ವಾಲ್ಮೀಕಿ ನಿಗಮದಲ್ಲಿ ಅಕ್ರಮ | ಸಿಎಂ ರಾಜೀನಾಮೆಗೆ ಆಗ್ರಹಿಸಿ ವಿಧಾನಸೌಧ ಮುತ್ತಿಗೆ ಯತ್ನ: ಬಿಜೆಪಿ ಮುಖಂಡರ ಬಂಧನ
ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿದೆ ಎನ್ನಲಾದ ಅಕ್ರಮ ಹಣ ವರ್ಗಾವಣೆ ಪ್ರಕರಣದ ನೈತಿಕ ಹೊಣೆ ಹೊತ್ತು ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ವಿಧಾನಸೌಧ ಮುತ್ತಿಗೆಗೆ ಯತ್ನಿಸಿದ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಪ್ರತಿಪಕ್ಷ ನಾಯಕ ಆರ್. ಅಶೋಕ್ ಸೇರಿದಂತೆ ಹಲವು ಮುಖಂಡರು ಪೊಲೀಸರು ಬಂಧಿಸಿ, ಬಿಡುಗಡೆ ಮಾಡಿದ್ದಾರೆ.
ಗುರುವಾರ ಇಲ್ಲಿನ ಫ್ರೀಡಂ ಪಾರ್ಕ್‍ನಿಂದ ವಿಧಾನಸೌಧದತ್ತ ತೆರಳಲು ಮುಂದಾದ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರನ್ನು ಪೊಲೀಸರು ಮಾರ್ಗಮಧ್ಯೆ ತಡೆದರು. ಈ ಸಂದರ್ಭದಲ್ಲಿ ಕಾರ್ಯಕರ್ತರು ಹಾಗೂ ಪೊಲೀಸರ ಮಧ್ಯೆ ನೂಕಾಟ, ತಳ್ಳಾಟ ನಡೆಯಿತು. ಈ ವೇಳೆ ಕಾರ್ಯಕರ್ತರು ಕಾಂಗ್ರೆಸ್ ಸರಕಾರದ ವಿರುದ್ಧ ಧಿಕ್ಕಾರದ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ವಿಜಯೇಂದ್ರ, ‘ಪರಿಶಿಷ್ಟ ಜಾತಿ, ಪಂಗಡಗಳ ಹಣಕ್ಕೆ ಕನ್ನ ಹಾಕಿದ್ದು ಗೊತ್ತಾದ ತಕ್ಷಣ ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜೀನಾಮೆ ಕೊಡಬೇಕಿತ್ತು. ಆದರೆ, ಅವರು ಇನ್ನೂ ರಾಜೀನಾಮೆ ನೀಡಿಲ್ಲ. ದೊಡ್ಡವರು ಹೇಳಿದ್ದಕ್ಕೆ ಹಣ ದುರುಪಯೋಗ ಎಂಬ ಮಾಹಿತಿಯನ್ನು ಈಡಿ ಕಸ್ಟಡಿಯಲ್ಲಿರುವ ನಾಗೇಂದ್ರ ಹೇಳಿದ್ದಾರೆಂದು ಗೊತ್ತಾಗಿದೆ. ಯಾವತ್ತು ಸರಕಾರ ಬೀಳುತ್ತೋ ಗೊತ್ತಿಲ್ಲ ಎಂಬ ಆತಂಕ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಸಚಿವರನ್ನು ಕಾಡುತ್ತಿದೆ. ಅವರಿಗೆ ಈಗ ನಿದ್ರೆ ಬರುತ್ತಿಲ್ಲ ಎಂದು ದೂರಿದರು.
ಈಡಿ ಕಸ್ಟಡಿಯಲ್ಲಿರುವ ನಾಗೇಂದ್ರ ಎಲ್ಲಿ ತಮ್ಮ ಹೆಸರು ಹೇಳುವರೋ ಎಂಬ ಭಯ ಸಿಎಂ, ಡಿಸಿಎಂ ಅವರನ್ನು ಕಾಡುತ್ತಿದೆ. ಒಂದೆಡೆ ಎಸ್‍ಸಿಪಿ, ಟಿಎಸ್‍ಪಿ ಹಣವನ್ನು ಬೇರೆಡೆ ವರ್ಗಾವಣೆ ಮಾಡಿದ್ದಾರೆ. ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಲೂಟಿಯಾಗಿದೆ. ಮೈಸೂರಿನ ಸಾವಿರಾರು ಕೋಟಿ ರೂ.ಮೊತ್ತದ ಮುಡಾ ಹಗರಣದ ಮೂಲಕ ಸಿದ್ದರಾಮಯ್ಯ ಬಂಡವಾಳ ಬಯಲಾಗಿದೆ ಎಂದು ಅವರು ಟೀಕಿಸಿದರು.
ನೈತಿಕತೆ ಇಲ್ಲ: ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನದಲ್ಲಿ ಕುಳಿತುಕೊಳ್ಳುವ ಯೋಗ್ಯತೆ, ನೈತಿಕತೆಯನ್ನು ಕಳೆದುಕೊಂಡಿದ್ದಾರೆ. ಪರಿಶಿಷ್ಟ ಜಾತಿ, ಜನಾಂಗದವರ ಶಾಪ ನಿಮಗೆ ತಟ್ಟದೇ ಬಿಡುವುದಿಲ್ಲ. ಬಿಜೆಪಿ ರಾಜಕೀಯ ಮಾಡಲು ಬಂದಿಲ್ಲ, ನಮ್ಮ ಕರ್ತವ್ಯವನ್ನು ನಾವು ಈಡೇರಿಸುತ್ತಿದ್ದೇವೆ ಎಂದು ವಿಜಯೇಂದ್ರ ತಿಳಿಸಿದರು.
ಈ ವೇಳೆ ಪ್ರತಿಪಕ್ಷ ನಾಯಕ ಆರ್.ಅಶೋಕ್, ಮಾಜಿ ಸಿಎಂ ಡಿ.ವಿ.ಸದಾನಂದಗೌಡ, ಮೇಲ್ಮನೆ ಸದಸ್ಯ ಛಲವಾದಿ ನಾರಾಯಣಸ್ವಾಮಿ, ಸಂಸದ ಗೋವಿಂದ ಕಾರಜೋಳ, ರವಿಕುಮಾರ್ ಸೇರಿದಂತೆ ಇನ್ನಿತರರ ಮುಖಂಡರು ಹಾಜರಿದ್ದರು.