ವಕ್ಫ್ ಬೋರ್ಡ್‍ನಲ್ಲಿ ವರ್ಷಗಳಿಂದ ಒಂದೇ ಕಡೆ ಇರುವ ಅಧಿಕಾರಿಗಳ ವರ್ಗಾವಣೆ: ಸಚಿವ ಝಮೀರ್ ಅಹ್ಮದ್ ಖಾನ್

Update: 2023-09-30 14:59 GMT

ಬೆಂಗಳೂರು, ಸೆ.30: ವಕ್ಫ್ ಬೋರ್ಡ್‍ನಲ್ಲಿ ವರ್ಷಗಳಿಂದ ಒಂದೇ ಕಡೆ ಕೆಲಸ ಮಾಡುತ್ತಿರುವವರನ್ನು ವರ್ಗಾವಣೆ ಮಾಡಿ ಎಂದು ಅಲ್ಪಸಂಖ್ಯಾತರ ಕಲ್ಯಾಣ ಹಾಗೂ ವಕ್ಫ್ ಸಚಿವ ಬಿ.ಝೆಡ್.ಝಮೀರ್ ಅಹ್ಮದ್ ಖಾನ್ ಸೂಚಿಸಿದ್ದಾರೆ.

ಶನಿವಾರ ವಕ್ಫ್ ಬೋರ್ಡ್‍ನಲ್ಲಿ ಬೆಂಗಳೂರು ನಗರ ವ್ಯಾಪ್ತಿಯ ಅಸ್ತಿಗಳ ಸಂರಕ್ಷಣೆ ಹಾಗೂ ನಿರ್ವಹಣೆ ಕುರಿತು ನಡೆದ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ವಕ್ಫ್ ಆಸ್ತಿ ಸಂರಕ್ಷಣೆ ವಿಚಾರದಲ್ಲಿ ಅಸಡ್ಡೆ ತೋರುವುದನ್ನು ಸಹಿಸುವುದಿಲ್ಲ ಎಂದು ತಾಕೀತು ಮಾಡಿದರು.

ವಕ್ಫ್ ಆಸ್ತಿಗಳ ಮಾಹಿತಿ, ನ್ಯಾಯಾಲಯದಲ್ಲಿರುವ ಪ್ರಕರಣ, ಲೀಸ್ ಆಧಾರದಲ್ಲಿ ನೀಡಿರುವ ಆಸ್ತಿಗಳ ಬಗ್ಗೆ ಸಮರ್ಪಕ ಮಾಹಿತಿ ನೀಡದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಅವರು, ನೀವೆಲ್ಲ ಏನು ಮಾಡುತ್ತಿದ್ದೀರಿ. ಹತ್ತಾರು ವರ್ಷಗಳಿಂದ ಇದ್ದರೂ ನಿಮ್ಮ ಬಳಿ ಮಾಹಿತಿ ಇಲ್ಲ ಎಂದರೆ ಹೇಗೆ ಎಂದು ತರಾಟೆಗೆ ತೆಗೆದುಕೊಂಡರು.

ಹದಿನೈದು ದಿನಗಳಲ್ಲಿ ಸಮಗ್ರ ಮಾಹಿತಿ ಸಿದ್ದಪಡಿಸಬೇಕು. ಆಗಲೂ ಸೂಕ್ತ ಮಾಹಿತಿ ನೀಡದಿದ್ದರೆ ಸಂಬಂಧ ಪಟ್ಟ ಅಧಿಕಾರಿಗಳ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು ಎಂದು ಝಮೀರ್ ಅಹ್ಮದ್ ಎಚ್ಚರಿಕೆ ನೀಡಿದರು.

ಒಟ್ಟಾರೆ ವಕ್ಫ್ ಆಸ್ತಿಗಳ ಪೈಕಿ 1500 ಪ್ರಕರಣ ನ್ಯಾಯಾಲಯದಲ್ಲಿದ್ದು ಎಸಿ ಹಾಗೂ ಡಿಸಿ ನ್ಯಾಯಾಲಯ ದಲ್ಲಿ ಸೆಕ್ಷನ್ 52 ಮತ್ತು 54 ಅಡಿ ಇರುವ 675 ಪ್ರಕರಣಗಳಿಗೆ ಸಂಬಂಧಿಸಿದಂತೆ ಕೈಗೊಂಡ ಕ್ರಮಗಳ ಬಗ್ಗೆ ಮಾಹಿತಿ ನೀಡುವಂತೆಯೂ ನಿರ್ದೇಶನ ನೀಡಿದರು. ಇದೇ ಸಂದರ್ಭದಲ್ಲಿ ವಕ್ಫ್ ಬೋರ್ಡ್ ಗೆ ಆಸ್ತಿ ದಾನ ಮಾಡಿರುವವರ ಹೆಸರು, ಉದ್ದೇಶ ಹಾಗೂ ಪ್ರಸ್ತುತ ಸ್ಥಿತಿಗತಿ ಕುರಿತ ಸಂಪುಟಗಳನ್ನು ಅವರು ಬಿಡುಗಡೆ ಮಾಡಿದರು.

ವಕ್ಫ್ ಬೋರ್ಡ್ ಅಧ್ಯಕ್ಷ ಕೆ.ಅನ್ವರ್ ಬಾಷಾ, ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಖಾನ್ ಫರ್ವೇಝ್, ಹೆಚ್ಚುವರಿ ಅಡ್ವೊಕೇಟ್ ಜನರಲ್ ಇಸ್ಮಾಯಿಲ್ ಝಬೀವುಲ್ಲಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News