ಡಿಸಿಎಂ ಡಿ.ಕೆ.ಶಿವಕುಮಾರ್ ಸೂಚನೆ ಬೆನ್ನಲ್ಲೇ ಬಿಬಿಎಂಪಿಯ 9 ಮಂದಿ ಅಧಿಕಾರಿಗಳ ವರ್ಗಾವಣೆ

Update: 2023-07-12 16:43 GMT

ಬೆಂಗಳೂರು, ಜು.12: ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬಿಬಿಎಂಪಿಯ 9 ಮಂದಿ ಅಧಿಕಾರಿಗಳ ವರ್ಗಾವಣೆ ಮಾಡುವಂತೆ ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಪತ್ರದ ಮೂಲಕ ಸೂಚಿಸಿದ್ದಾರೆ.

ಬಿಬಿಎಂಪಿ ವಿವಿಧ ವಲಯ ಹಾಗೂ ವಿಭಾಗಗಳಿಂದ ಆರ್.ಆರ್.ನಗರ ವಲಯಕ್ಕೆ ಹೊಸ ಅಧಿಕಾರಿಗಳ ನೇಮಕ ಮಾಡಲು ಸೂಚನೆ ನೀಡಲಾಗಿದೆ. ವರ್ಗಾವಣೆಗೆ ಆಡಳಿತಾತ್ಮಕ ಹಿತದೃಷ್ಟಿಯ ಕಾರಣವನ್ನು ಪತ್ರದಲ್ಲಿ ನೀಡಲಾಗಿದೆ.

ಹಿರಿಯ ಆರೋಗ್ಯ ಪರಿವೀಕ್ಷದ ಶಿವಲಿಂಗಯ್ಯ ಹಾಗೂ ಮಾರುತಿ ಪೀಸೆಟ್ ಅವರನ್ನು ಬೆಂಗಳೂರು ದಕ್ಷಿಣ ವಲಯದಿಂದ ರಾಜರಾಜೇಶ್ವರಿನಗರ ವಲಯಕ್ಕೆ ವರ್ಗಾಯಿಸಲಾಗಿದೆ. ಬೊಮ್ಮನಹಳ್ಳಿಯ ಯಲಚೇನಹಳ್ಳಿ ವಾರ್ಡ್‍ನ ಕರೀಗೌಡ, ಪಶ್ಚಿಮ ವಲಯದ ವಿಶ್ವನಾಥ್ ಅವರುಗಳನ್ನು ರಾಜರಾಜೇಶ್ವರಿನಗರ ವಲಯಕ್ಕೆ ವರ್ಗಾವಣೆ ಮಾಡಲಾಗಿದೆ.

ಕಂದಾಯ ಪರಿವೀಕ್ಷಕ ಹನುಮಂತರಾಯಪ್ಪ ಅವರನ್ನು ಶ್ರೀರಾಮ ಉಪವಲಯ ಕೇಂದ್ರದಿಂದ ಕೆಂಗೇರಿ ಉಪವಲಯಕ್ಕೆ, ಹಿರಿಯ ಆರೋಗ್ಯ ಪರಿವೀಕ್ಷಕ ರಮೇಶ್ ಅವರನ್ನು ಆರ್‍ಆರ್‍ನಗರದಿಂದ ಹೊರಭಾಗಕ್ಕೆ ಹಾಗೂ ಡಿ.ಎಲ್.ನಾರಾಯಣ ಅವರನ್ನು ಬೆಂಗಳೂರಿನಿಂದ ಬೇರೆಡೆಗೆ ವರ್ಗಾಯಿಸುವಂತೆ ಡಿಕೆಶಿ ಸೂಚಿಸಿದ್ದಾರೆ.

ಆರ್‍ಆರ್ ನಗರದ ಹಿರಿಯ ಆರೋಗ್ಯ ಪರಿವೀಕ್ಷಕ ಮಂಜುನಾಥ ಅವರನ್ನು ಬೆಂಗಳೂರಿನಿಂದ ಬೇರೆ ಕಡೆಗೆ ಹಾಗೂ ಹೇರೋಹಳ್ಳಿ ಉಪವಲಯದ ಕಂದಾಯ ಪರಿವೀಕ್ಷಕ ಕುಮಾರ್ ಅವರನ್ನು ಖಾಲಿ ಇರುವ ಜಾಗಕ್ಕೆ ವರ್ಗಾವಣೆ ಮಾಡುವಂತೆ ಸೂಚನೆ ನೀಡಲಾಗಿದೆ.

ಇದರ ಜತೆಗೆ ನನ್ನ ಗಮನಕ್ಕೆ ತಾರದೆ ಯಾವುದೇ ಅಧಿಕಾರಿಗಳನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ವರ್ಗಾವಣೆ ಮಾಡದಂತೆಯೂ ಡಿಕೆ ಶಿವಕುಮಾರ್ ಅವರು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರನಾಥ್ ಅವರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News