ತುಮಕೂರು: ಚಹಾ ಮಾರುತ್ತಿದ್ದ ಮಹಿಳೆಗೆ ಒಲಿಯಿತು ಗ್ರಾ.ಪಂ. ಅಧ್ಯಕ್ಷ ಸ್ಥಾನ!

Update: 2023-07-24 07:54 GMT

ತುಮಕೂರು: ತುಮಕೂರು ತಾಲೂಕು ಉರ್ಡಿಗೆರೆ ಗ್ರಾಮ ಪಂಚಾಯತ್ ಗೆ ಎರಡನೇ ಅವಧಿಯ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಜೀವನೋಪಾಯಕ್ಕಾಗಿ ದೇವರಾಯದುರ್ಗ ದೇವಾಲಯದ ಬಳಿ ಟೀ.ಅಂಗಡಿ ನಡೆಸುತ್ತಿರುವ ಅನ್ನಪೂರ್ಣಮ್ಮ.ಕೆ.ಎಸ್.ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಸಾಮಾನ್ಯ ವರ್ಗದ ಮಹಿಳೆಗೆ ಮೀಸಲಾಗಿದ್ದ ಉರ್ಡಿಗೆರೆ ಗ್ರಾ.ಪಂ. ಅಧ್ಯಕ್ಷ ಸ್ಥಾನಕ್ಕೆ ದೇವರಾಯನದುರ್ಗ ಕ್ಷೇತ್ರದಿಂದ ಆಯ್ಕೆಯಾಗಿದ್ದ ಕೆ.ಎಸ್.ಅನ್ನಪೂರ್ಣಮ್ಮ ಮಾತ್ರ ತಮ್ಮ ಉಮೇದುವಾರಿಕೆ ಸಲ್ಲಿಸಿದ್ದರು.ಕ್ಯಾಟಗೆರಿ(ಬಿ)ಗೆ ಮೀಸಲಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಕೊಡಿಗೆಹಳ್ಳಿ ಕ್ಷೇತ್ರದ ಸುಗುಣಮ್ಮ ಅವರುಗಳು ಅರ್ಜಿ ಸಲ್ಲಿಸಿದ್ದರು.

ಬಿಜೆಪಿ ಬೆಂಬಲಿತ ಸದಸ್ಯರು ಹೆಚ್ಚಾಗಿರುವ ಕಾರಣ ಬೇರೆಯವರು ನಾಮಪತ್ರ ಸಲ್ಲಿಸಿರಲಿಲ್ಲ. ಇದರಿಂದಾಗಿ ಅನ್ನಪೂರ್ಣಮ್ಮ ಅವರನ್ನು ಅಧ್ಯಕ್ಷರಾಗಿ, ಸುವರ್ಣಮ್ಮ ಅವರನ್ನು ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಘೋಷಿಸಲಾಯಿತು.

ಕರಿಗಿರಿ ಕ್ಷೇತ್ರವಾದ ದೇವರಾಯದುರ್ಗದ ದೇವಾಲಯದ ಬಳಿ ಜೀವನೋಪಾಯಕ್ಕಾಗಿ ಒಂದು ಚಿಕ್ಕ ಟೀ.ಕಾಫಿ ಶಾಫ್ ನಡೆಸುತ್ತಿರುವ ಶ್ರೀಮತಿ ಅನ್ನಪೂರ್ಣಮ್ಮ ಅವರು,ತಮ್ಮನ್ನು ಉರ್ಡಿಗೆರೆ ಗ್ರಾ.ಪಂ.ನ ಅಧ್ಯಕ್ಷರಾಗಿ ಎಲ್ಲಾ ಸದಸ್ಯರು ಒಕ್ಕೊರಲಿನಿಂದ ಆಯ್ಕೆ ಮಾಡಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.ಸಾಮಾನ್ಯರಲ್ಲಿ ಸಾಮಾನ್ಯಳಾದ ನನ್ನನ್ನು ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಿದ್ದಾರೆ. ನನ್ನ ಕೈಲಾದ ಜನರಿಗೆ ಉತ್ತಮ ಸೌಲಭ್ಯ ಒದಗಿಸಲು ಶಕ್ತಿ ಮೀರಿ ಪ್ರಯತ್ನಿಸುತ್ತೇನೆ. ಈ ಮೊದಲು ಉರ್ಡಿಗೆರೆ ಗ್ರಾ.ಪಂ.ಗೆ ಅಂತಹ ಆದಾಯವಿರಲಿಲ್ಲ.ಆದರೆ ಈಗ ವರ್ಷಕ್ಕೆ 15-20ಲಕ್ಷ ಅದಾಯ ಬರುವಂತೆ ಮಾಡಿದ್ದೇವೆ. ಆ ಹಣದಲ್ಲಿ ಉರ್ಡಿಗೆರೆ ಗ್ರಾ.ಪಂ.ವ್ಯಾಪ್ತಿಯ ಎಲ್ಲಾ ಗ್ರಾಮಗಳಿಗೂ ಶಾಸಕರ ಸಹಕಾರದೊಂದಿಗೆ ಒಳ್ಳೆಯ ರಸ್ತೆ, ಕುಡಿಯುವ ನೀರು, ಶಾಲೆಗಳಿಗೆ ಸಂಪರ್ಕ ರಸ್ತೆ ಎಲ್ಲವನ್ನು ಮಾಡಬೇಕೆಂಬ ಹಂಬಲವಿದೆ ಎಂದರು.

ತುಮಕೂರು ಗ್ರಾಮಾಂತರ ಶಾಸಕರಾದ ಬಿ.ಸುರೇಶಗೌಡರು, ಅಧಿವೇಶನ ನಡೆಯುತ್ತಿದ್ದರೂ, ಕ್ಷೇತ್ರದಲ್ಲಿಯೇ ಇದ್ದ, ಎಲ್ಲಾ ಸದಸ್ಯರಲ್ಲಿ ಒಮ್ಮತ ಮೂಡಿಸಿ, ಅವಿರೋಧ ಆಯ್ಕೆಯಾಗಲು ಶ್ರಮಿಸಿದ್ದಾರೆ. ಅವರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಶ್ರೀಮತಿ ಅನ್ನಪೂರ್ಣಮ್ಮ ಕೆ.ಎಸ್.ತಿಳಿಸಿದರು.

ಇದೇ ವೇಳೆ ಉರ್ಡಿಗೆರೆ ಗ್ರಾ.ಪಂ.ನ ನೂತನ ಅಧ್ಯಕ್ಷರನ್ನು ಅವರ ಟೀ. ಅಂಗಡಿಯ ಬಳಿಯೇ ಉರ್ಡಿಗೆರೆ ಗ್ರಾ..ಪಂ.ನ ಉಪಾಧ್ಯಕ್ಷೆ ಸುಗುಣಮ್ಮ, ತಾ.ಪಂ.ಮಾಜಿ ಸದಸ್ಯ ಎಸ್.ರವಿ, ಉರ್ಡಿಗೆರೆ ಗ್ರಾ.ಪಂ.ಮಾಜಿ ಅಧ್ಯಕ್ಷ ಗಂಗಾಧರಯ್ಯ ಅವರುಗಳು ಅಭಿನಂದಿಸಿದರು.

 

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News