಲೆ ಯಾವುದೇ ಕಾರಣಕ್ಕೂ ಹಿಂದಕ್ಕೆ ಸರಿಯುವುದಿಲ್ಲ ಎಂದು ಅವರು ತಿಳಿಸಿದರು.

ಕಪ್ಪುಪಟ್ಟಿ: ಬೆಂಗಳೂರು ಬಂದ್‍ಗೆ ಖಾಸಗಿ ಶಾಲೆಗಳ ಒಕ್ಕೂಟ ಬೆಂಬಲ ಘೋಷಿಸಿದೆ. ತಮ್ಮ ಒಕ್ಕೂಟದ ಎಲ್ಲ ಖಾಸಗಿ ಶಾಲೆಗಳು ಬಂದ್ ಮಾಡಲಿದ್ದಾರೆ. ಪರೀಕ್ಷಾ ವಿದ್ಯಾರ್ಥಿಗಳು ಕಪ್ಪುಪಟ್ಟಿ ಧರಿಸಿ ಪರೀಕ್ಷೆಗೆ ಹಾಜರಾಗುತ್ತಾರೆ ಎಂದು ಒಕ್ಕೂಟದ ಮುಖಂಡರಾದ ಲೋಕೇಶ್ ತಾಳಿಕೋಟೆ ತಿಳಿಸಿದರು.

ಐಟಿ ಬಂದ್: ಐಟಿ ಕನ್ನಡಿಗರ ಬಳಗ ಮೂರುವರೆ ಸಾವಿರಕ್ಕೂ ಹೆಚ್ಚು ಐಟಿ ಕಂಪೆನಿಗಳ ನೌಕರರು ಕೆಲಸಕ್ಕೆ ರಜೆ ಹಾಕಿ ಬೈಕ್ ರ್ಯಾಲಿ ನಡೆಸಲಿದ್ದಾರೆ. ನೀರಿನ ಸಮಸ್ಯೆ ಬಗೆಹರಿಸಲು ಸರಕಾರ ಪ್ರಮಾಣಿಕ ಪ್ರಯತ್ನ ಮಾಡಲಿ ಎಂದು ಸಂಘಟನೆ ಅಧ್ಯಕ್ಷ ಶಿವಾನಂದ್ ಹೇಳಿದರು.

ಹೋಟೆಲ್ ಮಾಲಕರಿಗೆ ಬಿಎಸ್ಸೈ ಎಚ್ಚರಿಕೆ: ‘ಮಂಗಳವಾರ ಬೆಂಗಳೂರು ಬಂದ್ ಯಶಸ್ವಿಯಾಗಬೇಕು. ಈ ನಿಟ್ಟಿನಲ್ಲಿ ಒಂದು ವೇಳೆ ಯಾರಾದರೂ ಅಂಗಡಿಗಳನ್ನು ತೆರೆದು ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟಾದರೆ ನೀವೇ ಹೊಣೆ ಆಗುತ್ತೀರಿ’ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಎಚ್ಚರಿಕೆ ನೀಡಿದ್ದಾರೆ.

ಪ್ರತಿಭಟನೆಗೆ ಅವಕಾಶವಿದೆ: ಕಾವೇರಿ ನೀರಿನ ಸಂಬಂಧ ಮಂಗಳವಾರ ಬೆಂಗಳೂರು ಬಂದ್ ಹಾಗೂ ಸೆ.29ರಂದು ಕರ್ನಾಟಕ ಬಂದ್ ಕರೆದಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಪ್ರತಿಭಟನೆಗೆ ಅವಕಾಶವಿದೆ. ಅದನ್ನು ನಾವು ಹತ್ತಿಕ್ಕಲು ಹೋಗುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.

ಬೆಂಬಲ ಸೂಚಿಸದ ಕರವೇ: ‘ಕಾವೇರಿ ವಿಚಾರವಾಗಿ ಕನ್ನಡ ಒಕ್ಕೂಟ ಕರೆ ನೀಡಿರುವ ಸೆ.29ರ ಕರ್ನಾಟಕ ಬಂದ್ ಹಾಗೂ ಮಂಗಳವಾರ ಬೆಂಗಳೂರು ಬಂದ್‍ಗೆ ಬೆಂಬಲ ಸೂಚಿಸುವುದಿಲ್ಲ’ ಎಂದು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ನಾರಾಯಣಗೌಡ ಹೇಳಿದ್ದಾರೆ.

 

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News